Advertisement
ಹೀಗೆ ಸೂಚನೆ ನೀಡಿರುವುದು ಯಾವುದೋ ಖಾಸಗಿ ಅಥವಾ ಡೀಮ್ಡ್ ವಿ.ವಿ.ಯಲ್ಲ. ರಾಜ್ಯ ಸರಕಾರದ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು). 2023ರ ಜುಲೈಯಲ್ಲಿ ಪದವಿ, ಸ್ನಾತಕೋತ್ತರ ಪದವಿಗೆ ಸೇರಿದ ವಿದ್ಯಾರ್ಥಿಗಳಿಂದ ಪಠ್ಯ ಪುಸ್ತಕದ ಶುಲ್ಕ ಸಹಿತ ಪ್ರವೇಶ ಶುಲ್ಕ ಹಾಗೂ ಇತರ ಶುಲ್ಕಗಳನ್ನು ಪಡೆಯಲಾಗಿದೆ. ಈಗ ಎರಡನೇ ಸೆಮಿಸ್ಟರ್ ಪರೀಕ್ಷೆ ಸನಿಹದಲ್ಲಿದ್ದರೂ ವಿ.ವಿ.ಯಿಂದ ಇನ್ನೂ ಪಠ್ಯಪುಸ್ತಕದ ಮುದ್ರಿತ ಪ್ರತಿ ತಲುಪಿಸಿಲ್ಲ.
ಉದ್ಯೋಗದ ಜತೆಗೆ ಅಥವಾ ಅನ್ಯ ಉದ್ದೇಶಕ್ಕಾಗಿ ಪದವಿ, ಸ್ನಾತಕೋತ್ತರ ಪದವಿ ಪಡೆಯ ಬಯಸು ವವರು ಮಾತ್ರ ಕೆಎಸ್‌ಒಯುವಿನಲ್ಲಿ ದಾಖಲಾತಿ ಪಡೆಯುತ್ತಾರೆ. ಈ ಹಿಂದೆ ಪಠ್ಯ ಪುಸ್ತಕವನ್ನು ವಿದ್ಯಾರ್ಥಿಗಳ ಮನೆಗೆ ಅಂಚೆ ಮೂಲಕ ಅಥವಾ ಕಾಂಟೆಕ್ಟ್ ಕ್ಲಾಸ್‌ಗಾಗಿ ವಿ.ವಿ.ಗೆ ಹೋದಾಗ ವಿತರಿಸಲಾಗುತ್ತಿತ್ತು. ಈಗ ಸಾಫ್ಟ್ ಕಾಪಿಯಲ್ಲೇ ಓದಿಕೊಳ್ಳಿ ಎಂದಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಸ್ಯೆಯನ್ನು ತಂದಿದೆ. ಮೊಬೈಲ್‌ನಲ್ಲಿ ಪೂರ್ಣ ಪುಸ್ತಕದ ಓದು ಕಷ್ಟ. ಕಂಪ್ಯೂಟರ್, ಲ್ಯಾಪ್‌ಟಾಪ್‌ಗ್ಳಲ್ಲಿ ಓದಬೇಕೆಂದರೆ ಅದು ಯಾರಲ್ಲೂ ಇಲ್ಲ. ಪ್ರಿಂಟ್‌ಔಟ್ ತೆಗೆದು ಓದುವುದೆಂದರೆ ಭಾರೀ ಖರ್ಚಿನ ಬಾಬತ್ತು. ಬಿಡಿ ಬಿಡಿಯಾಗಿರುವ ಕಾಗದಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಇನ್ನೂ ಕಷ್ಟ. ಅದಕ್ಕೆ ಪುಸ್ತಕದ ರೂಪ ಕೊಡಬೇಕೆಂದರೆ ಬುಕ್ ಬೈಂಡಿಂಗ್‌ಗಾಗಿ ಮತ್ತೆ ಪ್ರಿಂಟಿಂಗ್ ಪ್ರಸ್‌ಗಳ ಮೊರೆ ಹೋಗಲೇಬೇಕು. ತಾವೇ ದುಡಿದು ಸಂಪಾದಿಸುತ್ತ ಕಲಿಯುವ ಮನಸ್ಸಿರುವ ಯುವಕರಿಗೆ ಇದು ಹೊರೆಯೇ ಸರಿ.
Related Articles
ವಿದ್ಯಾರ್ಥಿಗಳಿಗೆ ವಿ.ವಿ.ಯಿಂದ ರೂಪಿಸಿದ ಮೊಬೈಲ್ ಆ್ಯಪ್ ನೀಡಲಾಗಿದೆ. ಅದರಲ್ಲಿ ಪಠ್ಯಗಳನ್ನು ಅಪ್‌ಲೋಡ್ ಮಾಡಲಾಗಿದ್ದು ಅದನ್ನೇ ಡೌನ್‌ಲೋಡ್ ಮಾಡಿಕೊಂಡು ಓದಬೇಕು. ಪಠ್ಯಪುಸ್ತಕದ ಮುದ್ರಿತ ಪ್ರತಿ ಬರಬಹುದು ಎಂಬ ಕಾರಣಕ್ಕೆ ಎಷ್ಟೋ ವಿದ್ಯಾರ್ಥಿಗಳು ಇನ್ನೂ ಡೌನ್‌ಲೋಡ್ ಕೂಡ ಮಾಡಿಕೊಂಡಿಲ್ಲ. ನಿತ್ಯವೂ ಪ್ರಾದೇಶಿಕ ಕೇಂದ್ರಕ್ಕೆ ಹೋಗಿ ವಿಚಾರಿಸುವವರ ಸಂಖ್ಯೆಯೂ ಹೆಚ್ಚಾಗಿದೆ.
Advertisement
ಪರೀಕ್ಷೆಗೆ 15 ದಿನ ಮಾತ್ರಕಳೆದ ವರ್ಷ ದಾಖಲಾದ ವಿದ್ಯಾರ್ಥಿಗಳಿಗೆ ಅ. 14ರಿಂದ 2ನೇ ಸೆಮಿಸ್ಟರ್ ಪರೀಕ್ಷೆ ನಡೆಯಲಿದೆ. 15 ದಿನಗಳಲ್ಲಿ ಪರೀಕ್ಷೆಗೆ ಸಿದ್ಧರಾಗಬೇಕು. ಅಷ್ಟರೊಳಗೆ ಪುಸ್ತಕ ವಿದ್ಯಾರ್ಥಿಗಳಿಗೆ ತಲುಪಿದರೆ ಆಯಿತು. ಇಲ್ಲವಾದರೆ ಅವರು ಸಾಫ್ಟ್ಕಾಪಿಯನ್ನೇ ಓದಿ ಪರೀಕ್ಷೆ ಬರೆಯಬೇಕು. ಏನಿದು ಸಮಸ್ಯೆ?
ಕೊರೊನಾ ಸಂದರ್ಭ ಪುಸ್ತಕ ಮುದ್ರಣದ ಬದಲಿಗೆ ಸಾಫ್ಟ್ಕಾಪಿಯನ್ನೇ ವಿದ್ಯಾರ್ಥಿಗಳಿಗೆ ನೀಡಲು ಆದೇಶ ಮಾಡಲಾಗಿತ್ತು. ಆಗ ಪುಸ್ತಕಕ್ಕೆ ಶುಲ್ಕ ಪಡೆದಿರಲಿಲ್ಲ. ಕಳೆದ ವರ್ಷ ಮುದ್ರಿತ ಪುಸ್ತಕ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹಳೆ ಸ್ಟಾಕ್ ಖಾಲಿಯಾಗಿದ್ದರಿಂದ ಹೊಸ ಟೆಂಡರ್ ವಿಳಂಬವಾಗಿದೆ. ಆದರೆ ದಾಖಲಾತಿ ಸಂದರ್ಭ ವಿದ್ಯಾರ್ಥಿಗಳಿಂದ ಪುಸ್ತಕ ಮುದ್ರಣಕ್ಕೂ ಶುಲ್ಕ ಪಡೆಯಲಾಗಿತ್ತು. ಈಗ ಪುಸ್ತಕ ತಲುಪಿಸಲು ವಿ.ವಿ.ಗೆ ಸಾಧ್ಯವಾಗಿಲ್ಲ. ಶೇ. 15ರಷ್ಟು ಶುಲ್ಕ ವಿನಾಯಿತಿಗೆ ಪತ್ರ
ವಿದ್ಯಾರ್ಥಿಗಳಿಗೆ ಮುದ್ರಿತ ಪುಸ್ತಕ ಬಾರದೇ ಇರುವುದರಿಂದ ಶೇ. 15ರಷ್ಟು ಶುಲ್ಕ ವಿನಾಯಿತಿಯನ್ನು ಮುಂದಿನ ವರ್ಷದ ದಾಖಲಾತಿಯಲ್ಲಿ ನೀಡಬೇಕು ಎಂಬ ಪತ್ರವನ್ನು ಬಹುತೇಕ ಪ್ರಾದೇಶಿಕ ಕೇಂದ್ರಗಳ ಮುಖ್ಯಸ್ಥರು ವಿ.ವಿ.ಗೆ ಸಲ್ಲಿಸಿದ್ದಾರೆ. ಸಮಸ್ಯೆ ಈಗಾಗಲೇ ವಿ.ವಿ.ಯ ಗಮನಕ್ಕೆ ಬಂದಿದೆ. ಮುಂದೆ ಇದನ್ನು ಸರಿಪಡಿಸಲಿದ್ದೇವೆ. ಸದ್ಯಕ್ಕೆ ಪಠ್ಯಪುಸ್ತಕದ ಮುದ್ರಿತ ಪ್ರತಿ ಸಿಗದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶೇ. 10ರಷ್ಟು ಶುಲ್ಕ ವಿನಾಯಿತಿ ನೀಡಲಿದ್ದೇವೆ.
– ಪ್ರೊ| ಶರಣಪ್ಪ ವಿ. ಹಲ್ಸೆ, ಕುಲಪತಿ, ಕೆಎಸ್‌ಒಯು
ಎಲ್ಲ ವಿದ್ಯಾರ್ಥಿಗಳಿಗೂ ಪುಸ್ತಕದ
ಸಾಫ್ಟ್ಕಾಪಿಯನ್ನು ಮೊಬೈಲ್ ಆ್ಯಪ್ ಮೂಲಕ ಕಳುಹಿಸಿದ್ದೇವೆ. ತಾಂತ್ರಿಕ ಸಮಸ್ಯೆಯಿಂದ ಕೆಲವು ವಿದ್ಯಾರ್ಥಿಗಳಿಗೆ ಮುದ್ರಿತ ಪ್ರತಿ ನೀಡಲು ಸಾಧ್ಯವಾಗಿಲ್ಲ.
– ಪ್ರೊ| ಎನ್. ಲಕ್ಷ್ಮೀ, ಅಕಾಡೆಮಿಕ್ ಡೀನ್, ಕೆಎಸ್‌ಒಯು – ರಾಜು ಖಾರ್ವಿ ಕೊಡೇರಿ