Advertisement
ಗುರುವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ದಸರಾ ದರ್ಶನ ಬಸ್‌ಗಳಿಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಹಸುರು ನಿಶಾನೆ ತೋರಿದರು. ಹಳೇ ಮೈಸೂರು ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಸಹಿತ ಐದು ಜಿಲ್ಲೆಗಳ 31 ತಾಲೂಕುಗಳ ಆದಿವಾಸಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಈ ದಸರಾ ದರ್ಶನ ಸೌಲಭ್ಯ ಒದಗಿಸಲಾಗಿದೆ. ಕಳೆದ ಬಾರಿ ಇದ್ದ ರಿಯಾಯಿತಿ ಪಾಸ್ ರದ್ದುಪಡಿಸಿ, ಸಂಪೂರ್ಣ ಉಚಿತವಾಗಿ ದಸರಾ ದರ್ಶನ ವ್ಯವಸ್ಥೆ ಮಾಡಲಾಗಿದೆ.
ದಸರಾ ಅಂಗವಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಪಾರಂಪರಿಕ ಆಟಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪಗಡೆ ಆಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಮಕ್ಕಳಿಗೆ ಏರ್ಪಡಿಸಿದ್ದ ಕಣ್ಣಾ ಮುಚ್ಚಾಲೆ, ಕುಂಟಾಬಿಲ್ಲೆ, ಹಾವು-ಏಣಿ, ಗೋಲಿ, ಚೌಕಾಬಾರ, ಮೂರು ಕಾಲಿನ ಓಟ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಯುವಕ, ಯುವತಿಯರಿಗಾಗಿ ಏರ್ಪಡಿಸಿದ್ದ ಅಳಿಗುಳಿ ಮನೆ, ಹಗ್ಗ-ಜಗ್ಗಾಟ, ಹಾವು ಏಣಿ, ಗೋಲಿ, ಬಿಲ್ಲು ಬಾಣ, ಚಿನ್ನಿದಾಂಡು, ಬುಗುರಿ, ಗೋಣಿಚೀಲದ ಓಟ, ಮೂರು ಕಾಲಿನ ಓಟ ಮತ್ತು ಹುಲಿ-ಕುರಿ ಸ್ಪರ್ಧೆಯಲ್ಲಿ ನಾನಾ ಕಾಲೇಜುಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ದಿನವಿಡೀ ಮೊಬೈಲ್‌ನಿಂದ ದೂರ ಉಳಿದರು. 25 ವರ್ಷ ಮೇಲ್ಪಟ್ಟವರಿಗೆ ಏರ್ಪಡಿಸಿದ್ದ ಪಗಡೆ, ಹಗ್ಗ-ಜಗ್ಗಾಟ, ಅಳಿಗುಳಿ ಮನೆ, ಬಿಲ್ಲುಬಾಣ, ಚೌಕಾಬಾರ ಸ್ಪರ್ಧೆಯಲ್ಲಿ ವಯಸ್ಸಿನ ಭೇದ ಮರೆತು ಅಜ್ಜಿಯರು ಭಾಗವಹಿಸಿ ಎಲ್ಲರ ಗಮನ ಸೆಳೆದರು. ಛಾಯಾಚಿತ್ರ ಸ್ಪರ್ಧೆ
ಪ್ರವಾಸೋದ್ಯಮ ಇಲಾಖೆ ವತಿಯಿಂದ ದಸರಾ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಲಕ್ಷ ರೂ.ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಒಬ್ಬರು ಗರಿಷ್ಠ ಮೂರು ಛಾಯಾಚಿತ್ರಗಳನ್ನು ಸಲ್ಲಿಸಬಹುದಾಗಿದೆ.