ಬೆಂಗಳೂರು: ಇದೇ ಮೊದಲ ಬಾರಿ ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿಯಲ್ಲಿ ಕಣಕ್ಕಿಳಿದ ಶಿವಮೊಗ್ಗ ಲಯನ್ಸ್- ಮಂಗ ಳೂರು ಡ್ರ್ಯಾಗನ್ಸ್ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದವು. ಇಬ್ಬರ ಪೈಕಿ ಗೆದ್ದಿದ್ದು ಶಿವಮೊಗ್ಗ ಲಯನ್ಸ್ ತಂಡ.
ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು ಕೊಂಡು 176 ರನ್ ಗಳಿಸಿತು. ಇದಕ್ಕೆ ಉತ್ತರ ನೀಡಲು ಹೊರಟ ಮಂಗಳೂರು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಶಿವಮೊಗ್ಗ 9 ರನ್‌ಗಳ ಜಯ ಸಾಧಿಸಿತು.
ಶಿವಮೊಗ್ಗ ಪರ ನಾಯಕ ಶ್ರೇಯಸ್ ಗೋಪಾಲ್ ಉತ್ತಮ ಬ್ಯಾಟಿಂಗ್ ನಡೆಸಿದರು. ಅಭಿನವ್ ಮನೋಹರ್ ಸ್ಫೋಟಕ ಆಟವಾಡಿದರು. ಶ್ರೇಯಸ್ 32 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಿತ 46 ರನ್ ಗಳಿಸಿದರು. ಮನೋಹರ್ 25 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ ಸಿಡಿಸಿದರು. ಇಬ್ಬರ ಪೈಕಿ ಮನೋಹರ್ ಆಟ ಬಿರುಸಾಗಿತ್ತು. ಇದು ತಂಡದ ಮೊತ್ತವನ್ನು ಏರಿಸಲು ನೆರವಾಯಿತು. ರೋಹನ್ ಕದಮ್, ನಿಹಾಲ್ ಉಲ್ಲಾಳ್ ಕ್ರಮವಾಗಿ 27, 28 ರನ್ ಗಳಿಸಿದರು.
ಮಂಗಳೂರು ತಂಡದ ಮಧ್ಯಮ ವೇಗದ ಬೌಲರ್ ಎಂ.ಜಿ.ನವೀನ್ ಶಿವಮೊಗ್ಗವನ್ನು ನಿಯಂತ್ರಿಸಲು ಬಲವಾದ ಯತ್ನ ನಡೆಸಿದರು. ಕೇವಲ 19 ರನ್ನಿಗೆ 4 ವಿಕೆಟ್ ಪಡೆದ ಅವರು, ಕೊನೆಯ ಓವರ್‌ನಲ್ಲಿ 2 ವಿಕೆಟ್ ಕಿತ್ತರು. ಉಳಿದ ಬೌಲರ್‌ಗಳಿಗೆ ಯಶಸ್ಸು ಸಿಗಲಿಲ್ಲ.
ಇದಕ್ಕೆ ಉತ್ತರಿಸಲು ಹೊರಟ ಮಂಗಳೂರು ಪರ ಕೆ.ಸಿದ್ಧಾರ್ಥ 46, ಅನಿರುದ್ಧ ಜೋಷಿ 50 ರನ್ ಗಳಿಸಿದರು. ಇಬ್ಬರೂ ಉತ್ತಮವಾಗಿಯೇ ಆಡಿದರೂ, ಉಳಿದವರು ಆ ಮಟ್ಟದಲ್ಲಿ ಮಿಂಚಲಿಲ್ಲ. ಶಿವಮೊಗ್ಗ ಬೌಲಿಂಗ್‌ನಲ್ಲಿ ಸಂಘಟಿತ ಯಶಸ್ಸು ಸಾಧಿಸಿತು.
ಹುಬ್ಬಳ್ಳಿಗೆ 7 ವಿಕೆಟ್ ಜಯ
ಸೋಮವಾರ ನಡೆದ 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ 7 ವಿಕೆಟ್‌ಗಳಿಂದ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗ 19.3 ಓವರ್‌ಗಳಲ್ಲಿ 138 ರನ್ನಿಗೆ ಆಲೌಟಾಯಿತು. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ (3), ಕೆ. ವಿದ್ವತ್ (2), ಲಾವಿಶ್ ಕೌಶಲ್ (2) ಉತ್ತಮ ಬೌಲಿಂಗ್ ನಡೆಸಿದರು. ಇದನ್ನು ಬೆನ್ನತ್ತಿದ ಹುಬ್ಬಳ್ಳಿ 15.2 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತು. ತಂಡದ ಪರ ಲವ್ನಿàತ್ ಸಿಸೋಡಿಯ 61, ಕೃಷ್ಣನ್ ಶ್ರೀಜಿತ್ 47 ರನ್ ಸಿಡಿಸಿದರು.