Advertisement

ಕುಬಣೂರು ಶ್ರೀಧರ ರಾಯರು ಯಕ್ಷ-ಭೃಂಗ ನಾದ ಮರೆಯಾಗಿದೆ

10:18 AM Sep 23, 2017 | Team Udayavani |

ಭಾಗವತ ಕುಬಣೂರು ಶ್ರೀಧರ ರಾಯರಿಗೆ ಬಂದ ಬದುಕು ಪ್ರಯಾಸದ್ದು; ದೊರೆತ ಸಾವು ನಿರಾಯಾಸವಾದದ್ದು. ಅವರು ಬಿಟ್ಟ ಶೂನ್ಯವು ತುಂಬಲಾರದ್ದು. ಶ್ರೀಧರ ರಾಯರ ಬದುಕು ಅವರೇ ಕಟ್ಟಿದ್ದಾಗಿತ್ತು. ಜೀವನದ ಕಟುವಾಸ್ತವದ ಕರಾಳ ನೆರಳಿನಲ್ಲಿ, ತನ್ನ ಮಾವ ಕುಬಣೂರು ಪರಮೇಶ್ವರ ಬಳ್ಳಕ್ಕುರಾಯರ ಆಶ್ರಯದಲ್ಲಿ, ಅದೂ ಸಾಂಸ್ಕೃತಿಕವಾಗಿ ಪರಿಪುಷ್ಟ ವಾದ ವಾತಾವರಣದಲ್ಲಿ ಬೆಳೆದ ಶ್ರೀಧರ ರಾಯರು ಹದಿಹರೆಯದಲ್ಲೇ  ಶಾಸ್ತ್ರೀಯ ಸಂಗೀತದ ಪ್ರವೇಶ ಪಡೆದರು. ಜತೆ ಜತೆಗೇ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ ಗಳಿಸಿದರು. ಮೊದಲಿಗೆ ಗುರು ಗೋಪಾಲಕೃಷ್ಣ ಮಯ್ಯ ಎಂಬವರಿಂದ ಭಾಗವತಿಕೆಯ ಪಾಠ ಹೇಳಿಸಿಕೊಂಡರು. ಆ ಬಳಿಕ ದಾಮೋದರ ಮಂಡೆಚ್ಚರಿಂದ ಪ್ರಭಾವಿಸಲ್ಪಟ್ಟು, ಅವರದೇ ಶೈಲಿಯೊಡನೆ ತಮ್ಮ ಸ್ವೋಪಜ್ಞತೆಯನ್ನೂ ಸೇರಿಸಿ ಬನಿಯಾದ ಗಾನ ಸುಧೆಯನ್ನು ಹರಿಸುವ ಭಾಗವತರಾಗಿ ಬೆಳೆದರು. 

Advertisement

ವ್ಯಕ್ತಿಯ ವ್ಯಕ್ತಿತ್ವ ಆತನ ನಡೆ, ನುಡಿ ಮತ್ತು ಅಭಿವ್ಯಕ್ತಿಯಲ್ಲಿ ಬಿಂಬಿತವಾಗುತ್ತದೆ. ಇದನ್ನು ಸೂಕ್ಷ್ಮ ನೋಟದಲ್ಲಿ ಕಾಣಬಹುದು. ಕುಬಣೂರು ಶ್ರೀಧರ ರಾಯರ ಕಲಾಭಿವ್ಯಕ್ತಿ ಅವರ ವ್ಯಕ್ತಿತ್ವದ ಪಡಿಯಚ್ಚು. ಮೃದುವಾದ ಸ್ವರ- ಮೃದು ಮತ್ತು ಸಂಕೋಚದ ಮನಸ್ಸು. ಅವರ ಶಾರೀರದ ಮೃದುತ್ವಕ್ಕೆ ತಕ್ಕಂತಹ ಗಾಯನ ಶೈಲಿ ತೆಂಕುತಿಟ್ಟು ಯಕ್ಷಗಾನದಲ್ಲಿ ಪ್ರತ್ಯೇಕ ಸ್ಥಾನ ಪಡೆದಿತ್ತು. `ದಾಕ್ಷಿಣ್ಯನಿಧಿರಾತ್ಮಾಧೀನಮಕರೋತ್‌’ ಎಂಬ ಕವಿವಾಣಿಯಂತೆ ತಮ್ಮ ದಾಕ್ಷಿಣ್ಯಪ್ರವೃತ್ತಿಯಿಂದ ಇತರರ ಮನವನ್ನು ಸೂರೆಗೊಳ್ಳುವ ಅತೀ ವಿರಳ ವ್ಯಕ್ತಿತ್ವ ಅವರದು. 

