Advertisement

ನಷ್ಟದಲ್ಲಿದ್ದ ಕೆಎಸ್‌ಆರ್‌ಟಿಸಿ ಈಗ ಲಾಭದತ್ತ: ಗೋಪಾಲ ಪೂಜಾರಿ

06:10 AM Mar 03, 2018 | |

ಬೆಂಗಳೂರು: ಕಳೆದ ವರ್ಷ ಸುಮಾರು 138 ಕೋಟಿ ರೂ. ನಷ್ಟದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಲಾಗಿದ್ದು, ಈ ವರ್ಷದಲ್ಲಿ ಇಲ್ಲಿವರೆಗೆ 10.29 ಕೋಟಿ ರೂ. ಲಾಭ ಗಳಿಸಿದೆ. ಮಾರ್ಚ್‌ ಅಂತ್ಯಕ್ಕೆ ಲಾಭದ ಪ್ರಮಾಣ 15 ಕೋಟಿ ರೂ. ಆಗುವ ನಿರೀಕ್ಷೆಯಿದೆ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ತಿಳಿಸಿದ್ದಾರೆ.

Advertisement

ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಿರ್ದೇಶಕ ಮಂಡಳಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೀಸೆಲ್‌ ದರ ಹೆಚ್ಚಳ, ನೌಕರರ ವೇತನ ಹೆಚ್ಚಳ, ಬಂದ್‌, ಗಲಾಟೆ ಮುಂತಾದ ಕಾರಣಗಳಿಗೆ ಈ ವರ್ಷ ಸಂಸ್ಥೆಗೆ 250 ಕೋಟಿ ರೂ. ನಷ್ಟ ಆಗಬಹುದು ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಆದರೆ, ಹೆಚ್ಚುವರಿ ವೆಚ್ಚಗಳಿಗೆ ಕಡಿವಾಣ ಹಾಕುವ ಮತ್ತು ಆರ್ಥಿಕ ಶಿಸ್ತು ಕಾಪಾಡುವ ಮೂಲಕ ಸಂಸ್ಥೆಯನ್ನು ಲಾಭದಾಯಕವನ್ನಾಗಿ ಮಾಡಲಾಗಿದೆ ಎಂದರು.

ಈ ವರ್ಷ ಸಂಸ್ಥೆಗೆ ಒಟ್ಟು 3,164.88 ಕೋಟಿ ರೂ. ಆದಾಯ ಬಂದಿದ್ದು, ಅದರಲ್ಲಿ 10.29 ಕೋಟಿ ರೂ. ಲಾಭ ಆಗಿದೆ. ಕೆಲವು ಉಪಕರಣಗಳನ್ನು ಖರೀದಿಸಲು ಸಂಸ್ಥೆಯಿಂದ ಜಯದೇವ ಹೃದ್ರೋಗ ಸಂಸ್ಥೆಗೆ 40 ಲಕ್ಷ ರೂ. ದೇಣಿಗೆ ನೀಡಲಾಗಿದೆ ಎಂದು ಗೋಪಾಲ ಪೂಜಾರಿ ವಿವರಿಸಿದರು.

ಒಂದು ವರ್ಷದ ಅಧಿಕಾರವಧಿಯಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆಗಳನ್ನು ತರುವ ಮೂಲಕ ಆರ್ಥಿಕವಾಗಿ ಗಟ್ಟಿಗೊಳಿಸಲಾಗಿದೆ. ಹೊಸದಾಗಿ 415 ಅನುಸೂಚಿ ಹಾಗು 1621 ಬಸ್ಸುಗಳ ಸೇರ್ಪಡೆ, 15 ಹೊಸ ಬಸ್‌ ನಿಲ್ದಾಣ ನಿರ್ಮಾಣ, 4 ಹೊಸ ಬಸ್‌  ಘಟಕ ನಿರ್ಮಾಣ. ಮಳವಳ್ಳಿಯಲ್ಲಿ ಚಾಲಕರ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಮೂರು ಹೊಸ ಬಸ್‌ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಚಿತ್ರದುರ್ಗ,ಶಿವಮೊಗ್ಗದಲ್ಲಿ ನೂತನ ವಿಭಾಗ ಆರಂಭಿಸಲಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಸಂಸ್ಥೆಗೆ ನಿವೇಶನ ಖರೀದಿ ಮಾಡಲಾಗಿದೆ. ಬಸ್‌ ನಿಲ್ದಾಣಗಳಲ್ಲಿ ಶೌಚಾಲಯಗಳ ನಿರ್ವಹಣೆಗೆ “ಸುಲಭ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯೊಂದಿಗೆ’ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪ್ರತಿಷ್ಠಿತ ಸಾರಿಗೆಗಳಲ್ಲಿ ಸ್ಪರ್ಧಾತ್ಮಕ ದರಗಳಲ್ಲಿ ಕುಡಿಯುವ ನೀರಿನ ಬಾಟಲ್‌ಗ‌ಳನ್ನು ನೀಡಲಾಗುತ್ತಿದೆ. 15 ಬಸ್‌ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. 1,600 ಬಸ್‌ಗಳಲ್ಲಿ ವೈಫೈ ಅಳವಡಿಸಲಾಗಿದೆ. ಈ ರೀತಿಯ ಸುಧಾರಣಾ ಕ್ರಮಗಳಿಗಾಗಿ ಸಂಸ್ಥೆಯು 21 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಂಡಳಿ ನಿರ್ದೇಶಕರಾದ ಟಿ.ಎಸ್‌. ಮಂಜುನಾಥ್‌, ವಿಲಾಸ್‌ ಮೋರೆ, ಟಿ.ಕೆ. ಸುಧೀರ್‌, ಎಂ.ಕೆ. ಗೋವಿಂದರಾಜು, ಬಿದರಕೆರೆ ಮಂಜೇಗೌಡ, ಟಿ. ತಿಪ್ಪೇಸ್ವಾಮಿ, ಸಿ.ಎಂ. ಸತೀಶ್‌, ಎಸ್‌.ಬಿ. ನಾರಾಯಣ, ರಮೇಶ್‌ ಶೆಟ್ಟಿ, ಎಂ. ಕೃಷ್ಣಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ ಇದ್ದರು.

