ಬೆಂಗಳೂರು: ಸರ್ದಾರ್ ವಲ್ಲಭಾಯ್ ಪಟೇಲ್ ಅವರ 144ನೇ ಜನ್ಮದಿನದ ಅಂಗವಾಗಿ ಗುಜರಾತ್‌ನ ಕೆವಡಿಯಾದಲ್ಲಿರುವ “ಏಕತಾ ಪ್ರತಿಮೆ’ ಬಳಿ ಗುರುವಾರ ನಡೆದ “ಏಕತಾ ಪಥಸಂಚಲನ’ದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ತಂಡ ಕೂಡ ಪಾಲ್ಗೊಂಡಿತ್ತು.
ದಕ್ಷಿಣ ಭಾರತ ರಾಜ್ಯಗಳ ಪೈಕಿ ಪಾಲ್ಗೊಂಡಿದ್ದ ಏಕೈಕ ಪೊಲೀಸ್ ಪಡೆ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಆಕರ್ಷಕ ಪಥಸಂಚಲನ ಮಾಡಿ ಗಮನ ಸೆಳೆಯಿತು.
ಕೆಎಸ್‌ಆರ್‌ಪಿಯ 9 ಪಡೆಗಳಿಂದ 80 ಮಂದಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಪಥಸಂಚಲನ ತಂಡದಲ್ಲಿದ್ದರು. 4ನೇ ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ಗಂಗಯ್ಯ ಅವರು ಪಥಸಂಚಲನದ ನೇತೃತ್ವ ವಹಿಸಿ ಮುನ್ನಡೆಸಿದರು. ಬಿಎಸ್‌ಎಫ್ನ ಮಹಿಳಾ ಪೊಲೀಸ್ ಪಡೆ, ಪ್ಯಾರಾ ಮಿಲಿಟರಿ, ಗುಜರಾತ್ ಪೊಲೀಸ್ ಪಡೆ, ಒಡಿಸ್ಸಾ, ಅಸ್ಸಾಂ ಪೊಲೀಸ್ ಪಡೆಗಳು ಸೇರಿ ಒಟ್ಟು ಐದು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು.
ಪಥಸಂಚಲನ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್, ಎಡಿಜಿಪಿಗಳಾದ ಪಿ.ಜಿ ಸಂಧು ಸೇರಿದಂತೆ ಹಲವು ಹಿರಿಯ ಪೊಲೀಸ್ ಆಧಿಕಾರಿಗಳು ಉಪಸ್ಥಿತರಿದ್ದರು.ಕೆಎಸ್‌ಆರ್‌ಪಿ ಪೊಲೀಸ್ ಪಡೆಯ ಪಥಸಂಚಲನ ಅಚ್ಚುಕಟ್ಟಾಗಿ ನಡೆಸಿಕೊಟ್ಟಿತು ಎಂದು ಎಡಿಜಿಪಿ ಅಲೋಕ್‌ಕುಮಾರ್ ತಿಳಿಸಿದರು.
ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು. ಬೇರೆ ರಾಜ್ಯಗಳಿಂದ ಆಗಮಿಸಿದ್ದ ತಂಡಗಳು ಹಾಗೂ ಗಣ್ಯರಿಂದ ನಮ್ಮ ಪಥಸಂಚಲನಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಯಿತು ಎಂದು ತಂಡದಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.
ಕೋರಮಂಗಲದಲ್ಲಿ ಏಕತಾ ಓಟ !
ಸರ್ಧಾರ್ ವಲ್ಲಭಾಯ್ ಪಟೇಲ್ ಜನ್ಮದಿನದ ಅಂಗವಾಗಿ ಕೋರಮಂಗಲದಲ್ಲಿರುವ ಮೂರು ಹಾಗೂ ನಾಲ್ಕನೇ ಬೆಟಾಲಿಯನ್ ವತಿಯಿಂದ ಏಕತಾ ಓಟ ಮಾಡಲಾಯಿತು. ಕಮಾಂಡೆಂಟ್ ರಾಮಕೃಷ್ಣ ಪ್ರಸಾದ್, ಅಸಿಸ್ಟೆಂಟ್ ಕಮಾಂಡೆಂಟ್‌ಗಳಾದ ರಮೇಶ್, ಲೋಕೇಶ್ ಮೆಳ್ಳಗಟ್ಟಿ ಸೇರಿದಂತೆ ಕೆಎಸ್‌ಆರ್‌ಪಿ ಸಿಬ್ಬಂದಿ ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು.