Advertisement

ಭಾರೀ ಲಾಭದಲ್ಲಿ ಕೆಎಸ್‌ಆರ್‌ಟಿಸಿ

06:00 AM Jan 27, 2018 | |

ಬೆಂಗಳೂರು: ಡೀಸೆಲ್‌ ಬೆಲೆ ಗಣನೀಯ ಏರಿಕೆ ಪರಿಣಾಮ ನಾಲ್ಕೂ ರಸ್ತೆ ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿವೆ. ಆದರೆ, ಕೆಎಸ್‌ಆರ್‌ಟಿಸಿಯ ಕೇಂದ್ರೀಯ ವಿಭಾಗ ಮಾತ್ರ ಕಳೆದ ವರ್ಷಕ್ಕಿಂತ ಹದಿನಾಲ್ಕು ಪಟ್ಟು ಹೆಚ್ಚು ಲಾಭ ದಾಖಲಿಸಿದ್ದು, ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Advertisement

2017ರ ಮಾರ್ಚ್‌ ಅಂತ್ಯಕ್ಕೆ ಕೆಎಸ್‌ಆರ್‌ಟಿಸಿ ಆರು ಘಟಕಗಳನ್ನು ಒಳಗೊಂಡ ಕೇಂದ್ರೀಯ ವಿಭಾಗದ ಲಾಭ 75 ಲಕ್ಷ ರೂ. ಇತ್ತು. ಆದರೆ, ಕೇವಲ ಒಂಬತ್ತು ತಿಂಗಳಲ್ಲಿ ಇದು 14 ಕೋಟಿ ರೂ. ಆಗಿದ್ದು, ತಿಂಗಳಿಗೆ ಸರಾಸರಿ 1.5ರಿಂದ 2 ಕೋಟಿ ರೂ.ಲಾಭ ಹರಿದುಬಂದಿದೆ. ವರ್ಷಾಂತ್ಯಕ್ಕೆ ಇನ್ನೂ ಹತ್ತು ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಕೇಂದ್ರೀಯ ವಿಭಾಗಕ್ಕೆ ಡೀಸೆಲ್‌ ದರ ಏರಿಕೆಯಿಂದ 7.27 ಕೋಟಿ ರೂ. ಹೆಚ್ಚುವರಿ ಹೊರೆಯಾಗಿದೆ. ಭತ್ಯೆ ಮತ್ತಿತರ ಸೌಲಭ್ಯಗಳಿಂದ ಸಿಬ್ಬಂದಿ ವೆಚ್ಚ 3.19 ಕೋಟಿ ರೂ. ಆಗಿದೆ. ಈ ನಡುವೆಯೂ ಯಾವುದೇ ಪ್ರಯಾಣ ದರ ಏರಿಕೆ ಇಲ್ಲದೆ, ಪ್ರತಿ ಕಿ.ಮೀ. ಆದಾಯ (ಇಪಿಕೆಎಂ) ಶೇ. 3.6ರಷ್ಟು ಅಂದರೆ ಕಿ.ಮೀ.ಗೆ 1.30 ರೂ. ಹೆಚ್ಚುವರಿ ಆದಾಯ ಬಂದಿದೆ. ಇದಕ್ಕೆ ಕಾರಣ ಚಾಲಕ ಮತ್ತು ಚಾಲಕ ಕಮ್‌ ನಿರ್ವಾಹಕರು ಎನ್ನುವುದು ವಿಭಾಗೀಯ ನಿಯಂತ್ರಕ ಜಿ.ಟಿ. ಪ್ರಭಾಕರ ರೆಡ್ಡಿ ಅವರ ಅಭಿಪ್ರಾಯ.

“ಅವಾರ್ಡ್‌’ ಐಡಿಯಾ ಸಕ್ಸಸ್‌:
ಆದಾಯ ಹೆಚ್ಚಳಕ್ಕೂ ಒಂದು ಪ್ರಮುಖ ಕಾರಣ ಇದೆ. ಕೆಲವು ಪೂರಕ ಅಂಶಗಳನ್ನು ಕೈಗೊಂಡಿದ್ದ ಪರಿಣಾಮ ಏಕಾಏಕಿ ಲಾಭದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ಮುಖ್ಯವಾಗಿ “ಪೀಕ್‌ ಸೀಜನ್‌’ನಲ್ಲಿ ನಿರಂತರ 26 ದಿನಗಳು ಕಾರ್ಯನಿರ್ವಹಿಸುವ ಚಾಲಕ ಮತ್ತು ಚಾಲಕ ಕಮ್‌  ನಿರ್ವಾಹಕರ “ಉತ್ತಮ ಸೇವೆ’ಗೆ ಪುರಸ್ಕಾರ ಘೋಷಣೆ ಮಾಡಲಾಗಿತ್ತು. ಇದು ಫ‌ಲ ನೀಡಿತು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಾರೆ.

