Advertisement

ಕೊನೆಗೂ ಕೆಎಸ್ಸಾರ್ಟಿಸಿ ಸಿಟಿ ಬಸ್‌ ನಿಲ್ದಾಣ ಉದ್ಘಾಟನೆಗೆ ಸಜ್ಜು

12:52 AM Feb 17, 2020 | Sriram |

ಉಡುಪಿ: ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ನೂತನ ಕೆಎಸ್‌ಆರ್‌ಟಿಸಿ ಸಿಟಿ ಬಸ್‌ ತಂಗುದಾಣ ಉದ್ಘಾಟನೆಗೆ ಸಜ್ಜುಗೊಂಡಿದೆ. ಮುಂದಿನ ತಿಂಗಳು ಉದ್ಘಾಟನೆ ಬಹುತೇಕ ಖಚಿತವಾಗಿದ್ದು ದಿನ ಗೊತ್ತುಪಡಿಸುವುದಷ್ಟೇ ಬಾಕಿ ಇದೆ. ಇದೀಗ ಬಸ್‌ನಿಲ್ದಾಣದ ವಾಣಿಜ್ಯ ಸಂಕೀರ್ಣದ ಅಂಗಡಿ ಕೊಠಡಿಗಳ ಹರಾಜಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ಆರಂಭಗೊಂಡಿದೆ.

Advertisement

4 ಕೋಟಿ ರೂ. ವೆಚ್ಚ
ಬಹುನಿರೀಕ್ಷಿತ ನೂತನ ಸಿಟಿ ಬಸ್‌ ನಿಲ್ದಾಣ ವಿಶಾಲವಾಗಿದೆ. 41 ಸೆಂಟ್ಸ್‌ ಜಾಗದಲ್ಲಿ 4 ಕೋ.ರೂ ವೆಚ್ಚದಲ್ಲಿ ಬಸ್‌ ನಿಲ್ದಾಣ ನಿರ್ಮಾಣಗೊಂಡಿದೆ. ನಿಲ್ದಾಣವು 3 ಅಂತಸ್ತುಗಳನ್ನು ಹೊಂದಿದೆ. ನೆಲಅಂತಸ್ತಿನಲ್ಲಿ 6,814 ಚದರಡಿ ವಿಸ್ತೀರ್ಣ ಹೊಂದಿದೆ. ಎರಡನೆಯ ಅಂತಸ್ತು 5,807 ಚದರಡಿ ವಿಸ್ತೀರ್ಣವಿದೆ. ಮೊದಲ ಅಂತಸ್ತು 5,637 ಚದರಡಿ ವಿಸ್ತೀರ್ಣ ಹೊಂದಿದ್ದು ಕಟ್ಟಡದ ಒಟ್ಟು ವಿಸ್ತೀರ್ಣವು 18,258 ಚದರಡಿ ಇದೆ.

ಮೂರು ವರ್ಷ
2017ರ ಅಕ್ಟೋಬರ್‌ನಲ್ಲಿ ನಿಲ್ದಾಣದ ಕಾಮಗಾರಿಗೆ ಸಚಿವರಾಗಿದ್ದ ಪ್ರಮೋದ್‌ ಮಧ್ವರಾಜ್‌ ಚಾಲನೆ ನೀಡಿದ್ದರು. ಮೂರು ವರ್ಷದ ಬಳಿಕ ಇದೀಗ ಉದ್ಘಾಟನೆಗೆ ಸಿದ್ಧವಾಗಿದೆ. ಕ್ಯಾಂಟೀನ್‌ ಸಹಿತ ಇನ್ನಿತರ ವಸ್ತುಗಳ ಮಾರಾಟದ ಅಂಗಡಿಗಳು ಈ ಮಳಿಗೆಯಲ್ಲಿ ಒಳಗೊಂಡಿವೆ. ಮೂರು ಹಂತಗಳಲ್ಲಿ ಒಟ್ಟು 11,328 ಚದರಡಿ ವಿಸ್ತೀರ್ಣ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆಂದು ಮೀಸಲಿರಿಸಲಾಗಿದೆ.

10 ಬಸ್‌ ಏಕಕಾಲದಲ್ಲಿ ನಿಲುಗಡೆ
ಕಟ್ಟಡದ ತಳಂತಸ್ತಿನಲ್ಲಿ ಏಕಕಾಲದಲ್ಲಿ 10 ಬಸ್ಸುಗಳು ನಿಲುಗಡೆಯಾಗಲು ವ್ಯವಸ್ಥೆ ಕಲ್ಪಿಸಲಾಗಿದೆ. 12 ಕಾರು ಹಾಗೂ 20 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗಾಗಿ ಇರುವ ತಂಗುದಾಣ ಸಹಿತ ಕಟ್ಟಡಕ್ಕೆ ಎಸಿ, ಟಿವಿ ಅಳವಡಿಸುವ ಬಗ್ಗೆ ಚಿಂತನೆ ಇದ್ದರೂ ಅದಿನ್ನೂ ಕಾರ್ಯಗತಕ್ಕೆ ಬಂದಿಲ್ಲ.

