Advertisement

ಚುನಾವಣೆ ಸೇವೆಗೆ ಕೆಎಸ್‌ಆರ್‌ಪಿ ಸಿದ್ಧ

12:27 AM Apr 09, 2019 | Lakshmi GovindaRaju |

ಬೆಂಗಳೂರು: ದೇಶದಲ್ಲಿ ಲೋಕಸಭೆ ಚುನಾವಣೆ ಆಖಾಡ ರಂಗೇರಿದ್ದು, ಚುನಾವಣಾ ಪ್ರಕ್ರಿಯೆ ಯಶಸ್ಸಿನಲ್ಲಿ ಆಯಾ ರಾಜ್ಯದ ಪೊಲೀಸ್‌ ಸೇವೆ ಅತ್ಯಂತ ಪ್ರಮುಖವಾಗಿದ್ದು, ಇದರಲ್ಲಿ ಆಯಾ ರಾಜ್ಯಗಳ ಮೀಸಲು ಪೊಲೀಸ್‌ ಪಡೆಗಳು ಶ್ರಮಿಸುತ್ತವೆ.

Advertisement

ದೇಶದ ಉತ್ತಮ ಮೀಸಲು ಪೊಲೀಸ್‌ ಪಡೆಗಳಲ್ಲಿ ಒಂದಾಗಿರುವ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) ಕೂಡ 17ನೇ ಲೋಕಸಭೆ ಚುನಾವಣೆ ಸೇವೆಗೆ ಸಜ್ಜಾಗಿದೆ. ಮೊದಲ ಹಂತದಲ್ಲಿ ಆಂಧ್ರಪ್ರದೇಶ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಯಶಸ್ಸಿಗೆ ರಾಜ್ಯ ಕೆಎಸ್‌ಆರ್‌ಪಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.

ದೇಶದ ಉತ್ತಮ ಸಶಸ್ತ್ರ ಮೀಸಲು ಪೊಲೀಸ್‌ ಪಡೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಹೊಂದಿರುವ ಕೆಎಸ್‌ಆರ್‌ಪಿಯ 900ಕ್ಕೂ ಅಧಿಕ ಸಿಬ್ಬಂದಿ ಆಂಧ್ರ ಚುನಾವಣಾ ಸೇವೆಗೆ ನಿಯೊಜನೆಗೊಂಡಿದ್ದಾರೆ. ಕರೂ°ಲು ಹಾಗೂ ಕಡಪ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಪಿಯ 9 ಕಂಪನಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಏ.11ರ ಮತದಾನದ ಬಳಿಕ ವಾಪಸಾಗಲಿದ್ದಾರೆ. ನಂತರ ಆಯೋಗದ ಸೂಚನೆ ಮೇರೆಗೆ ಬೇರೆಡೆ ಕರ್ತವ್ಯಕ್ಕೆ ತೆರಳಲಿದ್ದಾರೆ.

ಕೆಎಸ್‌ಆರ್‌ಪಿಯ 14 ಬೆಟಾಲಿಯನ್‌ಗಳನ್ನು ಚುನಾವಣೆ ಆಯೋಗ ಈಗಾಗಲೇ ಸೇವೆಗೆ ಪಡೆದುಕೊಂಡಿದ್ದು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಪೂರ್ಣಗೊಳ್ಳುವವರೆಗೆ ಆಯೋಗದ ಸೂಚನೆ ಮೇರೆಗೆ ನೆರೆರಾಜ್ಯಗಳು ಸೇರಿದಂತೆ ಇತರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಲಿವೆ.

“ಚುನಾವಣೆ ಪೂರ್ಣಗೊಳ್ಳುವವರೆಗೆ ಬಹುತೇಕ ವಿಶ್ರಾಂತಿ ಎಂಬುದಿಲ್ಲ. ಕುಟುಂಬ ಸದಸ್ಯರಿಂದ ದೂರವೇ ಉಳಿದಿರುತ್ತೇವೆ. ಆದರೆ, ಪ್ರಜಾಪ್ರಭುತ್ವದ ಪ್ರಮುಖ ಭಾಗವಾಗಿರುವ ಚುನವಣಾ ಪ್ರಕ್ರಿಯೆ ಯಶಸ್ವಿಗೊಳಿಸಲು ಸೇವೆ ಸಲ್ಲಿಸುವುದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ’ ಎಂದು ಕೆಎಸ್‌ಆರ್‌ಪಿ ಸಿಬ್ಬಂದಿ ಹೇಳುತ್ತಾರೆ.

