ಬೆಂಗಳೂರು: ಬಸ್ ನಿಲ್ದಾಣಗಳಲ್ಲಿ ಇನ್ನು ಮುಂದೆ ಕೇವಲ ಒಂದು ರೂ.ಗೆ ಒಂದು ಲೀಟರ್ ನೀರು ದೊರೆಯಲಿದೆ. ಕೆಎಸ್‌ಆರ್‌ಟಿಸಿ ಪ್ರತಿ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲು ನಿರ್ಧರಿಸಿದೆ. ಪ್ರಯಾಣಿಕರು ನೀರಿನ ಬಾಟಲಿಗಾಗಿ ದುಪ್ಪಟ್ಟು ಹಣ ಸುರಿಯುವ ಗೋಳು ತಪ್ಪಲಿದೆ ಎಂದು ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ ತಿಳಿಸಿದರು. ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಗುರುವಾರ ಮೌಲ್ಯವರ್ಧಿತ ಸೇವೆಗಳಿಗೆ ಚಾಲನೆ ನೀಡಿದ ಅನಂತರ ಅವರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು. ನಿಗಮದ ವ್ಯಾಪ್ತಿಗೆ ಬರುವ ಎಲ್ಲ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು. ಪ್ರಯಾಣಿಕರು 1 ರೂ. ಕಾಯಿನ್ ಹಾಕಿದರೆ 1 ಲೀ. ನೀರು ಬರಲಿದೆ ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ಮಾತನಾಡಿ, ನಿಗಮದ ವ್ಯಾಪ್ತಿಯಲ್ಲಿ 150 ಬಸ್ ನಿಲ್ದಾಣಗಳಿವೆ. ಈ ಪೈಕಿ ಮೊದಲ ಹಂತದಲ್ಲಿ 50 ನಿಲ್ದಾಣಗಳಲ್ಲಿ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿರುವ ನಿಲ್ದಾಣಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ತಿಂಗಳಲ್ಲಿ ಈ ಘಟಕಗಳು ಬರಲಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದರು.
ನೀರು ವಿತರಣೆಗೆ ಮರುಚಾಲನೆ: ಇದಕ್ಕೂ ಮುನ್ನ ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ, ಪ್ರಯಾಣಿಕರಿಗೆ ಮೌಲ್ಯವರ್ಧಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಐಷಾರಾಮಿ ಬಸ್‌ಗಳಲ್ಲಿ ಉಚಿತ ಕುಡಿಯುವ ನೀರಿನ ಬಾಟಲಿಗಳ ವಿತರಣೆಗೆ ಮರುಚಾಲನೆ ನೀಡಿದರು.
ಪ್ರಯಾಣಿಕರಿಗೆ ಪತ್ರಿಕೆ
ರಾಜಹಂಸ ಸಹಿತ ಎಲ್ಲ ಪ್ರೀಮಿಯಂ ಸೇವೆಯ ಬಸ್‌ಗಳಲ್ಲಿ ಬೆಳಗ್ಗೆ 5ರಿಂದ 11ರ ವರೆಗೆ ಕಾರ್ಯಾಚರಣೆ ಮಾಡುವ 104 ಬಸ್‌ಗಳಲ್ಲಿ 4,000 ಪ್ರಯಾಣಿಕರಿಗೆ ದಿನಪತ್ರಿಕೆ ವಿತರಿಸಲಾಗುವುದು ಎಂದರು.
ಮೇ ಅಂತ್ಯದ ವೇಳೆ ನಿಗಮದ ಎಲ್ಲ 8,400 ಬಸ್‌ಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸಲಾಗುತ್ತಿದೆ. ಈ ಇಲೆಕ್ಟ್ರಾನಿಕ್ ಚಿಪ್‌ಗ್ಳಿಂದ ಟೋಲ್ ಗಳಲ್ಲಿ ಸ್ವಯಂಚಾಲಿತ ಶುಲ್ಕ ಪಾವತಿ ಆಗಲಿದೆ. ಇದರಿಂದ ಸಾಕಷ್ಟು ಸಮಯ ಉಳಿತಾಯ ಆಗಲಿದೆ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಉಮಾಶಂಕರ್ ತಿಳಿಸಿದರು.