ಮಹಾನಗರ: ತುಳುನಾಡಿನ ಸಾಂಸ್ಕೃತಿಕ ಕಲೆಯಾದ ಹುಲಿವೇಷದ ಹಿರಿಮೆಯನ್ನು ಜಗದಗಲ ಪರಸರಿಸುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ “ಕುಡ್ಲದ ಪಿಲಿ ಪರ್ಬ’ ಎಂಬ ವಿನೂತನ ಕಾರ್ಯಕ್ರಮ ಆಯೋಜನೆಗೆ ನಗರದಲ್ಲಿ ಸಿದ್ಧತೆಗಳು ನಡೆಯುತ್ತಿದೆ.
ಸಂಸದ ನಳಿನ್ ಕುಮಾರ್ ಕಟೀಲು ಅವರ ಮಾರ್ಗದರ್ಶನ, ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿ ಷ್ಠಾನದ ಆಶ್ರಯದಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಅ. 2ರಂದು ಕುಡ್ಲದ ಪಿಲಿಪರ್ಬ 2022 ಹುಲಿ ವೇಷ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ರೂಪರೇಖೆಗಳು ಸಿದ್ಧಗೊಳ್ಳುತ್ತಿವೆ.
ಸಾಂಪ್ರದಾಯಿಕವಾಗಿ ಹಿಂದಿನ ಕಾಲದಲ್ಲಿ ಯಾವ ರೀತಿ ಹುಲಿ ವೇಷಕ್ಕೆ ಮುಖ ಬಣ್ಣ ಹಾಕುತ್ತಿದ್ದರೋ, ತಲೆಗೆ ಹಾಕುವ ಸಾಂಪ್ರದಾಯಿಕ ಟೋಪಿ, ಹುಲಿ ಕುಣಿತ ಯಾವ ರೀತಿ ಇತ್ತೋ ಅದೇ ರೀತಿಯಲ್ಲಿ ಸ್ಪರ್ಧೆ ನಡೆಯಲಿದೆ. ಕುಣಿತದಲ್ಲಿ ಕಸರತ್ತು, ಪಲ್ಟಿಗೆ ಹೆಚ್ಚಿನ ಪಾಯಿಂಟ್ ಇರುವುದಿಲ್ಲ. ಅದರ ಬದಲಾಗಿ ಚೆಂಡೆ ಮತ್ತು ತಾಳಕ್ಕೆ ತಕ್ಕ ಕುಣಿತಕ್ಕೆ ಅಂಕ ನಿಗದಿಪಡಿಸಲಾಗುತ್ತದೆ. ಎಷ್ಟು ತಂಡ ಭಾಗವಹಿಸುತ್ತದೆ, ಒಂದು ತಂಡದಲ್ಲಿ ಎಷ್ಟು ಮಂದಿ ಇರಲಿದ್ದಾರೆ ಮುಂತಾದ ವಿವರ ಕೆಲವು ದಿನಗಳಲ್ಲಿ ಗೊತ್ತಾಗಲಿದೆ.
ಹುಲಿ ವೇಷದ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಸ್ಪರ್ಧೆ ನಡೆಯಲಿದ್ದು, ಕರಾವಳಿಯ ವಿವಿಧ ಹುಲಿ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹುಲಿವೇಷಕ್ಕೆ ಪ್ರೋತ್ಸಾಹ: ಕರಾವಳಿಯ ಸಾಂಪ್ರದಾಯಿಕ ಕಲೆಯಾದ ಹುಲಿವೇಷಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕುಡ್ಲದ ಪಿಲಿ ಪರ್ಬ ಎಂಬ ಸ್ಪರ್ಧೆ ಆಯೋಜಿಸಿದ್ದೇವೆ. ಹಲವು ತಂಡಗಳು ಈಗಾಗಲೇ ನಮ್ಮನ್ನು ಸಂಪರ್ಕಿಸಿದ್ದಾರೆ. ಸಾವಿರಾರು ಮಂದಿ ಆಗಮಿಸುವ ನಿಟ್ಟಿನಲ್ಲಿ ಸುತ್ತಲೂ ಗ್ಯಾಲರಿ ಅಳವಡಿಸಿ ವಿನೂತನ ವೇದಿಕೆ ನಿರ್ಮಿಸಿ ಸ್ಪರ್ಧೆ ಆಯೋಜಿಸಲಿದ್ದೇವೆ. ಪ್ರತೀ ಸ್ಪರ್ಧೆಗೆ ಪ್ರತ್ಯೇಕ ನಿಯಮಗಳನ್ನು ರೂಪುಗೊಳಿಸುತ್ತಿದ್ದೇವೆ. –
ಡಿ. ವೇದವ್ಯಾಸ ಕಾಮತ್, ಶಾಸಕರು