ಹೈದರಾಬಾದ್: ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೊರಟಿದ್ದ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳಿಗೆ ಭಾರೀ ಶಾಕ್ ಕಾದಿತ್ತು. ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿ, ಹೈದರಾಬಾದ್ ಮೆಟ್ರೊಪಾಲಿಟನ್ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಶಿವಬಾಲಕೃಷ್ಣಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 400 ಕೋಟಿ ರೂ. ಮೊತ್ತದ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಧಿಕಾರಿಯ ಮನೆಯಲ್ಲಿ ಕುಬೇರನ ಖಜಾನೆಯೇ ಪತ್ತೆಯಾಗಿದೆ.
ಅನೇಕ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಪರ್ಮಿಟ್‌ಗಳನ್ನು ನೀಡುವ ಮೂಲಕ ಅಕ್ರಮವಾಗಿ ಕೋಟ್ಯಾಂತರ ರೂಪಾಯಿಗಳನ್ನು ಬಾಲಕೃಷ್ಣ ಗಳಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಎಸಿಬಿ ಅಧಿಕಾರಿಗಳು ಬಾಲಕೃಷ್ಣ ಮತ್ತು ಅವರ ಸಂಬಂಧಿಕರ ಮನೆಗಳು, ಕಚೇರಿಗಳು ಸೇರಿದಂತೆ ಒಟ್ಟು 20 ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದರು. ಗುರುವಾರ ಮುಂಜಾನೆ 4 ಗಂಟೆವರೆಗೆ ಶೋಧ ಕಾರ್ಯ ನಡೆಯಿತು.
ದಾಳಿ ವೇಳೆ 84 ಲಕ್ಷ ರೂ. ನಗದು, 2 ಕೆಜಿ ಚಿನ್ನಾಭರಣ, 5.5 ಕೆಜಿ ಬೆಳ್ಳಿ ಆಭರಣಗಳು, 73 ಐಷಾರಾಮಿ ವಾಚ್‌ಗಳು, 3 ವಿಲ್ಲಾಗಳು, 3 ಪ್ಲ್ರಾಟ್‌ಗಳು ಮತ್ತು 90 ಎಕರೆ ಭೂಮಿಯ ಆಸ್ತಿ ದಾಖಲೆಗಳು, ಬ್ಯಾಂಕ್ ಖಾತೆ ವಿವರಗಳು, ಆ್ಯಪಲ್ ಕಂಪನಿಯ 14 ಮೊಬೈಲ್ ಫೋನ್‌ಗಳು, 10 ಲ್ಯಾಪ್‌ಟಾಪ್‌ಗ್ಳು ಹಾಗೂ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್‌ಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇವುಗಳ ಮಾರುಕಟ್ಟೆ ಮೌಲ್ಯ ಸುಮಾರು 400 ಕೋಟಿ ರೂ.ಗಳು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಭ್ರಷ್ಟನ ಮನೆಯಲ್ಲಿ ಏನೇನು ಪತ್ತೆ?
84 ಲಕ್ಷ ರೂ.- ಪತ್ತೆಯಾದ ನಗದು
2 ಕೆಜಿ- ಚಿನ್ನದ ಆಭರಣಗಳ ಪ್ರಮಾಣ
73- ಐಷಾರಾಮಿ ವಾಚ್‌ಗಳು
14- ಆ್ಯಪಲ್ ಫೋನ್‌ಗಳು
10- ಲ್ಯಾಪ್‌ಟಾಪ್‌ಗಳು
80 ಎಕರೆ- ಜಮೀನು