Advertisement

ಮತ್ತೆ ಹಳ್ಳಿ ರಸ್ತೆಗಿಳಿಯಲು ಕೆಎಸ್‌ಆರ್‌ಟಿಸಿ ಬಸ್‌ ಸಿದ್ಧ

10:07 PM Jan 04, 2021 | Team Udayavani |

ಬೆಳ್ತಂಗಡಿ: ಕಳೆದ ಒಂಬತ್ತು ತಿಂಗಳುಗಳಿಂದ ಹಳ್ಳಿ ರಸ್ತೆಗಿಳಿಯದ ಸಾರಿಗೆ ಬಸ್‌ಗಳು ಶಾಲೆ ಆರಂಭವಾಗುತ್ತಲೆ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅಗತ್ಯಕ್ಕನುಗುಣವಾಗಿ ಹೆಚ್ಚುವರಿ ಬಸ್‌ ಓಡಾಟ ನಡೆಸಲು ಧರ್ಮಸ್ಥಳ ಘಟಕದಿಂದ ಸಿದ್ಧತೆ ನಡೆಸಲಾಗುತ್ತಿದೆ.
ಲಾಕ್‌ಡೌನ್‌ ತೆರವುಗೊಂಡ ಬಳಿಕ ಬೇಡಿಕೆಗೆ ಅನುಗುಣವಾಗಿ ಬಸ್‌ ಓಡಾಟ ನಡೆಸಲಾಗುತ್ತಿತ್ತು. ಜ.1ರಿಂದ ಶಾಲೆ ಆರಂಭಗೊಂಡಿದ್ದು, ವಿದ್ಯಾರ್ಥಿ ಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಬಸ್‌ ವ್ಯವಸ್ಥೆ ಕೊರತೆಯಾಗಿತ್ತು. ನೆರಿಯಾ, ದಿಡುಪೆ, ಚಾರ್ಮಾಡಿ, ಕೊಯ್ಯುರು, ಬೆಳಾಲು, ಕೊಲ್ಲಿ ರಸ್ತೆಗಳಲ್ಲಿ ಈ ಹಿಂದೆ ಪ್ರತಿನಿತ್ಯ ಎರಡು ಬಸ್‌ ಓಡಾಟ ನಡೆಸುವುದು ಅನುಮಾನವಾಗಿತ್ತು.

Advertisement

ಪ್ರಸಕ್ತ ಬೆಳಗ್ಗೆ 7.30ರಿಂದ ಸಂಜೆ 6ಗಂಟೆವರೆಗೆ 5 ಶೆಡ್ನೂಲ್‌ಗ‌ಳಲ್ಲಿ ಬಸ್‌ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಕೊಲ್ಲಿ ಪ್ರದೇಶಕ್ಕೆ ಕೇವಲ ವಿದ್ಯಾರ್ಥಿಗಳಿಗಾಗಿಯೇ ಬೆಳಗ್ಗೆ ಬೆಳ್ತಂಗಡಿಯಿಂದ 7, 7.30, ಸಂಜೆ 5 ಗಂಟೆಗೆ ಮತ್ತು 5.15ಕ್ಕೆ ಎರಡು ಬಸ್‌ಗಳ ಓಡಾಟ ನಡೆಸಲಾಗುತ್ತಿದೆ. ಈ ಮಧ್ಯೆ ಖಾಸಗಿ ಬಸ್‌, ಜೀಪು ಇನ್ನಿತರ ವಾಹನಗಳೂ ಓಡಾಟವೂ ನಡೆಸುತ್ತಿದೆ.

ಜ.1ರಿಂದ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಗೆ ಶಾಲೆ ಹಾಗೂ ಕಾಲೇಜು, 6ರಿಂದ 9ನೇ ತರಗತಿಯವರೆಗೆ ವಿದ್ಯಾಗಮ ಆರಂಭವಾಗಿದೆ. ಕಕ್ಕಿಂಜೆ, ಅಣಿಯೂರು ಗಂಡಿಬಾಗಿಲು, ದೇವಗಿರಿ, ನೆರಿಯ ಭಾಗದ ವಿದ್ಯಾರ್ಥಿಗಳಿಗೆ ಆರಂಭದ ನಾಲ್ಕು ದಿನ ಸಮರ್ಪಕ ಸಮಯಕ್ಕೆ ಬಸ್‌ಗಳಿಲ್ಲದೆ ತಡಕಾಡುವಂತಾಗಿತ್ತು. ಇದಕ್ಕಾಗಿ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯುವ ಬದಲಾಗಿ ಪರ್ಯಾಯ ಬಸ್‌ ಅಥವಾ ಇತರ ವಾಹನಗಳನ್ನು ಅನುಸರಿಸಬೇಕಾಗಿತ್ತು.  ಪ್ರಸಕ್ತ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿಗಳಿಗಾಗಿಯೆ ಹೆಚ್ಚುವರಿ ಬಸ್‌ ಓಡಾಟ ನಡೆಸಲು ನಿರ್ಧರಿಸಿದೆ.

ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕಿದೆ
ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಬಸ್‌ ಅನ್ನು ಅವಲಂಬಿಸುವವರೇ ಇಲ್ಲದಾಗಿದೆ. ಈ ಮಧ್ಯೆ ಖಾಲಿ ಬಸ್‌ ಓಡಾಟ ನಡೆಸಿದರೆ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುವಂತಾಗಲಿದೆ.  ಹೀಗಾಗಿ ವಿದ್ಯಾರ್ಥಿಗಳು ಬಸ್‌ ಮಾರ್ಗ ಸೂಚಿ ಅನುಸರಿಸಿ ಸಂಚಾರ ನಡೆಸಿದಲ್ಲಿ ಅನುಕೂಲ ವಾಗಲಿದೆ. ಇತ್ತ ಕೆಎಸ್‌ಆರ್‌ಟಿ ಬಸ್‌ಗಳು ಸೀಟು ಭರ್ತಿಯಾಗದೆ ಹೊರಡೆದೆ ಇರುವುದರಿಂದ ಕೆಲವೊಮ್ಮೆ ಸಮಯ ವ್ಯತ್ಯಯ ಸಮಸ್ಯೆ ಎದುರಿಸಬೇಕಾಗಿ ಬಂದಿದೆ.

ಜ.31ರ ವರೆಗೆ ಉಚಿತ ಓಡಾಟ
ಡಿ.31ರವರೆಗೆ ಬಸ್‌ ಪಾಸ್‌ ಪಡೆಯಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಬಸ್‌ ಪಾಸ್‌ಗೆ ಬೇಡಿಕೆ ಇಲ್ಲದಿರುವುದರಿಂದ ಬಸ್‌ ಹೆಚ್ಚುವರಿ ನಿಗದಿಪಡಿಸಲು ಸಮಸ್ಯೆಯಾಗಿದೆ. ಬಸ್‌ ಪಾಸ್‌ ಆನ್‌ಲೈನ್‌ ಸೇವಾ ಸಿಂಧು ಮೂಲಕ ನಡೆಸುವುದರಿಂದ ಪಾಸ್‌ಗೆ ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿದೆ. ಆಧಾರ್‌ಗೆ ಫೋನ್‌ ನಂಬರ್‌ ಲಿಂಕ್‌ ಆಗದಿರುವುದರಿಂದ ಮತ್ತಷ್ಟು ವಿಳಂಬವಾಗಿದೆ. ಇದಕ್ಕಾಗಿ ಜ.31ರ ವರೆಗೆ ಬಸ್‌ ಪಾಸ್‌ಗೆ ಅರ್ಜಿ ಸಲ್ಲಿಸಲು ದಿನ ಮುಂದೂಡಲಾಗಿದೆ. ಜತೆಗೆ ವಿದ್ಯಾರ್ಥಿಗಳು ಜ.31ರ ವರೆಗೆ ಹಳೆ ಪಾಸ್‌ ಅಥವಾ ಶಾಲಾ ಶುಲ್ಕದ ರಶೀದಿ ನೀಡಿದರೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಾಲೆ ವಿಳಂಬವಾಗಿ ಆರಂಭವಾಗಿದ್ದರಿಂದ ಈವರೆಗೆ ಕೇವಲ 250 ಬಸ್‌ ಪಾಸ್‌ಗಳಷ್ಟೆ ನೀಡಲಾಗಿದೆ. ಕಳೆದ ವರ್ಷ ಸುಮಾರು 9,200 ಪಾಸ್‌ ವಿತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈಗಾಗಲೇ ಓಡುವ , ಹೆಚ್ಚುವರಿ ಬಸ್‌ ಓಡಾಟದ ಸಮಯ
ಬೆಳ್ತಂಗಡಿ- ಕೊಯ್ಯೂರು
ಬೆಳಗ್ಗೆ 7.20, 9.00, 9.45, 11.15, ಮಧ್ಯಾಹ್ನ 12.30, 2.00, 3.45, ಸಂಜೆ 5.15, 6.45ಗಂಟೆವರೆಗೆ.
ಬೆಳ್ತಂಗಡಿ-ದಿಡುಪೆ
ಬೆಳಗ್ಗೆ 9.00, 10.00, 11.15, ಮಧ್ಯಾಹ್ನ 2.45, 4.15, 5.15 ಗಂಟೆಗೆ.
ಬೆಳ್ತಂಗಡಿ-ಚಾರ್ಮಾಡಿ
ಬೆಳಗ್ಗೆ 8.45, 9.30, 11.15, 11.45, ಮಧ್ಯಾಹ್ನ 1.30, 2.30, ಸಂಜೆ 3.45, 4.30, 5.15ಗಂಟೆಗೆ ಅನುಕೂಲಕ್ಕೆ ತಕ್ಕಂತೆ. ಉಳಿದಂತೆ ಉಡುಪಿ, ಮಂಗಳೂರಿಂದ ಪ್ರತ್ಯೇಕ ಬಸ್‌ಗಳು ಓಡಾಟ ನಡೆಸುತ್ತಿವೆ.
ಉಜಿರೆ -ಬೆಳಾಲು
ಬೆಳಗ್ಗೆ 9.00, 12.00, ಮಧ್ಯಾಹ್ನ 2.00, ಸಂಜೆ 4.00, 5.30, 6.30ಕ್ಕೆ
ಬೆಳ್ತಂಗಡಿ -ನೆರಿಯ
ಬೆಳಗ್ಗೆ 8.30, 9.00, 10.00, 11.00, 11.30, 12.00, ಮಧ್ಯಾಹ್ನ 1.00, 2.00, 2.45, 4.00, 5.15ಕ್ಕೆ ಓಡಾಟ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next