ಚಿಕ್ಕಬಳ್ಳಾಪುರ: ತಾಲೂಕಿನ ನಲ್ಲಗುಟ್ಟಪಾಳ್ಯ ಬಳಿ ಗುರುವಾರ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕ್ರೂಸರ್ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಕ್ರೂಸರ್‌ನಲ್ಲಿದ್ದ ಚಾಲಕ ಮತ್ತು ವೃದ್ಧರೋರ್ವರು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು , ಇತರ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ದುರ್‌ದೈವಿಗಳು ಕ್ರೂಸರ್ ಚಾಲಕ ಜಂಗಮಾರಪಳ್ಳಿ ನಿವಾಸಿ ಶ್ರೀನಿವಾಸ್ (27)ಮತ್ತು ವೆಂಕಟೇಶಪ್ಪ ಎಂದು ಗುರುತಿಸಲಾಗಿದೆ.
ನಾಸ್ತಿಮನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದ ಬಸ್‌ನ ಸ್ಟಿಯರಿಂಗ್ ತುಂಡಾಗಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ತೀವ್ರತೆಗೆ ಕ್ರೂಸರ್ ಬಸ್‌ನ ಒಳಗೆ ನುಸುಳಿದ್ದು ಇಬ್ಬರ ಮೃತ ದೇಹಗಳು ನಜ್ಜುಗುಜ್ಜಾಗಿದ್ದು ಹೊರಗೆಳೆಯಲು ಹರಸಾಹಸ ಪಡಬೇಕಾಯಿತು.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.