ತಮ್ಮ ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಔಚಿತ್ಯಪೂರ್ಣ ವಾಗಿ ಯಕ್ಷಗಾನ ಭಾಗವತಿಕೆಗೆ ಅಳವಡಿಸಿಕೊಂಡಿದ್ದರು- ನಾತಿಹೃಸ್ವ ನಾತಿದೀರ್ಘ‌. ಕೃಷ್ಣ ಸಂಧಾನ ಪ್ರಸಂಗದಲ್ಲಿ ಝಂಪೆ ತಾಳದ ಆದರಾ ಪಾಂಡುಸುತರು ಪದ್ಯಕ್ಕೆ ಕದನ ಕುತೂಹಲ ರಾಗದ ಅಳವಡಿಕೆ ಇತ್ಯಾದಿಯಾಗಿ ಅನನ್ಯವಾಗಿ, ಸಂದರ್ಭ ಸಮುಚಿತವಾಗಿ ಗಾನವನ್ನು ಪ್ರಸ್ತುತಗೊಳಿಸುತ್ತಿದ್ದರು. 

ಉಲ್ಲೇಖ ಮಾಡಲೇಬೇಕಾದ ಒಂದಂಶ: ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತರಾಗಿ ಅವರು ಶ್ರೀದೇವೀ ಮಹಾತ್ಮೆ ಪ್ರಸಂಗದಲ್ಲಿನ ಚಂಡ-ಮುಂಡರ ಭಾಗದಲ್ಲಿ ತೋರುತ್ತಿದ್ದ ನಾವೀನ್ಯ. ತೆಂಕುತಿಟ್ಟು ಹಿಮ್ಮೇಳದ ಪರಂಪರೆಯ ಔಚಿತ್ಯಪೂರ್ಣ ಕ್ರಮವಾದ ಚಂಡ-ಮುಂಡರು ಶ್ರೀದೇವಿಯನ್ನು ವರ್ಣಿಸುವ ಸಂದರ್ಭದಲ್ಲಿ ಚೆಂಡೆಯನ್ನು ಬದಿಗಿರಿಸಿ, ಬರಿಯ ಮದ್ದಳೆಯಲ್ಲಿ ಚಂಡ-ಮುಂಡರನ್ನು ಕುಣಿಸುತ್ತಿದ್ದ ಧೀರತೆ – ಇದು ಬಹು ಮುಖ್ಯ ಮತ್ತು ಸದ್ಯದ ಸಂದರ್ಭ ಅನ್ಯತ್ರ ಅಲಭ್ಯ. ಕೌಶಿಕೆಯು ಚಂಡ -ಮುಂಡರ ಮೇಲೆ ಅನಿರ್ವಚನೀಯ ಮಾಯಾವಿಲಾಸ ವನ್ನು ಬೀಸಿ, ಅವರ ಬ್ರಹ್ಮಚರ್ಯದ ಊಧ್ರ್ವ ಪಾತದ ಗತಿಯನ್ನು ಅಧೋಪಾತಕ್ಕೆ ಇಳಿಸುವ ಸನ್ನಿವೇಶವನ್ನು ಪ್ರಧಾನ ಮದ್ದಳೆಗಾರನು ನುಡಿಸುವ ಮದ್ದಳೆಯ ನಾದ ಸೌಖ್ಯದ ಜತೆಗೆ ಮಿಳಿತವಾಗಿ ಸಾಗುವ ತಮ್ಮ ಇಂಪಾದ ಮಧುರ ಗಾನದ ಮೂಲಕ ಪ್ರೇಕ್ಷಕರಿಗೆ ಕಟ್ಟಿಕೊಡುತ್ತಿದ್ದ ಕುಬಣೂರರ ಆ ರಂಗ ವೈಖರಿ ಇನ್ನೆಲ್ಲಿ!

ಚೆಂಡೆಯ ನಾದದೊಂದಿಗಿನ ಅಬ್ಬರಿಸುವ ಚಂಡ-ಮುಂಡರ ಪ್ರಕರಣಕ್ಕಿಂತ ಭಿನ್ನ ನೆಲೆಯಲ್ಲಿ ರಂಗದಲ್ಲಿ ಆ ಸನ್ನಿವೇಶವನ್ನು ಸಾಕ್ಷಾತ್ಕರಿಸುತ್ತಿದ್ದರು ಕುಬಣೂರು ಶ್ರೀಧರ ರಾಯರು. ಇಂಥ ಸ್ವೋಪಜ್ಞತೆ ಅವರೊಂದಿಗೇ ನಿಲ್ಲದಿರಲಿ ಎಂಬ ಆಶಾಭಾವನೆ ನಮ್ಮದು. ಇದು ಧೀರ ಮೂಲನಿಷ್ಠ ವಿಮುಖ ನೋಟ. 

