Advertisement

ಸ್ಯಾಂಡಲ್‌ವುಡ್‌ನ‌ತ್ತ ಕುಡ್ಲದ ಕಾಮಿಡಿ ಹುಡುಗ!

12:33 PM Jul 05, 2018 | |

ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ‘ಕಾಮಿಡಿ ಕಿಲಾಡಿಗಳು’ ಮೂಲಕ ರಾಜ್ಯಾದ್ಯಂತ ಸದ್ದು ಮಾಡಿದ ಹುಡುಗ ಮಂಗಳೂರಿನ ಸೂರಜ್‌ ಪಾಂಡೇಶ್ವರ ಈಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆಯುವ ಸಿದ್ಧತೆಯಲ್ಲಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಅವರು ಕರಾವಳಿ ಭಾಗದಲ್ಲಂತೂ ತುಂಬಾ ಅಭಿಮಾನಿಗಳನ್ನು ಸೃಷ್ಟಿಸಿದ್ದಾರೆ.

Advertisement

ಪಟಪಟನೆ ಕಾಮಿಡಿಯಾಗಿ ಮಾತನಾಡುವ ಮೂಲಕವೇ ಪ್ರಸಿದ್ಧಿ ಪಡೆದ ಸೂರಜ್‌ ಈಗ ಪುನೀತ್‌ ರಾಜ್‌ಕುಮಾರ್‌ ಅವರ ಹೊಸ ಸಿನೆಮಾದಲ್ಲಿ ಅಭಿನಯಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಜತೆಗೆ ಪ್ರಜ್ವಲ್‌ ದೇವರಾಜ್‌ ಅವರ ಜತೆಗೂ ಒಂದು ಸಿನೆಮಾ ಮಾಡುವುದಕ್ಕೆ ಪ್ಲ್ರಾನಿಂಗ್‌ ನಡೆಸುತ್ತಿದ್ದಾರೆ. ಅಂದಹಾಗೆ, ಪಾಂಡೇಶ್ವರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಹಾಗೂ ರಾಷ್ಟ್ರೀಯ ಪವರ್‌ ಲಿಫ್ಟರ್‌ ಆಗಿ 11 ಬಾರಿ ಮೆಡಲ್‌ ಪಡೆದ ಚಾಂಪಿಯನ್‌ ಸುನೀಲ್‌ ಕುಮಾರ್‌ ಹಾಗೂ ರೇಖಾ ಸುವರ್ಣ ಅವರ ಪುತ್ರ ಸೂರಜ್‌ ಕುಮಾರ್‌ ವಿಭಿನ್ನ ನಟನೆಯ ಮೂಲಕ ಹಾಸ್ಯದ ರಸದೌತಣ ನೀಡಿದವರು. 

ನಾಟಕ, ಯಕ್ಷಗಾನ, ಸಿನೆಮಾ ಹೀಗೆ ಬೇರೆ ಬೇರೆ ಕಲಾಪ್ರಕಾರಗಳಲ್ಲಿ ತೊಡಗಿಸಿಕೊಂಡ ಅವರ ವಯಸ್ಸು ಕೇವಲ 19. ನಾಟಕದಲ್ಲಿ ಕಾಮಿಡಿ ಲುಕ್‌ ನಲ್ಲಿಕಾಣಿಸಿ ಕೊಂಡ ಅವರು ಅನಂತರ ‘ಬಲೆ ತೆಲಿಪಾಲೆ’ ಮೂಲಕವೂ ಕರಾವಳಿಯಾದ್ಯಂತ ಚಿರಪರಿಚಿತರಾದರು. ವಿಜಯ್‌ ಕುಮಾರ್‌ ಕೊಡಿಯಾಲ್‌ ಬೈಲ್‌ ಅವರ ನಿರ್ದೇಶನದ ‘ಕಡಲ ಮಗೆ’, ಆ ಬಳಿಕ ಬಂದ ‘ಪತ್ತನಾಜೆ’, ‘ಅರೆ ಮರ್ಲೆರ್‌’ ಸಿನೆಮಾದಲ್ಲೂ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ.

ಸದ್ಯ ಟಾಕೀಸಿನಲ್ಲಿರುವ ‘ಅಮ್ಮೆರ್‌ ಪೊಲೀಸಾ’ ಹಾಗೂ ಶೀಘ್ರ ಬಿಡುಗಡೆಯಾಗಲಿರುವ ‘ಉಮಿಲ್‌’, ‘ಕಟಪಾಡಿ ಕಟ್ಟಪ್ಪೆ’ ಸಿನೆಮಾದಲ್ಲೂ ಅಭಿನಯಿಸಿದ್ದಾರೆ. ಸಣ್ಣ ಪ್ರಾಯದಲ್ಲಿಯೇ ಅಭಿನಯದಿಂದ ಗಮನ ಸೆಳೆದ ಸೂರಜ್‌ ಅವರಿಗೆ ಹಿರಿಯ ಕಲಾವಿದ ಜಿ.ಎ. ಬೋಳೂರು ಅವರಿಂದ ‘ಕಲಾ ಭಾರ್ಗವ’ ಎಂಬ ಬಿರುದು ಪ್ರಾಪ್ತವಾಗಿದೆ. ಸದ್ಯ ಸೂರಜ್‌ ರಾಜ್ಯಾದ್ಯಂತ ಕಾಮಿಡಿ ಹುಡುಗ ಎಂದೇ ಫೇಮಸ್‌.

Advertisement

Udayavani is now on Telegram. Click here to join our channel and stay updated with the latest news.

Next