2018ಕ್ಕೆ ಮುಗಿಯಬೇಕಿದ್ದ ಕಾಮಗಾರಿ
2016ರಿಂದ ನಗರದಲ್ಲಿ ನರ್ಮ್ ಬಸ್‌ಗಳ ಓಡಾಟ ವಿದೆ. ಜನರಿಗೆ ಹತ್ತಿರವಾಗಿ ಸೇವೆ ನೀಡುತ್ತಿದೆ.

Advertisement

ನಗರದಲ್ಲಿ ಜೆ ನರ್ಮ್ ಸಿಟಿ ಬಸ್‌ಗಳಿಗೆ ನಿಲ್ಲುವುದಕ್ಕೆ ಸೂಕ್ತ ವ್ಯವಸ್ಥೆಗಳಿರಲಿಲ್ಲ. ಈಗ 30 ನರ್ಮ್ ಬಸ್ಸುಗಳು ನಿತ್ಯ ಓಡಾಟ ನಡೆಸುತ್ತಿವೆ. ಆದರೂ ಸಾಕಷ್ಟು ಊರುಗಳಿಗೆ ನರ್ಮ್ ಬಸ್‌ ಓಡಾಟವಿಲ್ಲ, ಎಷ್ಟೋ ಕಡೆಗಳಲ್ಲಿ ಖಾಸಗಿ ಬಸ್ಸುಗಳ ಸಂಚಾರವೂ ಇಲ್ಲ. ಸಿಟಿ ಬಸ್‌ ನಿಲ್ದಾಣವಿಲ್ಲದೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಮನಗಂಡು ನೂತನ ಬಸ್‌ ನಿಲ್ದಾಣ ನಿರ್ಮಿಸಲು ಇಲಾಖೆ ನಿರ್ಧರಿಸಿತ್ತು. 2018ಕ್ಕೆ ಕಾಮಗಾರಿ ಮುಗಿಯಬೇಕಿತ್ತು ಈಗ ಸಿದ್ಧವಾಗಿದೆ.

ಮಾರ್ಚ್‌ನಲ್ಲಿ ಉದ್ಘಾಟನೆ
ಸುಸಜ್ಜಿತ ಸಿಟಿ ಬಸ್‌ ನಿಲ್ದಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಕಟ್ಟಡದ ವ್ಯಾಪಾರ ಮಳಿಗೆಗೆ ಹರಾಜು ಪ್ರಕ್ರಿಯೆ ಟೆಂಡರು ಹಂತದಲ್ಲಿದೆ. ಮಾರ್ಚ್‌ ತಿಂಗಳಲ್ಲಿ ಉದ್ಘಾಟನೆ ನಡೆಸಲಾಗುತ್ತಿದೆ. ದಿನ ಅಂತಿಮವಾಗಿಲ್ಲ.
-ಉದಯ ಶೆಟ್ಟಿ,
ಡಿಪೋ ಮೆನೇಜರ್‌, ಉಡುಪಿ.

ಜನತೆಗೆ ಪ್ರಯೋಜನ
ಬಹುಕಾಲದ ಬೇಡಿಕೆಯೊಂದು ಈಡೇರುತ್ತಿರುವುದು ಖುಷಿ ತರುತ್ತಿದೆ. ಜಿಲ್ಲೆಯ ಜನತೆ ನಿಲ್ದಾಣದ ಪ್ರಯೋಜನ ಪಡೆಯುವಂತಾಗಲಿದೆ.
-ದಿನಕರ ಬಾಬು, ಅಧ್ಯಕ್ಷರು,
ಜಿ.ಪಂ ಉಡುಪಿ.

ಬಹುಕಾಲದ ಬೇಡಿಕೆ
ನಗರ ಅಭಿವೃದ್ಧಿ ಹೊಂದುತ್ತಿದೆ. ಪ್ರಯಾಣಿಕರ ಅನುಕೂಲತೆಗೆ ತಕ್ಕಂತೆ ನಗರದಲ್ಲಿ ಸೂಕ್ತ ಕೆಎಸ್‌ಆರ್‌ಟಿಸಿ ಸಿಟಿ ಬಸ್‌ನಿಲ್ದಾಣವಿಲ್ಲದೆ ಬಹಳಷ್ಟು ಸಮಸ್ಯೆಯಾಗಿರುತ್ತಿತ್ತು. ಹೊಸ ಬಸ್‌ ನಿಲ್ದಾಣ ಸಾರ್ವಜನಿಕರಿಗೆ ಬಳಕೆಗೆ ದೊರೆಯುವ ಮೂಲಕ ಉಡುಪಿ ನಗರದ ಜನತೆಯ ಬಹುಕಾಲದ ಬೇಡಿಕೆಯೊಂದು ಈಡೇರಿದಂತಾಗುತ್ತದೆ.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next