ಚಿಕ್ಕಬಳ್ಳಾಪುರ: ಹತ್ತಾರು ವರ್ಷಗಳ ಕಾಲ ಲಕ್ಷಾಂತರ ಕಿ.ಮೀ.ಗಟ್ಟಲೇ ಸಂಚರಿಸಿದ ಹಳೆಯ ಕೆಎಸ್‌ಆರ್ ಟಿಸಿ ಬಸ್‌ಗಳಿಗೆ ಈಗ ಚಿಕ್ಕಬಳ್ಳಾಪುರದ ಕೆಎಸ್‌ಆರ್ ಟಿಸಿ ಪ್ರಾದೇಶಿಕ ಉಪ ವಿಭಾಗದ ವರ್ಕ್‌ಶಾಪ್‌ನಲ್ಲಿ ಹೊಸ ರೂಪ ನೀಡಲಾಗುತ್ತಿದೆ.
ಹೌದು, ಕೆಎಸ್‌ಆರ್‌ಟಿಸಿ ಹಳೆ ಬಸ್‌ಗಳಿಗೆ ಹೊಸ ರೂಪ ನೀಡಲು ಸಂಪೂರ್ಣ ಕವಚ ನಿರ್ಮಾಣಕ್ಕಾಗಿ ಬೆಂಗಳೂರು ಅಥವಾ ಹಾಸನ ಪ್ರಾದೇಶಿಕ ಕಾರ್ಯಾಗಾರಕ್ಕೆ ಈ ಮೊದಲು ತೆರಳಬೇಕಿತ್ತು. ಆದರೆ, ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಉಪ ವಿಭಾಗದ ವರ್ಕ್‌ಶಾಪ್‌ನಲ್ಲೊಯೇ ಹಳೆ ಬಸ್‌ಗಳಿಗೆ ಹೊಸ ರೂಪ ನೀಡುವ ಮೂಲಕ ಹೊಸ ಲುಕ್ ಕೊಟ್ಟು ಪ್ರಯಾಣಿಕರನ್ನು ಆಕರ್ಷಿಸುವ ಕೆಲಸಕ್ಕೆ ಮುಂದಾಗಿದೆ.
ಹಳೆ ಬಸ್‌ಗಳಿಗೆ ಹೊಸ ರೂಪ: ಸಾಮಾನ್ಯವಾಗಿ ಕನಿಷ್ಠ 8 ರಿಂದ 9 ಲಕ್ಷ ಕಿ.ಮೀ. ಸಂಚಾರ ನಡೆಸಿದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯಮಾನುಸಾರ ಗುಜರಿಗೆ ಹಾಕಬೇಕು. ಆದರೆ, 8, 9 ಲಕ್ಷ ಕಿ.ಮೀ ದೂರ ಕ್ರಮಿಸುವ ಮುನ್ನವೇ ಕೆಲ ಬಸ್‌ಗಳ ಕವಚ ಕಿತ್ತು ಬಂದು ಪ್ರಯಾಣಿಕರಿಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತಿವೆ. ಅದರಲ್ಲೂ ಪ್ರಯಾಣಿಕರು ಕೂರುವ ಆಸನಗಳ ಸೀಟು ಕಿತ್ತು ಬಂದಿರುವುದು, ಡೋರ್ (ಬಾಗಿಲು) ಸಮರ್ಪಕವಾಗಿ ಇಲ್ಲದೇ ಇರುವುದು, ಸೈಡ್ ಮೀರರ್‌ನಿಂದ ಹಿಡಿದು ಬ್ರೇಕ್, ಚಾಲಕರ ಬಸ್ ಡೋರ್, ಬೋರ್ಡ್‌ಗಳು ಕಿತ್ತು ಸಕಾಲದಲ್ಲಿ ದುರಸ್ತಿಗೊಳ್ಳದೇ ಪ್ರಯಾಣಿಕರ ಹಾಗೂ ಸಾರ್ವಜನಿಕರ ಟೀಕೆಗೆ ಗುರಿ ಆಗುತ್ತಿತ್ತು. ಆದರೆ, ಈಗ ಹಳೆ ಬಸ್‌ಗಳಿಗೆ ಹೊಸ ರೂಪ ಕೊಡುವ ಕಾರ್ಯವನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಚಿಕ್ಕಬಳ್ಳಾಪುರದಲ್ಲಿ ಕೈಗೆತ್ತಿಕೊಂಡಿದ್ದಾರೆ.
ಬೆಂಗಳೂರು, ಹಾಸನ ಹೋಗಬೇಕಿತ್ತು: ಕೆಎಸ್ ಆರ್‌ಟಿಸಿ ಬಸ್‌ಗಳ ಕವಚ ನಿರ್ಮಾಣದ ಕಾರ್ಯ ಏನೇ ಇದ್ದರೂ ಹಾಸನ ಅಥವಾ ಬೆಂಗಳೂರಿನ ಪ್ರಾದೇಶಿಕ ಕಾರ್ಯಾಗಾರಕ್ಕೆ ಕಳುಹಿಸಬೇಕಿತ್ತು. ಇದರಿಂದ ಸ್ಥಳೀಯ ಕೆಎಸ್‌ಆರ್‌ಟಿಸಿ ಉಪ ವಿಭಾಗಕಕ್ಕೆ ಆರ್ಥಿಕವಾಗಿ ಸಾಕಷ್ಟು ಹೊರೆ ಆಗುತ್ತಿತ್ತು. ಆದರೆ ಈಗ ಚಿಕ್ಕಬಳ್ಳಾಪುರ ಉಪ ವಿಭಾಗದ ವರ್ಕ್‌ಶಾಪ್‌ನಲ್ಲಿ ಹಳೆಯ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕವಚ ನಿರ್ಮಾಣ ಕಾರ್ಯ ನಡೆಸುವ ಮೂಲಕ ಸ್ಥಳೀಯ ಕೆಎಸ್‌ಆರ್‌ಟಿಸಿ ತಾಂತ್ರಿಕ ಸಿಬ್ಬಂದಿ ಗಮನ ಸೆಳೆದಿದ್ದಾರೆ.
