Advertisement
ಈ ನಿಟ್ಟಿನಲ್ಲಿ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದ್ದು, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಯೋಗದಲ್ಲಿ ತಿಂಗಳಲ್ಲಿ ಘಟಕಗಳು ತಲೆಯೆತ್ತಲಿವೆ. ಇದರಿಂದ ನಿಲ್ದಾಣಗಳಿಗೆ ಬರುವ ಎಲ್ಲ ಪ್ರಕಾರದ ಪ್ರಯಾಣಿಕರಿಗೂ ಕೇವಲ ಒಂದು ರೂ. ಕಾಯಿನ್ ಹಾಕಿ, ಒಂದು ಲೀಟರ್ ಶುದ್ಧ ಕುಡಿಯುವ ನೀರು ಪಡೆಯಬಹುದು.ಈ ಸೇವೆ ಜಾರಿಯಾದರೆ, ದೇಶದ ಸರ್ಕಾರಿ ಬಸ್ ಸಾರಿಗೆ ವ್ಯವಸ್ಥೆಯಲ್ಲಿ ಈ ಸೇವೆ ಒದಗಿಸುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೆಎಸ್‌ಆರ್‌ಟಿಸಿ ಪಾತ್ರವಾಗಲಿದೆ.
ಯೋಜನೆ ಉದ್ದೇಶ ಕೇವಲ ಪ್ರಯಾಣಿಕರಿಗೆ ನೀರು ಕಲ್ಪಿಸುವುದಲ್ಲ; ಆ ನಿಲ್ದಾಣಗಳ ಸುತ್ತಲಿನ ಗ್ರಾಮೀಣ ಜನರಿಗೂ ಈ ಮೂಲಕ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಈಗಲೂ ಎಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರು ನಿಯಮಿತವಾಗಿ ಪೂರೈಕೆ ಆಗುತ್ತಿಲ್ಲ. ಇದಕ್ಕಾಗಿ ಹತ್ತಾರು ಕಿ.ಮೀ. ಹೋಗುವ ಉದಾಹರಣೆಗಳೂ ಇವೆ. ಆದರೆ, ಈ ಘಟಕಗಳಿಂದ ಕೇವಲ ಒಂದು ರೂಪಾಯಿಗೆ 1 ಲೀ. ನೀರು ದೊರೆಯುವುದರಿಂದ ಸುತ್ತಲಿನ ನೀರಿನ ಬವಣೆ ಕೂಡ ತಪ್ಪಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ನಿಲ್ದಾಣಗಳನ್ನೇ ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗಿದೆ. ಘಟಕಗಳಲ್ಲಿ ನೀರು ಪಡೆಯಲು ಯಾವುದೇ ನಿರ್ಬಂಧಗಳಿಲ್ಲ. ಯಾರು ಬೇಕಾದರೂ ದಿನದ 24 ಗಂಟೆಯೂ ನೀರು ಪಡೆಯಬಹುದು. ನಿತ್ಯ 24 ಸಾವಿರ ಲೀ. ನೀರು ಈ ಘಟಕಗಳಿಗೆ ಪೂರೈಕೆ ಆಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
Related Articles
Advertisement
ಬರುವ ತಿಂಗಳು ಕಾರ್ಯಾರಂಭಬಿಪಿಸಿಎಲ್ನಿಂದ 30 ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಉಳಿದಂತೆ ಕೆಲವೆಡೆ ಶಾಸಕರು, ಸ್ಥಳೀಯ ಪ್ರತಿನಿಧಿಗಳು ಮುಂದೆಬಂದಿದ್ದಾರೆ. ಅಲ್ಲದೆ, ಕೆಎಸ್‌ಆರ್‌ಟಿಸಿಯ ಆಯಾ ವಿಭಾಗಗಳಿಂದಲೂ ನಿರ್ಮಿಸಲಾಗುತ್ತಿದೆ. ಇದೆಲ್ಲವೂ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ ಕೆಲವು ಘಟಕಗಳು ಬರುವ ತಿಂಗಳಿಂದಲೇ ಕಾರ್ಯಾರಂಭ ಮಾಡಲಿವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ತಿಳಿಸಿದರು. ಈ ಮಧ್ಯೆ ಬಿಎಂಟಿಸಿ ಕೂಡ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಸ್ಥಳೀಯ ಜನಪ್ರತಿನಿಧಿಗಳ ಅನುದಾನದಿಂದ ಪ್ರಮುಖ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ನಗರ ಪ್ರದೇಶಗಳಲ್ಲಿ 5 ರೂ.ಗಳಿಗೆ 20 ಲೀ. ಕುಡಿಯುವ ನೀರು ದೊರೆಯುತ್ತಿದೆ. ಇದಕ್ಕೆ ಹೋಲಿಸಿದರೆ, ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ 1 ರೂ.ಗೆ 1 ಲೀ. ನೀರು ತುಸು ದುಬಾರಿ ಎನಿಸುತ್ತದೆ. ಯಾಕೆಂದರೆ, ಹಳ್ಳಿ ಜನ ಕೂಡ ಇಲ್ಲಿಂದ ನೀರು ಪಡೆಯಲು ಅನುಮತಿ ಇರುವುದರಿಂದ, ಅಂತಹವರಿಗೆ ಸ್ವಲ್ಪ ಅಗ್ಗದ ದರದಲ್ಲಿ ಪೂರೈಸುವ ಅವಶ್ಯಕತೆ ಇದೆ ಎಂಬ ಒತ್ತಾಯ ವಿವಿಧ ಗ್ರಾಮೀಣ ಭಾಗದ ಜನರಿಂದ ಕೇಳಿಬಂದಿದೆ. ಘಟಕಗಳ ಅಳವಡಿಕೆ ಎಲ್ಲೆಲ್ಲಿ?
ಧರ್ಮಸ್ಥಳ, ಸುಬ್ರಹ್ಮಣ್ಯ, ಕುಂದಾಪುರ,ಪಾಂಡವಪುರ, ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ, ಮೇಲುಕೋಟೆ, ಕೆ.ಆರ್. ಪೇಟೆ, ಹರಪನಹಳ್ಳಿ, ಹರಿಹರ, ಹೊನ್ನಾಳಿ, ಜಗಳೂರು, ಭದ್ರಾವತಿ, ಹಿರಿಯೂರು.