Advertisement

ಅಭಿವೃದ್ಧಿಯಾಗಲಿದೆ ಬಿಜೈ ಕೆ.ಎಸ್.ಆರ್.ಟಿ.ಸಿ. ಜಂಕ್ಷನ್‌; ಸುಗಮ ವಾಹನ ಸಂಚಾರಕ್ಕೆ ಅನುಕೂಲ

12:46 PM Nov 04, 2022 | Team Udayavani |

ಮಹಾನಗರ: ನಗರದಲ್ಲಿನ ವಿವಿಧ ಜಂಕ್ಷನ್‌ಗಳ ಅಭಿವೃದ್ಧಿಗೆ ಸ್ಥಳೀಯಾಡಳಿತ ಮುಂದಾಗಿದ್ದು, ಅದರಂತೆ ಬಿಜೈ ಕೆಎಸ್ಸಾರ್ಟಿಸಿ ಜಂಕ್ಷನ್‌ ಅಭಿವೃದ್ಧಿ ಸದ್ಯದಲ್ಲೇ ಆರಂಭಗೊಳ್ಳುವ ನಿರೀಕ್ಷೆ ಇದೆ.

Advertisement

ನಗರದ ಪ್ರಮುಖ ಜಂಕ್ಷನ್‌ ಎನಿಸಿಕೊಂಡ ಬಿಜೈ ಬಳಿಯ ಕೆಎಸ್ಸಾರ್ಟಿಸಿ ಜಂಕ್ಷನ್‌ ಈವರೆಗೆ ಹೇಳಿಕೊಳ್ಳುವಷ್ಟು ಅಭಿವೃದ್ಧಿಗೊಂಡಿಲ್ಲ. ಸೂಕ್ತ ಯೋಜನೆ ಇಲ್ಲದ ಕಾರಣ ಸುತ್ತಮುತ್ತ ವಾಹನ ಸಂಚಾರ ದಟ್ಟಣೆಯಿಂದ ಕೂಡಿತ್ತು. ಇದೀಗ ಜಂಕ್ಷನ್‌ ಅಭಿವೃದ್ಧಿಗೊಂಡರೆ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಬಹುದು. ರಸ್ತೆ ವಿಸ್ತ ರಣೆ ಸಹಿತ ಜಂಕ್ಷನ್‌ ಅಭಿವೃದ್ಧಿ ದೃಷ್ಟಿಯಲ್ಲಿ ಆ ಭಾಗದ ಸಾರ್ವಜನಿಕರ ಜತೆ ಮಾತುಕತೆ ನಡೆಸಲಾಗುತ್ತಿದೆ.

ಈ ಜಂಕ್ಷನ್‌ನಲ್ಲಿ ದಿನಂಪ್ರತಿ ನೂರಾರು ವಾಹನಗಳು ಅತ್ತಿಂದಿತ್ತ ಸಂಚರಿಸುತ್ತದೆ. ಈ ಭಾಗದಲ್ಲಿರುವ ಅಸಮರ್ಪಕ ವ್ಯವಸ್ಥೆಯ ಪರಿಣಾಮ ಸಾರ್ವಜನಿಕರು, ವಾಹನ ಸವಾರರು ದಿನಂಪ್ರತಿ ಸಂಕಷ್ಟ ಪಡುವಂತಾಗಿದೆ. ಮಂಗಳೂರು ಪಾಲಿಕೆಗೆ ಕೂಗಳತೆ ದೂರದಲ್ಲಿರುವ ಈ ಜಂಕ್ಷನ್‌ ಅಭಿವೃದ್ಧಿಗೆ ಪಾಲಿಕೆ ಈ ಹಿಂದೆಯೇ ಹಣ ಮೀಸಲಿರಿಸಿದ್ದರೂ ಅಭಿವೃದ್ಧಿ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಕೆಎಸ್ಸಾರ್ಟಿಸಿ ಜಂಕ್ಷನ್‌ನಲ್ಲಿ ಕೆಎಸ್ಸಾರ್ಟಿಸಿ, ಸಿಟಿ, ಸರ್ವಿಸ್‌ ಬಸ್‌ಗಳು ಅತ್ತಿಂದಿತ್ತ ಸಂಚರಿಸುತ್ತದೆ. ರಾತ್ರಿ ವೇಳೆ ದೂರದ ಊರುಗಳಿಗೆ ತೆರಳುವ ಬಸ್‌ ಗಳು ಅಲ್ಲೇ ನಿಲ್ಲುತ್ತದೆ. ಈ ಭಾಗದಲ್ಲಿ ಬಸ್‌ ನಿಲ್ದಾಣಕ್ಕೆ ತಿರುವು ಪಡೆಯುವ ಪ್ರದೇಶ ಅವೈಜ್ಞಾನಿಕವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ.

