ಈಗಂತೂ ಎಲ್ಲ ಕಡೆ ಆನ್‌ಲೈನ್ ಜಮಾನ. ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಂತೂ ಡಿಜಿಟಲ್ ಪೇಮೆಂಟ್, ನೆಟ್ ಬ್ಯಾಂಕಿಂಗ್, ಆನ್‌ಲೈನ್ ಪೇಮೆಂಟ್ ಅನ್ನೋದು ಹಾಸುಹೊಕ್ಕಾಗಿದೆ. ಒಂದೆಡೆ ಡಿಜಿಟಲ್ ಕ್ರಾಂತಿಯಿಂದ ಅನುಕೂಲವಾದರೆ, ಮತ್ತೂಂದೆಡೆ ಆನ್‌ಲೈನ್ ವಂಚನೆಯಿಂದ ಸಂತ್ರಸ್ತರಾಗುತ್ತಿರುವ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಇಂಥ ಡಿಜಿಟಲ್ ಪೇಮೆಂಟ್‌ಗಳಿಂದ ತೊಂದರೆಗೀಡಾದ ಬಡವರು – ಮಧ್ಯಮ ವರ್ಗದ ಜನರ ಪಾಡು ಹೇಳತೀರದು. ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಸಿನಿಮಾ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’
ಸಿನಿಮಾದ ಹೆಸರೇ ಹೇಳುವಂತೆ, ಬ್ಯಾಂಕಿಗ್ (ಅ)ವ್ಯವಸ್ಥೆ, ಖಾತೆದಾರರಿಗೆ ಬ್ಯಾಂಕ್‌ಗಳು ಮಾಡುವ ಕ್ಯಾತೆ, ಹಣ ಕಳೆದುಕೊಂಡ ಬಡ – ಮಧ್ಯಮ ವರ್ಗದ ಪರಿಪಾಟಲುಗಳ ಸುತ್ತ ಇಡೀ ಸಿನಿಮಾ ಸಾಗುತ್ತಿದೆ. ತನ್ನ ಖಾತೆಯಲ್ಲಿದ್ದ ಹಣವನ್ನು ಹಳೆದುಕೊಳ್ಳುವ ಬ್ಯಾಂಕಿನ ಖಾತೆದಾರ (ನಾಯಕ) ಕೊನೆಗೆ ಅದನ್ನು ಹೇಗೆ ಕೋರ್ಟ್ ಮೆಟ್ಟಿಲೇರಿ ಹೋರಾಡಿ ಪಡೆದುಕೊಳ್ಳುತ್ತಾನೆ ಎನ್ನುವುದು ಚಿತ್ರದ ಕಥೆಯ ಒಂದು ಎಳೆ. ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ವರದಿಯಾಗುವ ಬ್ಯಾಂಕಿಂಗ್ ಸಮಸ್ಯೆಯನ್ನು ಮನರಂಜನಾತ್ಮಕವಾಗಿ ಅಚ್ಚುಕಟ್ಟಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿನಾಯಕ ಕೋಡ್ಸರ.
ಮೊದಲಾರ್ಧ ಪ್ರೀತಿ, ಪ್ರೇಮ, ನವಿರಾದ ಹಾಸ್ಯದ ಮೂಲಕ ಸಿನಿಮಾ, ದ್ವಿತೀಯಾ ರ್ಧದಲ್ಲಿ ಹೋರಾಟ, ಭಾವನಾತ್ಮಕ ಸನ್ನಿವೇಶಗಳ ಮೂಲಕ ಗಂಭೀರವಾಗುತ್ತದೆ. ಶರಾವತಿ ಹಿನ್ನೀರಿನ ಸುಂದರ ಪರಿಸರ, ಅಲ್ಲಿನ ಜನ-ಜೀವನ, ಅದಕ್ಕೊಪ್ಪುವ ಸಂಭಾಷಣೆ ಸಿನಿಮಾದ ಹೈಲೈಟ್ಸ್. ಮೊದಲಾರ್ಧದ ಒಂದಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದರೆ, ಚಿತ್ರಕ್ಕೆ ಇನ್ನಷ್ಟು ವೇಗ ಸಿಗುವ ಸಾಧ್ಯತೆಗಳಿದ್ದವು.
ಇದನ್ನೂ ಓದಿ:ಚಿತ್ರವಿಮರ್ಶೆ: ‘ಶೋಕಿವಾಲ’ನ ಕಾಮಿಡಿ ಅಡ್ಡ!
ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ದಿಗಂತ್, ವಿದ್ಯಾಮೂರ್ತಿ, ಐಂದ್ರಿತಾ, ರಂಜನಿ ಪಾತ್ರಗಳು ಗಮನ ಸೆಳೆಯುವಂತಿದೆ. ಅದರಲ್ಲೂ ನಾಯಕ ದಿಗಂತ್ ಅಡಿಕೆ ಬೆಳೆಗಾರನಾಗಿ, ಮಧ್ಯಮ ವರ್ಗದ ಹುಡುಗನಾಗಿ ತಮ್ಮ ಪಾತ್ರದಲ್ಲಿ ನೋಡುಗರಿಗೆ ಇಷ್ಟವಾಗುತ್ತಾರೆ. ಅಪ್ಪಟ ಮಲೆನಾಡಿನ ಸೊಗಡನ್ನು ಆಸ್ವಾಧಿಸುವವರಿಗೆ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಮಿನಿಮಂ ಮನರಂಜನೆ ಕೊಡುವ ಸಿನಿಮಾ ಎನ್ನಲು ಅಡ್ಡಿಯಿಲ
ಜಿ.ಎಸ್.ಕಾರ್ತಿಕ ಸುಧನ್