ಕನಕಪುರ: ಸರ್ಕಾರಿ ನೌಕರರಂತೆ ತಮಗೂ ಸಕಲ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ, ನಿರ್ವಾಹಕರು ನಿಲ್ದಾಣದಲ್ಲಿ ಬೋಂಡ, ಬಜ್ಜಿ ಮಾರಾಟ ಮಾಡಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿಲ್ದಾಣಾಧಿಕಾರಿ ಗುರಪ್ಪ, ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ನೌಕರರು 6ನೇ ವೇತನ ಆಯೋಗವನ್ನು ಯಥಾವತ್ತು ಜಾರಿಗೊಳಿಸುವಂತೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದು, ಅದರಂತೆ ನಗರ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರು ಬಜ್ಜಿ, ಬೋಂಡಾ, ಎಳನೀರು ಮಾರಾಟ ಮಾಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸುತ್ತಿರುವುದಾಗಿ ಹೇಳಿದರು.
ಮಾಜಿ ಲೀಡರ್‌ಗಳೂ ಬೆಂಬಲಿಸಲಿ: ಯೂನಿಯನ್ ಇದುವರೆಗೂ ಸರ್ಕಾರ, ಯುನಿಯನ್ ಲೀಡರ್‌ಗಳು ನೌಕರರ ಹಿತವನ್ನು ಮರೆತು ಸಂಪೂರ್ಣವಾಗಿ ಆಳು ಮಾಡಿದ್ದಾರೆ. ಹಾಲಿ ಇರುವ ಯುನಿಯನ್‌ಗಳು ನೌಕರರ ಪರ ಧ್ವನಿ ಎತ್ತಿ ಸರ್ಕಾರದ ಗಮನವನ್ನು ಸೆಳೆಯುತ್ತಿವೆ. ಹಿಂದೆ ಇದ್ದ ಎಲ್ಲಾ ಯುನಿಯನ್ ಲೀಡರ್‌ಗಳೂ ಮೀನಮೇಷ ಏಣಿಸದೇ, ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ಆರನೇ ವೇತನ ಆಯೋಗ ಜಾರಿ, ಆರೋಗ್ಯ ವಿಮೆ, ಎನ್‌ಎಎನ್‌ಸಿ ಸಂಪೂರ್ಣ ರದ್ದು, ಅಂತರ್ ನಿಗಮ ವರ್ಗಾವಣೆ ಸೇರಿ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಸಾರಿಗೆ ಮಂತ್ರಿಗಳು ಕಳೆದ ಬಾರಿ ಭರವಸೆ ನೀಡಿ ಕಾಲಾವಕಾಶ ಕೋರಿದ್ದರು. ಇದೀಗ ಅವಧಿ ಮುಗಿದು 15 ದಿನ ಕಳೆದರೂ ಈ ವಿಚಾರದ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಹೋರಾಟದ ಹಾದಿಯನ್ನು ಹಿಡಿಯಬೇಕಾಗಿದೆ ಎಂದು ತಿಳಿಸಿದರು. ಚಾಲಕರಾದ ಶಿವಕುಮಾರ್ ಮಾತನಾಡಿದರು.
ಚಾಲಕ, ನಿರ್ವಾಹಕರಾದ ನಾಗಪ್ಪಗಂಟಿ, ಕುಮಾರ್, ಶಿವಣ್ಣ, ಟಿ.ಎಚ್.ಶಿವ, ಪುಟ್ಟಸ್ವಾಮಿ, ಮಹದೇವ್, ಸಿದ್ದೇಶ್, ವಸಂತ್, ಜೋಗಿ, ಚಿನ್ನಗಿರೀಗೌಡ, ಹರೀಶ್ ಪಾಲ್ಗೊಂಡಿದ್ದರು.