ರಾಜ್ಯದ ವಿವಿಧ ಕಡೆಗಳಿಂದ ಬರುವ ಕೆಎಸ್ಸಾರ್ಟಿಸಿ ಬಸ್‌ಗಳು ಇದೇ ವೃತ್ತವನ್ನು ಕಷ್ಟದಿಂದ ಬಸ್‌ ನಿಲ್ದಾಣಕ್ಕೆ ತಿರುವು ಪಡೆದುಕೊಳ್ಳುತ್ತದೆ. ಬಸ್‌ ನಿಲ್ದಾಣದಿಂದ ಹೊರಬರುವ ಬಸ್‌ಗಳು ಕೂಡ ಏರು ವೃತ್ತದಲ್ಲಿ ಬಂದು, ಎಡಕ್ಕೆ ತಿರುಗಿಸಲು ಹರಸಾಹಸಪಡುವಂತಾಗಿದೆ. ಈ ಪ್ರದೇಶ ಎತ್ತರ ತಗ್ಗು ಇದ್ದು, ವೈಜ್ಞಾನಿಕ ಮಾದರಿಯಲ್ಲಿಲ್ಲ.

Advertisement

ಸಿಗ್ನಲ್‌ ಇಲ್ಲ; ಕಿರಿದು ರಸ್ತೆ ಕೆಎಸ್ಸಾರ್ಟಿಸಿ ಜಂಕ್ಷನ್‌ ರಸ್ತೆ ಅಗಲ ಇದ್ದರೂ ಗಾಡಿಗಳು, ವ್ಯಾಪಾರ ನಿಟ್ಟಿನಲ್ಲಿ ರಸ್ತೆ ಆಕ್ರಮಿಸಿದೆ. ಪರಿಣಾಮ ರಸ್ತೆ ಕಿರಿದಾಗಿದ್ದು, ಸಿಗ್ನಲ್‌ ವ್ಯವಸ್ಥೆ ಇಲ್ಲ. ಈ ಜಂಕ್ಷನ್‌ ನಿಂದ ಕಾಪಿಕಾಡ್‌, ನಂತೂರು, ಲಾಲ್‌ಬಾಗ್‌, ಕೆಎಸ್ಸಾರ್ಟಿಸಿಗೆ ರಸ್ತೆ ಕವಲೊಡೆಯುತ್ತದೆ. ಇಲ್ಲಿ ವ್ಯವಸ್ಥಿತ ಸಿಗ್ನಲ್‌, ಪಾದಚಾರಿ ಮಾರ್ಗ ಇರದ ಪರಿಣಾಮ ವಿವಿಧ ಕಡೆಯಿಂದ ಬರುವ ವಾಹನ ತಿರುವು ಪಡೆಯಬೇಕಾದರೆ ತುಸು ಕಷ್ಟವಾಗುತ್ತದೆ. ಇನ್ನು, ಜಂಕ್ಷನ್‌ ಪಕ್ಕದಲ್ಲಿಯೇ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ಜಂಕ್ಷನ್‌ ಅಭಿವೃದ್ಧಿ: ನಗರದ ವಿವಿಧ ಕಡೆಗಳಲ್ಲಿ ಜಂಕ್ಷನ್‌ ಅಭಿವೃದ್ಧಿಗೊಳ್ಳುತ್ತಿದ್ದು, ಅದರಂತೆಯೇ ನಗರದ ಪ್ರಮುಖ ಜಂಕ್ಷನ್‌ ಎನಿಸಿದ ಬಿಜೈ ಕೆಎಸ್ಸಾರ್ಟಿಸಿ ಜಂಕ್ಷನ್‌ ಅಭಿವೃದ್ಧಿಗೊಳ್ಳಲಿದೆ. ಈ ಜಂಕ್ಷನ್‌ ನಲ್ಲಿ ಪ್ರೀ ಲೆಪ್ಟ್, ಪಾದಚಾರಿ ಮಾರ್ಗ, ರಸ್ತೆ ವಿಸ್ತರಣೆಗೆ ಪ್ರಾಶಸ್ತ್ಯ ನೀಡಲಾಗುವುದು. -ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next