ಸುಳ್ಯ : ಮರಾಠ ಕ್ಷತ್ರೀಯ ಸೇವಾ ಸಂಘ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಅಂಗವಾಗಿ ಶೋಭಾಯಾತ್ರೆ, ಸಂಘದ ನಿವೇಶನ ನಾಮಫಲಕ ಅನಾವರಣ, ಮರಾಠ ಕ್ಷತ್ರಿಯ ಯುವ ಘಟಕ ಸುಳ್ಯ ಇದರ ಉದ್ಘಾಟನೆ ಕಾರ್ಯಕ್ರಮ ಕಾಂತಮಂಗಲದ ಸಂಘದ ನಿವೇಶನದಲ್ಲಿ ರವಿವಾರ ನಡೆಯಿತು.ಶೋಭಾಯಾತ್ರೆಯನ್ನು ಪ್ರಗತಿಪರ ಕೃಷಿಕ, ಉದ್ಯಮಿ ವಿಶ್ವನಾಥ ರಾವ್ ಕೌಮಾರ್ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ಮರಾಠ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ನಾರಾಯಣ ರಾವ್ ವಾಗ್ಮಾನ್ ಅವರು ವಹಿಸಿದ್ದರು.ಪ್ರಗತಿಪರ ಕೃಷಿಕರಾದ ಸೂರ್ಯ ಜೆ. ರಾವ್ ಕಾಸ್ಲೆಕರ್ ಅವರು ಸಂಘದ ನಿವೇಶನ ನಾಮಫಲಕ ಅನಾವರಣಗೊಳಿಸಿದರು.
ಆರ್ಯ ಮರಾಠ ಭವನ ಉದ್ಘಾಟನಾ ಸಮಾರಂಭ ಸಮಿತಿಯ ಪ್ರಧಾನ ಸಂಚಾಲಕ ಎಂ. ಯತೀಶ್‌ಕುಮಾರ್ ಪಾಟೀಲ್ ಯುವ ಘಟಕ ಉದ್ಘಾಟಿಸಿ, ಸಂಘಟನೆ ಜಾತಿಗೆ ಸೀಮಿತಗೊಳ್ಳದೆ ಸಾಮಾಜಿಕ ಚಿಂತನೆ ಮೂಲಕ ರಾಷ್ಟ್ರ ಕಟ್ಟುವ ರೀತಿಯಲ್ಲಿ ಬೆಳೆಯಬೇಕು. ಯುವಜನತೆಯನ್ನು ಈ ನಿಟ್ಟಿನಲ್ಲಿ ಸಂಘಟಿಸುವ ಜವಾಬ್ದಾರಿ ಸಂಘಕ್ಕಿದೆ ಎಂದರು.
ಯುವ ಘಟಕದ ಸಂಚಾಲಕರಾಗಿ ಚಿದಾನಂದ ರಾವ್ ಸಿಂಧ್ಯಾ ಅಧಿಕಾರ ಸ್ವೀಕರಿಸಿದರು.ದಿಕ್ಸೂಚಿ ಭಾಷಣ ಮಾಡಿದ ಶ್ರೀಕೃಷ್ಣ ಉಪಾಧ್ಯಾಯ ಅವರು, ಶಿವಾಜಿಯನ್ನು ಸ್ವಾಭಿಮಾನಿಯನ್ನಾಗಿ ರಾಷ್ಟ್ರ ಕಟ್ಟುವ ನಾಯಕನನ್ನಾಗಿ, ಹಿಂದೂ ಸಾಮ್ರಾಜ್ಯವನ್ನು ವಿಸ್ತರಿಸುವ ಧೀರನಾಗಿ ಬೆಳೆಸಿದವಳು ಆತನ ತಾಯಿ ಜೀಜಾಬಾಯಿ. ಇಂತಹ ಮಾದರಿಯನ್ನು ತಾಯಂದಿರು ಮಕ್ಕಳನ್ನು ಛಲಗಾರನನ್ನಾಗಿ ರೂಪಿಸಬೇಕೆಂದರು.
ವೇದಿಕೆಯಲ್ಲಿ ಆರ್ಯ ಯಾನೆ ಮರಾಠ ಸಂಘದ ಮಂಗಳೂರು ಶಾಖಾ ಅಧ್ಯಕ್ಷ ದೇವೋಜಿ ರಾವ್, ನ.ಪಂ. ಉಪಾಧ್ಯಕ್ಷೆ ಮೋಹಿನಿ ನಾಗರಾಜ್, ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಪ್ರೇಮಲತಾ ವೈ.ರಾವ್, ಕಂಬಿಬಾಣಿ ಗ್ರಾ.ಪಂ. ಉಪಾಧ್ಯಕ್ಷೆ ಶೋಭನಾ ಪಟ್ಲಾಮ್ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಪದ್ಮಶ್ರೀ ಪುರಸ್ಕೃತ ಗಿರೀಶ ಭಾರದ್ವಾಜ ಅವರನ್ನು ಸಮ್ಮಾನಿಸಲಾಯಿತು.ಕಾರ್ಯದರ್ಶಿ ಲತೀಶ್‌ಕುಮಾರ್ ಸ್ವಾಗತಿಸಿ, ಗಣೇಶ್ ರಾವ್ ಚೌಹಾಣ್ ವಂದಿಸಿದರು. ದಯಾನಂದ ಕೇರ್ಪಳ ನಿರೂಪಿಸಿದರು.