Advertisement

ತುಸು ವೇಗದ ಲಯಗಾರಿಕೆ ಅಳವಡಿಸಿಕೊಂಡ ಶ್ರೀಧರ ರಾಯರಿಗೆ ಈ ಕುರಿತು ವಿಷಾದ ಇತ್ತು. ಈ ಅಭಿವ್ಯಕ್ತಿ ಅವರ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಕಳೆದ ವರುಷ ಕಟೀಲಿನಲ್ಲಿ ಜರುಗಿದ ಅವರ ಅಭಿನಂದನೆಯ ಸಂದರ್ಭದಲ್ಲಿ ಬಿಡುಗಡೆಯಾದ ಅವರ ಭಾಗವತಿಕೆಯ ಧ್ವನಿ ತಟ್ಟೆ ಅತ್ಯಂತ ಮೌಲಿಕ ವಾದದ್ದು. ಯಕ್ಷಗಾನದ ಪ್ರತೀ ತಾಳದ, ವಿವಿಧ ಛಂದೋಬಂಧಗಳ ಅನೇಕ ಪದಗಳನ್ನು ಸುಂದರವಾಗಿ, ನಿಧಾನ ಲಯದಲ್ಲಿ ಮಗುವಿನಂತೆ ಪಟ್ಟಾಗಿ ಅಭ್ಯಾಸ ಮಾಡಿ ಹಾಡಿದ್ದಾರೆ. ಇದರಲ್ಲಿ ವಿರಳವಾದ ಹದಿನಾರಕ್ಷರದ ಶಾಸ್ತ್ರೀಯ ತಿಶ್ರಮಠ್ಯ ತಾಳಕ್ಕೆ ಸಂಬಂಧವಿರುವ ಚೌತಾಳದ ಪದವನ್ನೂ ಹಾಡಿದ್ದಾರೆ. ಛಾಂದಸ ರಾದ ಗಣೇಶ ಕೊಲೆಕಾಡಿಯವರ ಸಲಹೆಯೂ ಈ ಧ್ವನಿ ತಟ್ಟೆಗಿದೆ.

ವಿದ್ಯೆಗೆ ಮುಡಿಬಾಗುವ ಸಹೃದಯತೆ, ರಂಗದಲ್ಲಿ ಕಲಾವಿದನ ಯೋಗ್ಯತೆಯನ್ನು ಗುರುತಿಸುವ ಸಜ್ಜನಿಕೆ, ರಂಗದಲ್ಲಿ ಸಂಭವಿಸುವ ಅಪಭ್ರಂಶಗಳನ್ನು ಅನಿವಾರ್ಯವಾಗಿ ಸಹಿಸುವ ಸಂಯಮ ಮಾತ್ರವಲ್ಲ, ತಿದ್ದುವ ಗುರುತ್ವ ಇವೆಲ್ಲ ಮೇಳೈಸಿದ ಸರಳ ಜಾನಪದೀಯ ಹೊರಮುಖದ, ಆಧುನಿಕ ಪ್ರಜ್ಞೆಯ ಸರಳ ವ್ಯಕ್ತಿತ್ವ ನಮ್ಮನ್ನಗಲಿದ ಕುಬಣೂರು ಶ್ರೀಧರ ರಾಯರದು. ಯಕ್ಷಗಾನಕ್ಕೆ ಅವರು ಕೊಟ್ಟ ಕೊಡುಗೆ ಗಾಯನವನ್ನೊಳಗೊಂಡ ಅವರ ವ್ಯಕ್ತಿತ್ವ ಮತ್ತು ಸರಳ ಸುಂದರ `ಯಕ್ಷಪ್ರಭಾ’ ಮಾಸಪತ್ರಿಕೆ. 

ಕುಬಣೂರು ಶ್ರೀಧರ ರಾಯರು ನಮ್ಮೆಲ್ಲರ ಮನೋಸಾಮ್ರಾಜ್ಯದ ಭಾಗವಾಗಿ ಸದಾ ಇರುತ್ತಾರೆ. 

ಕೃಷ್ಣಪ್ರಕಾಶ ಉಳಿತ್ತಾಯ

ಚಿತ್ರ: ನಟೇಶ್‌ ವಿಟ್ಲ

Advertisement

Udayavani is now on Telegram. Click here to join our channel and stay updated with the latest news.

Next