ಬೆಂಗಳೂರು: ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಇತ್ತ ಸಾರಿಗೆ ನಿಗಮಗಳು ಬಸ್‌ಗಳನ್ನು ರಸ್ತೆಗಿಳಿಸಲು ಸಿದಟಛಿತೆ ನಡೆಸಿದ್ದು, ಮೇ 4ರ ನಂತರ ರಾಜ್ಯದ ಹಸಿರು ವಲಯಗಳಲ್ಲಿ ಎಂದಿನಂತೆ ಸಮೂಹ ಸಾರಿಗೆ ಸೇವೆ ಪುನಾರಂಭವಾಗುವ ಸಾಧ್ಯತೆ ಇದೆ. ಆದರೆ, ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಾಚರಣೆ ಮಾಡುವ ರಾಜಧಾನಿಯಲ್ಲಿ ಮಾತ್ರ ಒಂದೇ ಒಂದು ಬಸ್ ರಸ್ತೆಗಿಳಿಯುವುದಿಲ್ಲ. ಸದ್ಯ ಕೇಂದ್ರದ ಮಾರ್ಗಸೂಚಿ ಪ್ರಕಾರ ರಾಜ್ಯದ 3 ಜಿಲ್ಲೆಗಳು “ಕೆಂಪು ವಲಯ’ದಲ್ಲಿ ಬರುತ್ತವೆ. ಆ ಪೈಕಿ ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳು ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲೇ ಬರುತ್ತವೆ. ನಿಗಮವು 17 ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಅದರಲ್ಲಿ ಪ್ರಸ್ತುತ ನಿಯಮದಂತೆ 15 ಜಿಲ್ಲೆಗಳಲ್ಲಿ ಸಾಮಾನ್ಯ ಬಸ್‌ಗಳ ಷರತ್ತುಬದ್ಧ ಸಂಚಾರಕ್ಕೆ ಅವಕಾಶ ಇದೆ. ಆದರೆ, ಕೆಎಸ್‌ಆರ್‌ಟಿಸಿಯ ಒಟ್ಟಾರೆ 8,200 ಅನುಸೂಚಿಗಳಲ್ಲಿ ಅತಿ ಹೆಚ್ಚು 2 ಸಾವಿರ ಬಸ್‌ಗಳು ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿರುವ 3 ಘಟಕಗಳಿಂದಲೇ ಕಾರ್ಯಾಚರಣೆ ಮಾಡುತ್ತಿದ್ದು, ನಿತ್ಯ ಸುಮಾರು ಆರು ಸಾವಿರ ಟ್ರಿಪ್ ಗಳು ಸಂಚರಿಸುತ್ತವೆ. ಅದೇ ರೀತಿ, ಯಾವುದೇ ಪ್ರೀಮಿಯಂ ಬಸ್‌ಗಳಿಗೂ ಅವಕಾಶ ಇಲ್ಲ. ಜತೆಗೆ ಹಸಿರು ವಲಯದ ಜಿಲ್ಲೆಗಳಿಂದಲೂ ಈ “ಕೆಂಪು’ ಪಟ್ಟಿಯಲ್ಲಿರುವ ಜಿಲ್ಲೆಗಳಿಗೆ ಬರುವಂತಿಲ್ಲ. ವಿಚಿತ್ರವೆಂದರೆ, ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬೆಂಗಳೂರು ಮತ್ತು ಮೈಸೂರಿಗೇ ಅತ್ಯಧಿಕ ಸಂಖ್ಯೆಯಲ್ಲಿ ಬಸ್‌ಗಳು ಬರುತ್ತವೆ. ಅಂದರೆ ಲಾಕ್‌ಡೌನ್ ಸಡಿಲಿಕೆಗೊಂಡು ಸಾರಿಗೆ ಸೇವೆಗೆ ಅವಕಾಶ ಸಿಕ್ಕರೂ, ಸಾಮರ್ಥ್ಯಕ್ಕಿಂತ ಶೇ. 50 ರಷ್ಟು ಮಾತ್ರ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ
ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ರಾಜ್ಯದ ಮಾರ್ಗಸೂಚಿ; ಇಂದು ನಿರ್ಧಾರ:
“ರಾಜ್ಯ ಸರ್ಕಾರದ ಪ್ರಕಾರ ಒಟ್ಟಾರೆ ಕರ್ನಾಟಕದಲ್ಲಿ 15 ಜಿಲ್ಲೆಗಳು ಕೆಂಪು ವಲಯದಲ್ಲಿ ಬರುತ್ತವೆ. ಹಾಗೊಂದು ವೇಳೆ ಕೇಂದ್ರದ ಸೂಚನೆಯಂತೆ ತನ್ನ ವಿವೇಚನೆ ಮೇರೆಗೆ ಹೊಸ ಮಾರ್ಗಸೂಚಿ ಹೊರಡಿಸಿದರೆ, ಕೆಎಸ್‌ಆರ್‌ಟಿಸಿಗೆ ಅದು ಅನ್ವಯ ಆಗಲಿದೆ. ಆಗ, ಬಸ್‌ಗಳ ಕಾರ್ಯಾಚರಣೆ ವ್ಯಾಪ್ತಿ ಮತ್ತಷ್ಟು ಕಿರಿದಾಗಲಿದೆ. ಆದರೆ, ಈ ಬಗ್ಗೆ ಶನಿವಾರ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಕೆಎಸ್‌ಆರ್‌ಟಿಸಿಯ ಉನ್ನತ ಅಧಿಕಾರಿಗಳು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಬಿಎಂಟಿಸಿ; ಇನ್ನೂ 15 ದಿನ ಲಾಕ್!
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಕಾರ ಬೆಂಗಳೂರು ಕೆಂಪು ವಲಯದಲ್ಲಿ ಬರುವುದರಿಂದ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯಲು ಸದ್ಯದ ಮಾರ್ಗಸೂಚಿ ಪ್ರಕಾರ ಇನ್ನೂ ಎರಡು ವಾರ ಕಾಯಬೇಕಾಗುತ್ತದೆ. ತದನಂತರವೂ ತೆರವಾಗುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ನಷ್ಟದ ಹೊರೆ ತುಸು ಭಾರ ಆಗಲಿದೆ.