ಶ್ರೀರಂಗಪಟ್ಟಣ: ಉಗ್ರರ ದಾಳಿಯಿಂದ ಮೃತಪಟ್ಟ ಗುಡಿಗೆರೆ ಯೋಧ ಗುರು ಭಾವಚಿತ್ರಕ್ಕೆ ಮಂಡ್ಯ ಕರವೇ ಕಾರ್ಯಕರ್ತರು ಪಟ್ಟಣದ ಕುವೆಂಪು ವೃತ್ತದಲ್ಲಿ ಹಾಲಿನ ಅಭಿಷೇಕ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.
ಮಂಡ್ಯರಕ್ಷಣಾ ವೇದಿಕೆಯ ಅಧ್ಯಕ್ಷ ಶಂಕರಬಾಬು ನೇತೃತ್ವದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ಬಳಿ ಜಮಾವಣೆಗೊಂಡು ಪುಲ್ವಾಮಾದಲ್ಲಿ ನಡೆದ ಘಟನೆಗೆ ಪಾಕಿಸ್ತಾನವೇ ನೇರ ಹೊಣೆ ಎಂದು ಆರೋಪಿಸಿ ಕಿಡಿಕಾರಿ ಪಾಕಿಸ್ತಾನದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಹುತಾತ್ಮ ಯೋಧ ಗುರು ಅವರು ಬಡ ಕುಟುಂಬದಲ್ಲಿ ಜನಿಸಿ ಭಾರತ ಮಾತೆಗೆ ತಮ್ಮ ಪ್ರಾಣ ನೀಡಿದ್ದಾರೆ. ಇಂತಹ ಉಗ್ರ ಸಂಘಟನೆ ಬೆಳೆಯದಂತೆ ಭಾರತದಲ್ಲಿ ನೋಡಿಕೊಳ್ಳಬೇಕು. ಉಗ್ರಗಾಮಿಗಳಿಗೆ ಬೆಂಬಲಕ್ಕೆ ನಿಂತ ಪಾಕಿಸ್ತಾನದ ವಿರುದ್ಧ ಯುದ್ದ ಸಾರಿ ಅವರ ಮೇಲೆ ದಾಳಿ ನಡೆಸುವ ಮೂಲಕ ಸೇಡು ತೀರಿಸಿಕೊಂಡಾಗ ಮಾತ್ರ ನಮ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಆಗ್ರಹಿಸಿ,
ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ಸಾಲು, ಸಾಲು ಘೋಷಣೆಯನ್ನು ಮೊಳಗಿಸಿದರು. ಕೇಂದ್ರ ಸರಕಾರ ಪಾಕಿಸ್ತಾನದ ವಿರುದ್ಧ ನೇರವಾಗಿ ಯುದ್ಧ ಘೋಷಣೆ ಮಾಡಬೇಕು. ಇಲ್ಲದಿದ್ದರೆ ದೇಶದ ಜನ ಆತಂಕದಲ್ಲಿಯೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.
ಬಾಳೆಮಂಜು, ನಾರಾಯಣಸ್ವಾಮಿ ರೇಣುಕಾ, ಆಟೋನಾಗರಾಜು ಸೇರಿದಂತೆ ಮಹಿಳಾ ಕಾರ್ಯಕರ್ತರು ಸೇರಿದಂತೆ ಇತರ ಸಂಘಟನೆಯ ಕಾರ್ಯಕರ್ತರು ಹಾಜರಿದ್ದು, ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ, ಪುಷ್ಪನಮನ ಸಲ್ಲಿಸಿದರು.