ಸಿಬ್ಬಂದಿ ಹುರಿದುಂಬಿಸಲು ಈ ಸಲ “ಪೀಕ್‌ ತಿಂಗಳು’ ಸೆಪ್ಟೆಂಬರ್‌, ಅಕ್ಟೋಬರ್‌ ಮತ್ತು ನವೆಂಬರ್‌ ಆಗಿತ್ತು. ಈ ಸಮಯದ‌ಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಯೊಂದಿಗೆ ಪುರಸ್ಕರಿಸುವುದಾಗಿ ಘೋಷಿಸಲಾಗಿತ್ತು. ಪರಿಣಾಮ ಒಟ್ಟಾರೆ 14 ಕೋಟಿ ರೂ. ಲಾಭದಲ್ಲಿ 7.14 ಕೋಟಿ ರೂ. ಈ ಪೀಕ್‌ ಸೀಜನ್‌ನಲ್ಲೇ ಬಂದಿದೆ. ಅದರಲ್ಲೂ ಒಟ್ಟಾರೆ ಲಾಭದಲ್ಲಿ ಸಿಂಹಪಾಲು ಪ್ರೀಮಿಯಂ ಬಸ್‌ಗಳದ್ದಾಗಿದೆ. ಡಿಪೋ 2 ಮತ್ತು 4ರಿಂದಲೇ 13 ಕೋಟಿ ರೂ. ಲಾಭ ಬಂದಿದೆ. ಇದಕ್ಕೆ ಶ್ರಮಿಸಿದ ಸುಮಾರು 1,100 ಸಿಬ್ಬಂದಿಯನ್ನು ಗೌರವಿಸಲಾಗಿದೆ ಎಂದು ಹೇಳಿದರು.

Advertisement

ಕಳೆದ ವರ್ಷ ಸರಣಿ ಬಂದ್‌:
ಕೇಂದ್ರೀಯ ವಿಭಾಗವು ಪ್ರತಿ ವರ್ಷ ಸರಾಸರಿ 10ರಿಂದ 12 ಕೋಟಿ ಲಾಭ ಗಳಿಸುತ್ತದೆ. 2015-16ರಲ್ಲಿ 34.18 ಕೋಟಿ ಲಾಭ ಗಳಿಸಿತ್ತು. ಆದರೆ, ಕಳೆದ ವರ್ಷ ಲಾಭದ ಪ್ರಮಾಣ ಪಾತಾಳಕ್ಕೆ ಕುಸಿದಿತ್ತು. ತಮಿಳುನಾಡಿನಲ್ಲಿ ಬಂದ್‌, ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಬಂದ್‌, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿಗಮದ ಸಿಬ್ಬಂದಿಯಿಂದ ಮೂರು ದಿನ ಬಂದ್‌, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಜಯಲಲಿತಾ ಸಾವು ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣ ಎಂದು ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.

ಸಾರಿಗೆ ಆದಾಯವು ಕಳೆದ ವರ್ಷ 262.56 ಕೋಟಿ ರೂ. ಇತ್ತು. ಈ ವರ್ಷ ಇದು 285.41 ಕೋಟಿ ರೂ. ಆಗಿದೆ. ಅದೇ ರೀತಿ, ಇಪಿಕೆಎಂ ಕಳೆದ ವರ್ಷ 37.28 ಇದ್ದದ್ದು, 38.68 ಆಗಿದೆ. ಹಬ್ಬ-ಹರಿದಿನಗಳಲ್ಲಿ ಕಾರ್ಯಾಚರಣೆ ಮಾಡಿದ ಹೆಚ್ಚುವರಿ ಬಸ್‌ಗಳು 34.14 ಲಕ್ಷ ಕಿ.ಮೀ. ಕಾರ್ಯಾಚರಣೆ ಮಾಡಿವೆ.

ಕಳೆದ ಐದು ವರ್ಷಗಳಲ್ಲಿ ಕೇಂದ್ರೀಯ ವಿಭಾಗದಲ್ಲಿ ಲಾಭ ಗಳಿಕೆ ಹೀಗಿದೆ.
ವರ್ಷ    ಲಾಭ (ಕೋಟಿ ರೂ.ಗಳಲ್ಲಿ)
2013-14    9.39
2014-15    11.01
2015-16    34.18
2016-17    75 ಲಕ್ಷ
2017-18    14.15 (ಡಿಸೆಂಬರ್‌ವರೆಗೆ)

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next