ಸಮಗ್ರ ಆರೋಗ್ಯ ತಪಾಸಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕರು, ನಿರ್ವಾಹಕರು ಹಾಗೂ ಮೆಕ್ಯಾನಿಕ್‌ಗಳು ಸೇರಿ 40 ವರ್ಷ ದಾಟಿದ ಸುಮಾರು 15,348 ನೌಕರರಿಗೆ ಪ್ರತಿ ವರ್ಷ ಉಚಿತವಾಗಿ “ಸಮಗ್ರ ಆರೋಗ್ಯ ತಪಾಸಣೆ’ ಮಾಡಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ.

ನೌಕರರ ಸಮಗ್ರ ಆರೋಗ್ಯ ತಪಾಸಣೆಗೆ ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದಕ್ಕೆ ನಿರ್ದೇಶಕ ಮಂಡಳಿ ಒಪ್ಪಿಗೆ ಕೊಟ್ಟಿದೆ ಎಂದರು.

ಐಎಎಸ್‌, ಐಪಿಎಸ್‌, ಐಎಫ್ಎಸ್‌ ಹಾಗೂ ಕೆಎಎಸ್‌ ಅಧಿಕಾರಿಗಳಿಗೆ ಮಾತ್ರ ಲಭಿಸುತ್ತಿದ್ದ “ಮಾಸ್ಟರ್‌ ಕಾರ್ಡಿಯಾಕ್‌ ಆ್ಯಂಡ್‌ ಹೆಲ್ತ್‌ ಚೆಕ್‌ಅಪ್‌’ ವ್ಯವಸ್ಥೆಯನ್ನು ಸದಾ ಒತ್ತಡದಲ್ಲಿ ಕೆಲಸ ಮಾಡುವ ಸಾರಿಗೆ ಸಂಸ್ಥೆಯ ನೌಕರರಿಗೂ ಈ ವ್ಯವಸ್ಥೆ ಒದಗಿಸಲು ನಿರ್ಧರಿಸಲಾಗಿದೆ. 40ರಿಂದ 60 ವರ್ಷದ ನೌಕರರು ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಪ್ರಮಾಣಪತ್ರ ಸಲ್ಲಿಸಬೇಕು ಎಂಬ ನಿಯಮವಿದೆ. ಅದರಂತೆ 40 ವರ್ಷ ದಾಟಿದ ನೌಕರರನ್ನು ಈ ವ್ಯವಸ್ಥೆಗೆ ಸೇರಿಸಿಕೊಳ್ಳಲಾಗಿದೆ. ಹೃದಯ, ಕಿಡ್ನಿ, ರಕ್ತ ಮತ್ತಿತರ ಪರೀಕ್ಷೆಗೆ ಒಬ್ಬರಿಗೆ ಕನಿಷ್ಟ 2,500 ರೂ. ಖರ್ಚಾಗುತ್ತದೆ. ಸಂಸ್ಥೆಯ ಮನವಿಯಂತೆ ಜಯದೇವ ಹೃದ್ರೋಗ ಸಂಸ್ಥೆ ಒಬ್ಬರಿಗೆ 1,500 ರೂ. ದರ ನಿಗದಿಪಡಿಸಿದೆ. ಈ ವೆಚ್ಚ ಸಂಸ್ಥೆಯೇ ಭರಿಸಲಿದೆ. ಇದಕ್ಕಾಗಿ ವರ್ಷಕ್ಕೆ ಒಟ್ಟು 2.5 ಕೋಟಿ ರೂ. ವೆಚ್ಚವಾಗಲಿದೆ ಎಂದು ಪೂಜಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next