Advertisement

Kshetrapathi: ಹೋರಾಟದ ಹಾದಿಯಲ್ಲಿ ಕ್ಷೇತ್ರ

01:50 PM Aug 19, 2023 | Team Udayavani |

ದರ್ಶನ ಗ್ರಾಮೀಣ ಭಾಗದ ಕಥೆಯನ್ನು ಹೇಳುವಾಗ ಕೆಲವು ನಿರ್ದಿಷ್ಟ ಅಂಶಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲೂ ಒಂದು ಗಟ್ಟಿ ವಿಚಾರವನ್ನು ತೆರೆಮೇಲೆ ಪ್ರಸ್ತುತಪಡಿಸಲು ಹೊರಟಾಗ ಅದರ ಹಿನ್ನೆಲೆ, ನಡೆಯುವ ಪರಿಸರ, ಕಲಾವಿದರ ಹಾವಭಾವ, ಕಥೆಯ ಒಟ್ಟು ಹೂರಣ.. ಎಲ್ಲವೂ ಮುಖ್ಯವಾಗುತ್ತದೆ. ಇದರಲ್ಲಿ ಕೊಂಚ ಲೋಪವಾದರೂ ಒಟ್ಟು ಉದ್ದೇಶವೇ ಆಭಾಸವಾಗಿಬಿಡುತ್ತದೆ. ಆದರೆ, ಈ ವಾರ ತೆರೆಕಂಡಿರುವ “ಕ್ಷೇತ್ರಪತಿ’ ಸಿನಿಮಾ ಈ ನಿಟ್ಟಿ ನಲ್ಲಿ ಒಂದೊಳ್ಳೆಯ ಪ್ರಯತ್ನ.

Advertisement

ಇಡೀ ಸಿನಿಮಾ ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಜೊತೆಗೆ ಆ ಪರಿಸರಕ್ಕೆ ಹೊಂದಿಕೊಳ್ಳುವ ಕಥೆಯನ್ನು ಹೊಂದಿದೆ. ಅದಕ್ಕೆ ಕಾರಣ ಚಿತ್ರದ ಕಥೆ. ಇಡೀ ಸಿನಿಮಾದ ಕಥೆ ನಿಂತಿರೋದು ರೈತರ ಬದುಕಿನ ಸುತ್ತ. ಭೂಮಿತಾಯಿಯನ್ನೇ ನಂಬಿಕೊಂಡಿರುವ ರೈತರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳೇ “ಕ್ಷೇತ್ರಪತಿ’ ಸಿನಿಮಾದ ಹೈಲೈಟ್‌. ಈ ಅಂಶಗಳನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ. ಹಾಗಾಗಿ, ಕನ್ನಡದಲ್ಲಿ ಬರುತ್ತಿ ರುವ ಕಂಟೆಂಟ್‌ ಸಿನಿಮಾಗಳ ಸಾಲಿನಲ್ಲಿ “ಕ್ಷೇತ್ರಪತಿ’ ಕೂಡಾ ಒಂದು ಪ್ರಯತ್ನವಾಗಿ ಗಮನ ಸೆಳೆಯುತ್ತದೆ.

ಇಂಜಿನಿಯರಿಂಗ್‌ ಮುಗಿಸಿ ವಿದೇಶಕ್ಕೆ ಹೋಗಿ ಸೆಟಲ್‌ ಆಗ ಬೇಕೆಂದು ಕನಸುಕಂಡಿದ್ದ ರೈತನ ಮಗನೊಬ್ಬ, ಮುಂದೆ ಯಾವ ರೀತಿ ಬದಲಾಗುತ್ತಾನೆ. ತನ್ನೂರಿನ ರೈತರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾನೆ, ರೈತರ ಬದುಕು ಸುಧಾರಣೆಗೆ ಆತ ಹುಡುಕುವ ಹೊಸ ಹೊಸ ಮಾರ್ಗಗಳು, ಈ ಹಂತದಲ್ಲಿ ರೈತರ ಕಣ್ಣಲ್ಲಿ ಹೀರೋ ಆಗುವ ಆತ, ಮುಂದೆ ರಾಜಕಾರಣಿಗೆ ಹೇಗೆ ಟಾರ್ಗೆಟ್‌ ಆಗುತ್ತಾನೆ, ಆ ನಂತರ ನಡೆಯುವ ವಿದ್ಯಮಾನಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಮೊದಲೇ ಹೇಳಿದಂತೆ ಇಡೀ ಸಿನಿಮಾವನ್ನು ಕಥೆಗೆ ಪೂರಕವಾದ ಪರಿಸರದಲ್ಲೇ ಕಟ್ಟಿಕೊಡುವ ಮೂಲಕ ಚಿತ್ರಕ್ಕೊಂದು ಆಪ್ತತೆಯ ಟಚ್‌ ಕೊಟ್ಟಿದ್ದಾರೆ.

ಸಿನಿಮಾದ ಬಹುತೇಕ ಚಿತ್ರೀಕರಣ ಗದಗ ಸುತ್ತಮುತ್ತ ನಡೆಸಲಾಗಿದೆ. ಮೊದಲೇ ಹೇಳಿದಂತೆ “ಕ್ಷೇತ್ರಪತಿ’ ರೆಗ್ಯುಲರ್‌ ಕಮರ್ಷಿ ಯಲ್‌ ಅಂಶಗಳಿಂದ ಮುಕ್ತವಾಗಿರುವ ಸಿನಿಮಾ. ಹಾಗಂತ ಚಿತ್ರದಲ್ಲಿ ಮನರಂಜನೆಗೇನೂ ಕೊರತೆಯಿಲ್ಲ. ಗಂಭೀರ ವಿಚಾರವನ್ನು ಹೇಳುತ್ತಲೇ ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತದೆ. ಇನ್ನು, ಚಿತ್ರದ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ವೇಗ ಮತ್ತಷ್ಟು ಹೆಚ್ಚುತ್ತಿತ್ತು. ನಾಯಕ ನವೀನ್‌ ಶಂಕರ್‌ ಮತ್ತೂಮ್ಮೆ ತಮ್ಮ ನಟನಾ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ, ರೈತರ ಕಾಳಜಿಯುಳ್ಳ ಯುವಕನಾಗಿ ಇಷ್ಟವಾಗುತ್ತಾರೆ.

ಇಡೀ ಸಿನಿಮಾದಲ್ಲಿ ಅವರು ಪಾತ್ರಕ್ಕೆ ಪೂರಕವಾಗಿ ಕಾಣಿಸಿಕೊಳ್ಳುವ ಮೂಲಕ ಕಥೆಗೆ ಓಘಕ್ಕೆ ಸಾಥ್‌ ನೀಡಿದ್ದಾರೆ. ಉಳಿದಂತೆ ಅರ್ಚನಾ ಜೋಯಿಸ್‌, ಅಚ್ಯುತ್‌ ಕುಮಾರ್‌ ಸೇರಿದಂತೆ ಇತರರು ಪಾತ್ರಕ್ಕೆ ಹೊಂದಿಕೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next