ನಂಜನಗೂಡು: ಉಪ ಚುನಾವಣೆಯಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್ ವಿರೋಧಿ ಅಲೆ ಎದ್ದಿದ್ದು ಮಾಜಿ ಸಚಿವ ಸ್ವಾಭಿಮಾನಿ ನಾಯಕ ವಿ ಶ್ರೀನಿವಾಸ ಪ್ರಸಾದ ಗೆಲುವಿನೊಂದಿಗೆ ಈ ಕ್ಷೇತ್ರದಲ್ಲಿ ಕಮಲ ಅರಳುವುದು ಸತ್ಯ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ಮಂಗಳವಾರ ಬೆಳಗ್ಗೆಯಿಂದಲೇ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ಪರ ಕಳಲೆ ಜಿಪಂ ವ್ಯಾಪ್ತಿಯ ಮುದ್ದಳ್ಳಿ, ನವಿಲೂರು, ಹೊಸಪುರ, ಸೂರಳ್ಳಿ, ಲಕ್ಷ್ಮ ಣಾಪುರ ಸಿದ್ದಯ್ಯನಹುಂಡಿ, ಕೂಗಲೂರು, ಕೃಷ್ಣಾಪುರ, ಕಸುವಿನಹಳ್ಳಿ, ಮಾಕನಪುರ, ಎಲಚೆಗೆರೆ, ಸಿಂಧುವಳ್ಳಿಪುರ, ಗ್ರಾಮಗಳಲ್ಲಿ ಮತ ಯಾಚಿಸಿ ಮಾತನಾಡಿದರು.
ವಿ.ಶ್ರೀನಿವಾಸ್ ಪ್ರಸಾದ್‌ರಂತಹ ಪ್ರಾಮಾಣಿಕ ರನ್ನು ಸಂಪುಟದಿಂದ ಕೈ ಬಿಟ್ಟ ಸಿದ್ದರಾಮಯ್ಯ ಪ್ರಸಾದ್ ರನ್ನು ಆಯ್ಕೆ ಮಾಡಿದ ನಂಜನಗೂಡಿನ ಮತದಾರರನ್ನೇ ಅವಮಾನಿಸಿದ್ದಾರೆ. ಈ ಅವಮಾನಕ್ಕೆ ತಕ್ಕ ಪಾಠ ಕಲಿಸಲು ಜನತೆ ಏ.9ರ ವರೆಗೆ ಕಾಯುತ್ತಿದ್ದಾರೆ ಎಂದರು.
ಸೋಮವಾರ ನಾಮಪತ್ರ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಸಾವಿರಾರು ಜನ ಆಗಮಿಸಿದ್ದೆ ಇದಕ್ಕೆ ಸಾಕ್ಷಿ. ಕ್ಷೇತ್ರದ ಎಲ್ಲಾ ಜಿಪಂಗಳಲ್ಲಿ ಪಕ್ಷಕ್ಕೆಅತ್ಯಧಿಕ ಮತ ಚಲಾವಣೆಯಾಗುವ ನಿರೀಕ್ಷೆ ಎದ್ದು ಕಾಣುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ 2018ರ ಚುನಾವಣೆಯಲ್ಲಿ ಜನಾದೇಶ ಸಿಗಬೇಕಾದರೆ ಈ ಚುನಾವಣೆಯಲ್ಲಿ ಬಿಜೆಪಿ ಗೆಲವು ಅತಿ ಮುಖ್ಯ ಎಂಬುದನ್ನು ಅರಿತು ಕಮಲಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಎಸ್.ಮಹ ದೇವಯ್ಯ, ಆಶೋಕ್, ದಿ.ಮಹದೇವು ಅಳಿಯ ಕೆ.ಕೆ. ಜಯದೇವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಕುಂಬ್ರಳ್ಳಿ ಸುಬ್ಬಣ್ಣ, ಪ್ರಸಾದ್‌ರ ಅಳಿಯ ಹರ್ಷವರ್ಧನ್, ಮಾಜಿ ಜಿಪಂ ಅಧ್ಯಕ್ಷ ಬಿ.ಎಂ. ರಾಮು, ರಾಜ್ಯ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ, ದೇವಿರಮ್ಮನ ಹಳ್ಳಿ ಜಿ. ಬಸವರಾಜು, ಹೊಸಪುರ ಜಗದೀಶ್ ಇದ್ದರು.