ಬಳ್ಳಾರಿ: ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಖಾಸಗಿ ಶಾಲೆಗಳ ಹಾವಳಿ ನಡುವೆ ತಾಲೂಕಿನ ಕುಡತಿನಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆ ನೀಡುತ್ತಿದೆ. ಸ್ಮಾರ್ಟ್ ಕ್ಲಾಸ್ ಸೇರಿ ಅಗತ್ಯ ಸೌಲಭ್ಯ ಹೊಂದಿರುವ ಶಾಲೆಯಲ್ಲಿ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಿದ್ದಾರೆ.
ಜಿಲ್ಲಾ ಉಪನಿರ್ದೇಶಕರಿಂದ ಮೆಚ್ಚುಗೆ ವ್ಯಕ್ತವಾಗಿರುವ ಈ ಶಾಲೆಯಲ್ಲಿ ಪ್ರಸಕ್ತ ವರ್ಷ 150 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ತಾಲೂಕಿನ ಕುಡತಿನಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 580 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 8 ದೊಡ್ಡ ಕೊಠಡಿಗಳು ಸೇರಿ ಒಟ್ಟು 26 ಕೊಠಡಿಗಳಿವೆ. 1 ಸ್ಮಾರ್ಟ್ ಕ್ಲಾಸ್ ಇದ್ದು, ಬೃಹತ್ ಎಲ್ ಇಡಿ ಟಿವಿ ಅಳವಡಿಸಲಾಗಿದೆ. ಆರು ವಿಷಯಗಳಿಗೆ ಬೋಧಿಸಲು 17 ಶಿಕ್ಷಕರಿದ್ದಾರೆ. ನಲಿ-ಕಲಿಗೆ ರೌಂಡ್ ಟೇಬಲ್ ಸೇರಿ ಅಗತ್ಯ ವಸ್ತುಗಳಿದ್ದು, ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಶಾಲೆಯಲ್ಲಿ ಯಾವುದೇ ಕೊರತೆಗಳಿಲ್ಲ. ಆಟಕ್ಕೆ ಸುಸಜ್ಜಿತವಾದ ಮೈದಾನ, ಕುಡಿವ ನೀರು ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಸಹ ಕಲ್ಪಿಸಲಾಗಿದೆ ಎನ್ನುತ್ತಾರೆ ಪ್ರಭಾರಿ ಮುಖ್ಯಶಿಕ್ಷಕಿ ಪಾರ್ವತಿ.
ಶಾಲೆಯಲ್ಲಿ ಒಂದು ಕೊಠಡಿಯನ್ನು ಓದುವ ಕೋಣೆಯನ್ನಾಗಿ ನಿಗದಿಪಡಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳಿಗೆ ಈ ಕೋಣೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಹೇಳಿ ಕೊಡಲಾಗುತ್ತದೆ. ಜತೆಗೆ ಸ್ಮಾರ್ಟ್ ಕ್ಲಾಸ್‌ನಲ್ಲಿ ಅಳವಡಿಸಲಾಗಿರುವ ಎಲ್‌ಇಡಿ ಟಿವಿಯಲ್ಲಿ ಸಿಡಿ, ಪೆನ್‌ಡ್ರೈವ್ ಅಥವಾ ಯೂಟ್ಯೂಬ್ ಮೂಲಕ ವಿದ್ಯಾರ್ಥಿಗಳಿಗೆ ದೃಶ್ಯಗಳನ್ನು ತೋರಿಸುವ ಮೂಲಕ ಪಾಠಗಳನ್ನು ಮಾಡಿ ಅವರಿಗೆ ಇನ್ನಷ್ಟು ಮನದಟ್ಟಾಗುವಂತೆ ಹೇಳಿಕೊಡಲಾಗುತ್ತದೆ. ಶಾಲೆಯಲ್ಲಿ ಈಚೆಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಆರಂಭಿಸಲಾಗಿದ್ದು, ಒಟ್ಟು 40 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಕೆಡೆಟ್ ಸೇರಿದ್ದಾರೆ. ಇದರಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸಲಾಗುತ್ತಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ವಿದ್ಯಾರ್ಥಿಗಳನ್ನೇ ನೇರವಾಗಿ ಗ್ರಾಪಂ ಕಚೇರಿ, ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗೆ ಕರೆದೊಯ್ಯುವ ಮೂಲಕ ಅಲ್ಲಿನ ವಾತಾವರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಶಾಲೆಯಲ್ಲಿ ಪ್ರಸಕ್ತ ವರ್ಷ 1ನೇ ತರಗತಿಗೆ 30, 6ನೇ ತರಗತಿಗೆ 120 ಸೇರಿ ಒಟ್ಟು 150 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನುಳಿದಂತೆ 2ನೇ ತರಗತಿಗೆ 32, 3ನೇ ತರಗತಿಗೆ 39, 4ನೇ ತರಗತಿಗೆ 44, 5ನೇ 46, 7ನೇ 101, 8ನೇ ತರಗತಿಗೆ 168 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 2019ರಲ್ಲಿ 650, 2018ರಲ್ಲಿ 750 ದಾಟಿತ್ತು. ಪ್ರಸಕ್ತ ವರ್ಷವೂ 700ರ ಸಂಖ್ಯೆ ದಾಟಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಕೋವಿಡ್ ಸೋಂಕು ಇದಕ್ಕೆ ಬ್ರೇಕ್ ಹಾಕಿದೆ.
ಅಲ್ಲದೇ, ವಸತಿ ನಿಲಯಗಳಲ್ಲಿನ ಹಲವಾರು ವಿದ್ಯಾರ್ಥಿಗಳು ಟಿಸಿ ಪಡೆದು ಹೊರ ಹೋಗಿದ್ದಾರೆ. ಇಲ್ಲದಿದ್ದರೆ ಈ ಬಾರಿಯೂ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿತ್ತು. ಶಾಲೆಯಲ್ಲಿನ ಕಲಿಕೆ, ವ್ಯವಸ್ಥೆ ನೋಡಿ ಉಪನಿರ್ದೇಶಕರು, ವಿಷಯ ನಿರೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಪ್ರಭಾರಿ ಮುಖ್ಯಶಿಕ್ಷಕಿ ಪಾರ್ವತಿ.
ಕುಡತಿನಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕಲಿಕೆ ತುಂಬಾ ಚೆನ್ನಾಗಿದೆ. ಹೀಗಾಗಿ ಖಾಸಗಿ ಶಾಲೆಗಳ ಪ್ರಭಾವದ ನಡುವೆಯೂ ನಮ್ಮ ಶಾಲೆಯಲ್ಲಿ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಾರೆ. ಸ್ಮಾರ್ಟ್ ಕ್ಲಾಸ್ ಇದ್ದು, ಎಲ್ ಇಡಿ ಟಿವಿ ಮೂಲಕ ವಿದ್ಯಾರ್ಥಿಗಳಿಗೆ ಪಾಠಮಾಡಲಾಗುತ್ತದೆ. ಶಾಲೆಯಲ್ಲಿ ಈ ಎಲ್ಲ ಸೌಲಭ್ಯಗಳು ಇರುವುದರಿಂದ ಅರ್ಧಕ್ಕೆ ಶಾಲೆ ಬಿಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.
–ಪಾರ್ವತಿ, ಪ್ರಭಾರಿ ಮುಖ್ಯಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕುಡತಿನಿ
ವೆಂಕೋಬಿ ಸಂಗನಕಲ್ಲು