Advertisement

ಕೆಎಸ್‌ಆರ್‌ಪಿ ಸಂಖ್ಯಾಬಲ
-ಸಿಬ್ಬಂದಿ ಸುಮಾರು 14 ಸಾವಿರ
-ಬೆಟಾಲಿಯನ್‌ಗಳು 12
-ಸ್ಪೆಷಲ್‌ ಆ್ಯಕ್ಷನ್‌ ಪೋರ್ಸ್‌ 1 ಬೆಟಾಲಿಯನ್‌
-ಇಂಡಿಯನ್‌ ರಿಸರ್ವ್‌ ಬೆಟಾಲಿಯನ್‌ 2

ವೀರಪ್ಪನ್‌ ಹಿಡಿಯುವಲ್ಲಿ ನಿರ್ಣಾಯಕ ಪಾತ್ರ: ದಿನದ 24 ಗಂಟೆ ಸೇವೆಗೆ ಕಟಿಬದ್ಧವಾಗಿರುವ ಕೆಎಸ್‌ಆರ್‌ಪಿ ಪಡೆಗಳು, ತುರ್ತು ಸಂಧರ್ಭಗಳಲ್ಲಿ ಪರಿಸ್ಥಿತಿ ನಿಯಂತ್ರಿಸುವ ಕರ್ತವ್ಯ, ವಿಶೇಷ ಕಾರ್ಯಕ್ರಮಗಳು, ಚುನಾವಣೆ ಕರ್ತವ್ಯ, ಸಮಾವೇಶಗಳ ವೇಳೆ ಭದ್ರತಾ ಕಾರ್ಯ ನಿರ್ವಹಿಸುತ್ತವೆ.

ಮುಖ್ಯವಾಗಿ ಕಾಡುಗಳ್ಳ ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಹೆಗ್ಗಳಿಕೆ ಕೆಎಸ್‌ಆರ್‌ಪಿಗೆ ಇದೆ. ಜತೆಗೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳನ್ನು ಕೋಣನಕುಂಟೆಯಲ್ಲಿ ಬಂಧಿಸಿದಾಗ ಬಂದೋಬಸ್ತ್ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್)ಗಳಲ್ಲಿ ನಕ್ಸಲ್‌ ಚಟುವಟಿಕೆಗಳ ಮೇಲೆ ನಿಗಾ, ಕೂಂಬಿಂಗ್‌ ಕಾರ್ಯಾಚರಣೆಯಲ್ಲೂ ಪಡೆಗಳ ಸೇವೆಯಿದೆ.

ಉದಯವಾಣಿ-ಕೆಎಸ್‌ಆರ್‌ಪಿ ಮತದಾನ ಜಾಗೃತಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ “ಉದಯವಾಣಿ’ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಸಹಯೋಗದಲ್ಲಿ ಏ.10ರಂದು ಮತದಾನ ಜಾಗೃತಿಗಾಗಿ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿದೆ. ಮಡಿವಾಳದ ಕೆಎಸ್‌ಆರ್‌ಪಿ ಮೈದಾನದಲ್ಲಿ ಏ.10ರಂದು ಬೆಳಗ್ಗೆ 7 ಗಂಟೆಗೆ ಸೈಕಲ್‌ ಜಾಥಾಗೆ ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್‌, ಡಿಐಜಿ ಸತೀಶ್‌ ಕುಮಾರ್‌ ಚಾಲನೆ ನೀಡಲಿದ್ದಾರೆ.

ಕೆಎಸ್‌ಆರ್‌ಪಿ ಮಹಿಳಾ ಸೈಕ್ಲಿಸ್ಟ್‌ ತಂಡ ಹಾಗೂ “ಉದಯವಾಣಿ’ ಸಿಬ್ಬಂದಿ ಸೈಕಲ್‌ ಜಾಥಾದಲ್ಲಿ ಭಾಗವಹಿಸಲಿದ್ದು, ಕೆಎಸ್‌ಆರ್‌ಪಿ 3ನೇ ಹಾಗೂ 4ನೇ ಬೆಟಾಲಿಯನ್‌ ವಸತಿ ಪ್ರದೇಶ, ಎಚ್‌ಎಸ್‌ಆರ್‌ ಲೇಔಟ್‌, ಮಡಿವಾಳ ಸುತ್ತಮುತ್ತಲ ಪ್ರದೇಶಗಳಲ್ಲಿ ಜಾಥಾ ನಡೆಯಲಿದೆ.

ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ 9 ಕೆಎಸ್‌ಆರ್‌ಪಿ ಕಂಪೆನಿಗಳು ಆಂಧ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ಚುನಾವಣೆ ಮುಗಿಯುವವರೆಗೆ ನಿಯುಕ್ತಿಗೊಂಡ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
-ಸತೀಶ್‌ಕುಮಾರ್‌, ಕೆಎಸ್‌ಆರ್‌ಪಿ ಡಿಐಜಿ

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next