Advertisement

ಗ್ರಂಥಾಲಯಗಳು ನೇಪಥ್ಯಕ್ಕೆ!

04:06 PM Sep 14, 2019 | Naveen |

•ಕೆ.ನಾಗರಾಜ್‌
ಕೂಡ್ಲಿಗಿ:
ಅನುದಾನದ ಕೊರತೆಯಿಂದ ತಾಲೂಕಿನ ಬಹುತೇಕ ಗ್ರಂಥಾಲಯಗಳು ಓದುಗರಿಂದ ನೇಪಥ್ಯಕ್ಕೆ ಸರಿದಿದ್ದು ತಾಲೂಕಿನಲ್ಲಿ 35 ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಿದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

Advertisement

ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಗ್ರಂಥಾಲಯಗಳು 1988ರಲ್ಲಿ ಪ್ರಾರಂಭವಾಗಿದ್ದು ಇಲ್ಲಿಗೆ 30 ವರ್ಷಗಳೇ ಕಳೆದಿವೆ. ಆದರೆ ಗ್ರಂಥಾಲಯಗಳು ಮಾತ್ರ ಇದ್ದ ಸ್ಥಿತಿಯಲ್ಲಿಯೇ ಇವೆ. ತಾಲೂಕಿನಲ್ಲಿ 35 ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಿದ್ದು ಎಲ್ಲವೂ ಕಾರ್ಯನಿರ್ವಹಿಸುತ್ತಿದ್ದರೂ ಅನುದಾನದ ಕೊರತೆಯಿಂದ ಓದುಗರಿಗೆ ಗ್ರಂಥಾಲಯಗಳ ಮೂಲ ಉದ್ದೇಶವೇ ಸಾಕರವಾಗಿಲ್ಲ. ಮೊದಲು ಗ್ರಂಥಾಲಯ ಮೇಲ್ವಿಚಾರಕರಿಗೆ ಮೊದಲು 500 ರೂಪಾಯಿ ನೀಡುತ್ತಿದ್ದರು. ಈಗ 7 ಸಾವಿರ ಮಾಸಿಕ ವೇತನ ನೀಡುತ್ತಿರುವುದಷ್ಟೇ ಸಮಾಧಾನಕಾರ ಸಂಗತಿಯಾಗಿದೆ.

ಆಗಸ್ಟ್‌ 2016ರಲ್ಲಿ ಕಾರ್ಮಿಕ ಇಲಾಖೆಯಿಂದ ಗ್ರಂಥಾಲಯ ಮೇಲ್ವಿಚಾರಕರಿಗೆ 13,200 ನೀಡಬೇಕೆಂದು ಆದೇಶ ನೀಡಿತ್ತು. ಆದರೆ ಇಲ್ಲಿಯವರೆಗೂ ಈ ವೇತನ ಮೇಲ್ವಿಚಾರಕರಿಗೆ ಸಿಗುವಂತಿಲ್ಲ. ತಾಲೂಕಿನಲ್ಲಿ ಗುಡೇಕೋಟೆ, ಚಿಕ್ಕಜೋಗಿಹಳ್ಳಿ, ಕೆ.ಅಯ್ಯನಹಳ್ಳಿ, ರಾಂಪುರ, ಉಜ್ಜಿನಿ ಗ್ರಾಮಗಳಲ್ಲಿ ಮಾತ್ರ ಸ್ವಂತ ಕಟ್ಟಡಗಳಿದ್ದು ಉಳಿದಂತೆ ಎಲ್ಲ ಗ್ರಂಥಾಲಯಗಳು ಶಿಕ್ಷಣ ಇಲಾಖೆ ಶಾಲಾ ಕಟ್ಟಡಗಳು, ಗ್ರಾಮದ ಸಮುದಾಯ ಭವನ ಮುಂತಾದ ಕಟ್ಟಡಗಳಲ್ಲಿ ನಡೆಯುತ್ತಿವೆ. ಹ್ಯಾಳ್ಯಾ ಮತ್ತು ದೂಪದಹಳ್ಳಿ ಗ್ರಾಮಗಳಲ್ಲಿ ಮಾತ್ರ 2 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ.

ಗ್ರಂಥಾಲಯಗಳು ಅನಾಥ ಕೇಂದ್ರಗಳು: ತಾಲೂಕಿನ ನಿಂಬಳಗೆರೆ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕ ಎಂ. ಮಹಾಂತೇಶ್‌ ಅನಾರೋಗ್ಯದಿಂದ 6 ತಿಂಗಳ ಹಿಂದೆ ನಿಧನರಾಗಿದ್ದು ಅಲ್ಲಿಯ ಗ್ರಂಥಾಲಯ ಅನಾಥವಾಗಿದೆ. ಅನೈತಿಕ ಚಟುವಟಿಕೆ ತಾಣವಾಗಿದೆ. ಹಾರಕಬಾವಿ ಗ್ರಂಥಾಲಯ ಮೇಲ್ವಿಚಾರಕ ಸುರೇಶ್‌ 1 ವರ್ಷದ ಹಿಂದೆ ಅನಾರೋಗ್ಯದಿಂದ ನಿಧನವಾಗಿದ್ದರಿಂದ ಅಲ್ಲಿಯೂ ಕೂಡ ಗ್ರಂಥಾಲಯ ಅನಾಥವಾಗಿದೆ. ಬದುಕಿರುವ ಮೇಲ್ವಿಚಾರಕರ ಬದುಕೇ ಬರ್ಬರವಾಗಿದ್ದು ಇನ್ನೂ ನಿಧನರಾಗಿರುವ ಗ್ರಂಥಾಲಯ ಮೇಲ್ವಿಚಾರಕರ ಕುಟುಂಬಗಳ ಗತಿ ಅಧೋಗತಿಯಾಗಿದೆ. ಅನುದಾನದ ಹಾಗೂ ಸುವ್ಯವಸ್ಥಿತ ಕಟ್ಟಡಗಳ ಕೊರತೆಯಿಂದ ಗ್ರಂಥಾಲಯಗಳು ಮೂಲೆ ಸೇರಿದ್ದು ಗ್ರಾಮೀಣ ಭಾಗದ ವಿದ್ಯಾವಂತರಿಗೆ , ವಿದ್ಯಾರ್ಥಿಗಳಿಗೆ ಸೂಕ್ತ ಪತ್ರಿಕೆಗಳು, ಪುಸ್ತಕಗಳು ಸಿಗುತ್ತಿಲ್ಲ. ಗ್ರಂಥಾಲಯ ಮೇಲ್ವಿಚಾರಕರನ್ನು ಕೇಳಿದರೆ ಅನುದಾನ ಇಲ್ಲ ಎನ್ನುವ ಉತ್ತರ ಸಿಗುತ್ತದೆ.

ಗ್ರಾಪಂದಿ ಸೆಸ್‌ ಹಣ ನೀಡುತ್ತಿಲ್ಲ: ಗ್ರಾಪಂಗಳಲ್ಲಿ ಕರವಸೂಲಾತಿಯಲ್ಲಿ ಶೇ. 6ರಷ್ಟು ಗ್ರಂಥಾಲಯಕ್ಕಾಗಿಯೇ ಹಣ ತೆಗೆದುಕೊಂಡಿದ್ದರೂ ಗ್ರಾಮ ಪಂಚಾಯ್ತಿಯವರು ಮಾತ್ರ ಗ್ರಂಥಾಲಯ ಇಲಾಖೆಗೆ ನೀಡದೇ ಇರುವುದರಿಂದ ಗ್ರಂಥಾಲಯಗಳು ಇಂದಿಗೂ ಓದುಗರಿಗೆ ತಲುಪುತ್ತಿಲ್ಲ. ತಾಲೂಕು ಗ್ರಂಥಾಲಯಗಳನ್ನು ಹಾಗೂ ಒಂದೆರಡು ಕೈ ಬೆರಳೆಣಿಕೆಯಷ್ಟು ಗ್ರಾಮ ಪಂಚಾಯ್ತಿ ಗ್ರಂಥಾಲಯಗಳನ್ನು ಬಿಟ್ಟರೆ ಉಳಿದ ಗ್ರಾಮ ಪಂಚಾಯ್ತಿ ಗ್ರಂಥಾಲಯಗಳು ಹೆಸರಿಗಷ್ಟೇ ದಾಖಲೆಗಳಲ್ಲಿ ಉಳಿದಿವೆ.

Advertisement

ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಿಗೆ ಪ್ರತಿ ತಿಂಗಳು 400 ರೂಪಾಯಿ ಗ್ರಂಥಾಲಯ ಇಲಾಖೆಯಿಂದ ಹಣ ನೀಡುತ್ತಾರೆ. ದಿನಪತ್ರಿಕೆಗಳು 2 ರೂಪಾಯಿ ಇದ್ದಾಗ 400 ರೂಪಾಯಿ ಹಣ ಹೊಂದಿಕೆಯಾಗುತ್ತಿತ್ತು. ಆದರೆ ಈಗ ಪತ್ರಿಕೆಗಳ ಬೆಲೆ ಹೆಚ್ಚಾಗಿದ್ದರಿಂದ 400 ರೂಪಾಯಿಗಳಲ್ಲಿ ಯಾವ ಪತ್ರಿಕೆ ತೆಗೆದುಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ಕೇವಲ 2 ದಿನಪತ್ರಿಕೆಗಳು, ಒಂದು ವಾರ ಪತ್ರಿಕೆಯನ್ನು ಗ್ರಂಥಾಲಯಕ್ಕೆ ತೆಗೆದುಕೊಳ್ಳಬಹುದು. ಹಾಗಾಗಿ ತಾಲೂಕಿನಲ್ಲಿ ಎಲ್ಲ ದಿನಪತ್ರಿಕೆಗಳು ಓದುಗರಿಗೆ ತಲುಪಿಸಲು ಗ್ರಂಥಾಲಯಕ್ಕೆ ಅನುದಾನದ ಕೊರತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next