ಬಳ್ಳಾರಿ: ತೆಲಂಗಾಣ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯ ಸಾವಿರಾರು ನೌಕರರನ್ನು ಎಕಾಏಕಿ ವಜಾಗೊಳಿಸಿದ್ದನ್ನು ಖಂಡಿಸಿ ಸೋಮವಾರ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂದಿ ಮತ್ತು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಬಳ್ಳಾರಿ ವಿಭಾಗದ ಕೆಎಸ್‌ಆರ್‌ಟಿಸಿ ಸಂಸ್ಥೆ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಹತ್ತಾರು ಮಂದಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿ ಕೆಲಕಾಲ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ರಾವ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಜಿಲ್ಲಾ ಧಿಕಾರಿ ಕಚೇರಿ ಸಿಬ್ಬಂದಿಗೆ ಈ ಕುರಿತು ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ತೆಲಂಗಾಣ ರಾಜ್ಯದ ರಸ್ತೆ ಸಾರಿಗೆ ನೌಕರರು, ಸಿಬ್ಬಂದಿ ವಿರುದ್ಧ ತೆಲಂಗಾಣ ಸರ್ಕಾರ ಕೈಗೊಂಡಿರುವ ನಿರ್ಧಾರ ಅತ್ಯಂತ ನಿರ್ದಯಿಯಾಗಿದೆ. ಇಂಥ ಕ್ರಮವನ್ನು ಯಾವುದೇ ಸರ್ಕಾರ ಕೈಗೊಳ್ಳಬಾರದು. ನೌಕರರು, ಸಿಬ್ಬಂದಿ ವಜಾಗೊಳಿಸಿರುವುದರಿಂದ ಅವರ ಕುಟುಂಬ ಬೀದಿಗೆ ಬರಲಿವೆ ಎಂದರು.
ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಒಂದಲ್ಲ, ಎರಡಲ್ಲ ಬರೋಬ್ಬರಿ 48,000 ನೌಕರರನ್ನು ಸೇವೆಯಿಂದ ವಜಾಗೊಳಿಸಿರುವುದು ಕಾನೂನು ಬಾಹಿರವಾಗಿದೆ. ಅಲ್ಲದೇ ಸರ್ವಾಧಿ ಕಾರಿ ಧೋರಣೆಯನ್ನು ಇಲ್ಲಿ ಎತ್ತಿ ತೋರಿಸುತ್ತದೆ. ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಟಿಎಸ್‌ಆರ್‌ಟಿಸಿ ಸಂಸ್ಥೆಯ ನೌಕರರನ್ನು ಎಕಾಏಕಿ ವಜಾಗೊಳಿಸೋದು ತರವಲ್ಲ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಇದನ್ನು ಉಗ್ರವಾಗಿ ಖಂಡಿಸಲಿದೆ ಎಂದು ಅವರು ತಿಳಿಸಿದರು.
ಕೂಡಲೇ ಟಿಎಸ್‌ಆರ್‌ಟಿಸಿ ಸಂಸ್ಥೆಯ ನೌಕರರ ಸೇವೆಯನ್ನು ವಜಾಗೊಳಿಸಿರೋದನ್ನ ಹಿಂಪಡೆಯಬೇಕು. ಟಿಎಸ್‌ಆರ್‌ಟಿಸಿ ಸಂಸ್ಥೆಯ ನಷ್ಟದ ನೆಪವೊಡ್ಡಿ ಈ ನಿರ್ಧಾರಕ್ಕೆ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಬಂದಿರೋದು ಸರಿಯಲ್ಲ. ಖಾಸಗಿ ಒಡೆತನದಲ್ಲಿರೊ ಈ ಸಂಸ್ಥೆ ನಷ್ಟದಲ್ಲಿರೋದು ನಿಮಗೆ ಹೇಗೆ ತಿಳಿಯುತ್ತೆ. ಇದೀಗ ಮತ್ತೂಂದು ಖಾಸಗಿ ಸಹಭಾಗಿತ್ವದಡಿ ಟಿಎಸ್ ಆರ್‌ಟಿಸಿ ಸಂಸ್ಥೆಯನ್ನು ಆರಂಭಿಸಲು ಹೊರಟಿದೀರಿ. ಅದು ಕೂಡ ನಷ್ಟದಲ್ಲಿರೋದಿಲ್ಲ ಅಂತ ಏನ್ ಗ್ಯಾರಂಟಿ ಎಂದು ಅವರು ಪ್ರಶ್ನಿಸಿದರು.
ಕೆಎಸ್‌ಆರ್‌ಟಿಸಿ ಸಂಸ್ಥೆ ಸಿಬ್ಬಂದಿ ಮತ್ತು ಕಾರ್ಮಿಕರು ಸಂಘದ ಬಳ್ಳಾರಿ ವಿಭಾಗದ ಅಧ್ಯಕ್ಷ ಎಚ್.ಎ. ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿ ಕಾಂತಯ್ಯ ಗುತ್ತರಗಿ ಮಠ, ಜಿ. ಶಿವಕುಮಾರ, ಶೇಖರಬಾಬು, ಜಲ್ಲಿ ಬಸಪ್ಪ ಸೇರಿದಂತೆ ನೂರಾರು ನೌಕರರು, ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು