Advertisement

ಕೆಎಸ್ಸಾರ್ಟಿಸಿ ಧರ್ಮಸ್ಥಳ ಡಿಪೋ ಅವ್ಯವಸ್ಥೆ  ವೈರಲ್‌

04:41 PM Jun 06, 2018 | Team Udayavani |

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಧರ್ಮಸ್ಥಳ ಡಿಪೋದ ಅವ್ಯವಸ್ಥೆಯ ಬಗ್ಗೆ ಚಾಲಕ ರಮೇಶ್‌ ಅವರು ಮಾಡಿರುವ ವಿಡಿಯೋ ವೈರಲ್‌ ಆಗಿದ್ದು, ರಾಜ್ಯ ಮಟ್ಟದ ಅಧಿಕಾರಿಗಳು ಧರ್ಮಸ್ಥಳ ಡಿಪೋಗೆ ಆಗಮಿಸಿ ಪರಿಶೀಲಿಸುವಂತಾಗಿದೆ.

Advertisement

ಡಿಪೋದಲ್ಲಿ ಕನಿಷ್ಠ ಮೂಲಸೌಲಭ್ಯಗಳೇ ಇಲ್ಲ. ಸುಸ್ಥಿತಿಯಲ್ಲಿಲ್ಲದ ಬಸ್‌ಗಳನ್ನು ನೀಡಿ ಚಲಾಯಿಸಲು ಹೇಳುತ್ತಾರೆ. ಚಾಲಕರು ಹಾಗೂ ನಿರ್ವಾಹಕರು ಮುಖ ತೊಳೆಯಲೂ ನೀರಿನ ವ್ಯವಸ್ಥೆಯಿಲ್ಲ, ಬೇಸಿನ್‌ನಲ್ಲಿ ಜಿರಳೆಗಳು ತುಂಬಿವೆ. ಶೌಚಾಲಯ ಗಬ್ಬುನಾರುತ್ತಿದೆ. ಚಾಲಕರೇ ಬಸ್‌ ತೊಳೆಯಬೇಕಿದೆ. ಬಸ್‌ಗಳಿಗೆ  ರಿಸೋಲ್ಡ್‌ ಟಯರ್‌ಗಳನ್ನು ಬಳಸಲಾಗುತ್ತಿದೆ. ಹಾನಿಯಾದರೆ ಚಾಲಕರು, ನಿರ್ವಾಹಕರು, ತಾಂತ್ರಿಕ ವರ್ಗ ದಂಡ ಕಟ್ಟಬೇಕಾಗುತ್ತದೆ. ಪ್ರಶ್ನಿಸಿದರೆ ವಜಾ ಮಾಡುವ ಬಗ್ಗೆ ಮಾತನಾಡುತ್ತಾರೆ. ಈ ಎಲ್ಲ ಸಮಸ್ಯೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಲ ಕಳೆಯಬೇಕಿದೆ ಎಂದು ವೀಡಿಯೋದಲ್ಲಿ ತಿಳಿಸಲಾಗಿದೆ.

ಡೀಸೆಲ್‌ ಹಾಕಲು ಹಳೇಯಂತ್ರ
ಡಿಪೋದ ಡೀಸೆಲ್‌ ಬಂಕ್‌ನ ಯಂತ್ರ ಹಾಳಾಗಿದ್ದು, ಡೀಸೆಲ್‌ ತುಂಬಲು ಗಂಟೆಗಟ್ಟಲೆ ಕಾಯಬೇಕಾಗುತ್ತಿದೆ. ಹೊಸ
ಯಂತ್ರ ಬಂದಿದ್ದರೂ ಜೋಡಣೆ ಕಾರ್ಯ ಮಾಡದೆ ಬಿಸಿಲು, ಮಳೆಯಲ್ಲಿಡಲಾಗಿದೆ ಎಂದು ಚಾಲಕ ತಿಳಿಸಿದ್ದಾರೆ.
ವ್ಯವಸ್ಥೆಯ ಬಗ್ಗೆ ಸಿಬಂದಿ ಜತೆ ಉದಯವಾಣಿ ಮಾತನಾಡಿಸಿದಾಗ ಕೆಲವರು ಅವ್ಯವಸ್ಥೆ ಬಗ್ಗೆ ತಿಳಿಸಿದ್ದಾರೆ. ಡಿಪೋದಲ್ಲಿ ಸೂಕ್ತ ಕ್ಯಾಂಟಿನ್‌ ಇಲ್ಲದೆ ಸಮಸ್ಯೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಡಿಪೋ ಮುಖ್ಯ ದ್ವಾರದ ಮುಂದೆಯೇ ಕಸ ಎಸೆಯುತ್ತಿರುವ ಬಗ್ಗೆಯೂ ದೂರಿದ್ದಾರೆ.

ಅಧಿಕಾರಿಗಳ ಭೇಟಿ
ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ವೈರಲ್‌ ಆಗಿರುವುದನ್ನು  ಗಮನಿಸಿ ಬೆಂಗಳೂರಿನಿಂದ ಡೆಪ್ಯುಟಿ ಚೀಫ್‌ ಮೆಕ್ಯಾನಿಕಲ್‌ ಎಂಜಿನಿಯರ್‌ ಹಾಗೂ ವಿಭಾಗೀಯ ತಾಂತ್ರಿಕ ಆಭಿಯಂತರು ಸ್ಥಳಕ್ಕೆ ಭೇಟಿ ಪರೀಶೀಲನೆ ನಡೆಸಿ, ಮಾಹಿತಿ ಪಡೆದಿದ್ದಾರೆ.

ಶಿಸ್ತು ಕ್ರಮ
ಸ್ವಾಭಾವಿಕವಾಗಿ ಕಟ್ಟಡ ಹಾಗೂ ವಸ್ತುಗಳು ಹಳತಾಗಿವೆ. ಆದ್ದರಿಂದ ಕಾರ್ಯನಿರ್ವಹಣೆ ಸ್ವಲ್ಪ ನಿಧಾನವಾಗುತ್ತಿದೆ. ಆದರೆ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಡಿಪೋ ವಿಸ್ತರಣಾ ಕಾಮಗಾರಿ ನಡೆಯುತ್ತಿದೆ. 1 ತಿಂಗಳಲ್ಲಿ ಸಿದ್ಧವಾಗಿ ಸೇವೆಗೆ ಲಭ್ಯವಾಗಲಿದೆ. ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಸಂಸ್ಥೆಯ ಒಳಗೆ ಅನುಮತಿ ಪಡೆಯದೆ ಚಿತ್ರೀಕರಣ ಮಾಡಿರುವ ಬಗ್ಗೆ ಶಿಸ್ತು ಕ್ರಮ ಜರಗಿಸಲಾಗುತ್ತದೆ.
– ಪಾಪಾ ನಾಯಕ್‌, ಧರ್ಮಸ್ಥಳ ಡಿಪೋ ಮ್ಯಾನೇಜರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next