ಮಂಗಳೂರು: ಮಂಗಳೂರು ಕುಕ್ಕರ್ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿದ್ದು ಶುಕ್ರವಾರವೂ ನಗರ ಪೊಲೀಸ್ ಅಧಿಕಾರಿಗಳಿಂದ ದಾಖಲೆಗಳ ಹಸ್ತಾಂತರ ಪ್ರಕ್ರಿಯೆ ಮುಂದುವರಿದಿತ್ತು.
ಇದರ ನಡುವೆಯೇ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಶಂಕಿತ ಉಗ್ರ ಶಾರೀಕ್‌ನ ಭದ್ರತೆಗಾಗಿ ಸ್ಥಳೀಯ ಪೊಲೀಸ್ ಬದಲಿಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಸಿಬಂದಿ ಯನ್ನು ನೀಡುವಂತೆ ಎನ್‌ಐಎ ಕೇಳಿಕೊಂಡಿದೆ.
ಶಾರೀಕ್‌ನ ವಿಚಾರಣೆಯನ್ನು ಎನ್‌ಐಎ ಇದು ವರೆಗೆ ಪೂರ್ಣ ಸ್ವರೂಪದಲ್ಲಿ ಆರಂಭಿ ಸಿಲ್ಲ, ದಾಖಲೆಗಳ ಹಸ್ತಾಂತರ ಮುಗಿದ ಬಳಿಕ ಇದು ನಡೆಯುವ ಸಾಧ್ಯತೆಗಳಿವೆ.
6 ಅಧಿಕಾರಿಗಳಿರುವ ಎನ್‌ಐಎ ತಂಡಕ್ಕೆ ಇನ್ನೂ ಎರಡು ತಂಡಗಳು ಸೇರಿಕೊಂಡು ವಿಚಾರಣೆ ಮುಂದಕ್ಕೆ ಒಯ್ಯಲಿದ್ದಾರೆ. ಸಾಮಾನ್ಯವಾಗಿ ಪೊಲೀ ಸರು ತನಿಖೆ ಅರ್ಧ ನಡೆಸಿದ್ದರೂ ಎನ್‌ಐಎ ತನಿಖೆ ಕೈಗೆತ್ತಿಕೊಂಡರೆ ಅವರು ಆರಂಭದಿಂದಲೇ ತನಿಖೆ ಆರಂಭಿ ಸುವುದು ವಾಡಿಕೆ. ಪೊಲೀಸರು ನೀಡಿರುವ
ಸಾಕ್ಷ್ಯಾಧಾರಗಳನ್ನಷ್ಟೇ ಅವರು ಪರಿಗಣಿಸುತ್ತಾರೆ. ಕುಕ್ಕರ್ ಬಾಂಬ್ ಸ್ಫೋಟದ ಸಂದರ್ಭವನ್ನು ತನಿಖೆಯ ಸಂದರ್ಭದಲ್ಲಿ ಅವರು ಮರುಸೃಷ್ಟಿ ಮಾಡುವ ಸಾಧ್ಯತೆಯೂ ಇದೆ.
ಶಾರೀಕ್ ಸುಟ್ಟಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲು ತಿಂಗಳೇ ಬೇಕಾಗಬಹುದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿರುವುದು ಸದ್ಯ ಆತನ ನೇರ ವಿಚಾರಣೆಯಲ್ಲಿ ಒಂದಷ್ಟು ವಿಳಂಬಕ್ಕೆ ಕಾರಣವಾಗಿದೆ. ಎನ್‌ಐಎ ಮಂಗಳೂರಿನಲ್ಲೇ ತನಿಖೆ ಮುಂದುವರಿಸುವ ಅಥವಾ ಆತನನ್ನು ಬೆಂಗಳೂರು ಅಥವಾ ದಿಲ್ಲಿಯ ಆಸ್ಪತ್ರೆಗೆ ಕೊಂಡೊಯ್ಯುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.