ಇಲ್ಲಿವರೆಗೂ 12 ಹಳೆ ಬಸ್‌ಗಳಿಗೆ ಹೊಸ ಕವಚ ನಿರ್ಮಾಣ: ಇಲ್ಲಿಯವರೆಗೂ ಚಿಕ್ಕಬಳ್ಳಾಪುರ ಉಪ ವಿಭಾಗದ ಕೆಎಸ್‌ಆರ್‌ಟಿಸಿ ವರ್ಕ್‌ಶಾಪ್‌ನಲ್ಲಿ ಹಳೆಯ 12 ಕೆಎಸ್‌ಆರ್ ಟಿಸಿ ಬಸ್‌ಗಳಿಗೆ ಹೊಸರೂಪದಲ್ಲಿ ಕವಚ ನಿರ್ಮಾಣ ಮಾಡುವ ಮೂಲಕ ಸಂಪೂರ್ಣ ಹೊಸ ಮಾದರಿಯಾಗಿ ಬಸ್‌ಗಳನ್ನು ಸಜ್ಜುಗೊಳಿಸಿ ಪ್ರಯಾಣಿಕರ ಸೇವೆಗೆ ಒದಗಿಸುತ್ತಿದೆ. ಹೊಸ ಬಸ್ ಖರೀದಿಸಬೇಕಾದರೆ ಕೆಎಸ್ ಆರ್‌ಟಿಸಿಗೆ ಕನಿಷ್ಠ 30 ಲಕ್ಷ ವೆಚ್ಚ ಆಗುತ್ತದೆ. ಆದರೆ ಕೇವಲ 3 ರಿಂದ 4 ಲಕ್ಷ ರೂ. ವೆಚ್ಚದಲ್ಲಿ ಮಾತ್ರ ಹೊಸ ಬಸ್‌ಗಳ ಮಾದರಿಯಲ್ಲಿ ಬಸ್‌ಗಳನ್ನು ತಾಂತ್ರಿಕವಾಗಿ ಗುಣಮಟ್ಟದಿಂದ ಸಿದ್ಧಪಡಿಸುವ ಕೆಲಸವನ್ನು ಸ್ಥಳೀಯವಾಗಿ ಕೈಗೊಳ್ಳುವ ಮೂಲಕ ಜಿಲ್ಲೆಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನ ಸೆಳೆಯುತ್ತಿದ್ದಾರೆ.
ಹಳೆ ಬಸ್‌ಗಳಿಗೆಸ್ವಯಂ ಚಾಲಿತ ಬಾಗಿಲು: ಮಹಾ ನಗರದ ಬಿಎಂಟಿಸಿ ಬಸ್‌ಗಳಿಗೆ ಇರುವ ಮಾದರಿಯಲ್ಲಿ ಹಳೆಯ ಕೆಎಸ್‌ಆರ್‌ಟಿಸಿ ಬಸ್ ಗಳಿಗೆ ಕವಚ ನಿರ್ಮಾಣದ ವೇಳೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸುತ್ತಿದೆ. ಚಿಕ್ಕಬಳ್ಳಾಪುರದ ಪ್ರಾದೇಶಿಕ ವರ್ಕ್‌ಶಾಪ್‌ನಲ್ಲಿ ಇದೇ ಮೊದಲ ಬಾರಿಗೆ ಕವಚ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗುವ ಮೂಲಕ ಗಮನ ಸೆಳೆದಿದ್ದಾರೆ.
ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಉಪ ವಿಭಾಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಪ ವಿಭಾಗದ ವರ್ಕ್‌ಶಾಪ್‌ನಲ್ಲಿಯೇ ನಾವು ಹಳೆ ಬಸ್ ಹೊಸದಾಗಿ ಕವಚ ನಿರ್ಮಾಣ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ಇಲ್ಲಿವರೆಗೂ 12 ಬಸ್ ಗಳಿಗೆ ಹೊಸರೂಪ ನೀಡಲಾಗಿದೆ. ಸರ್ವ ರೀತಿಯಲ್ಲಿ ಬಸ್‌ನ್ನು ಹೊಸದಾಗಿ ನಿರ್ಮಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ನಾನು ಇಂಜಿನಿಯರ್ ಆಗಿರುವುದರಿಂದ ಈ ಕೆಲಸವನ್ನು ಇಲ್ಲಿ ಕೈಗೆತ್ತಿಕೊಂಡು ಯಶಸ್ವಿಯಾಗಿ ಮಾಡುತ್ತಿದ್ದೇವೆ.
● ಹಿಮವರ್ಧನ ನಾಯ್ಡು ಅಲ್ಲೂರಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ
-ಕಾಗತಿ ನಾಗರಾಜಪ್ಪ