Advertisement

ವರ್ಷಾಂತ್ಯಕ್ಕೆ ಬನ್ನಂಜೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ

01:00 AM Mar 21, 2019 | Team Udayavani |

ಉಡುಪಿ: ವರ್ಷಾಂತ್ಯದಲ್ಲಿ ಬನ್ನಂಜೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ ತಲೆಎತ್ತಲಿದೆ.

Advertisement

ನಾರಾಯಣ ಗುರು ಸಭಾಂಗಣದ ಮುಂದಿರುವ ಲೋಕೋಪಯೋಗಿ ಇಲಾಖೆಯ 2.5 ಎಕರೆ ಜಾಗದಲ್ಲಿ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣದ ಕಾಮಗಾರಿ ಭರದಿಂದ ಸಾಗುತ್ತಿದೆ. 2018ರ ನವೆಂಬರ್‌ 24ಕ್ಕೆ ಕಾಮಗಾರಿ ಆರಂಭಗೊಂಡಿತ್ತು. ಸುಮಾರು 31.34 ಕೋ.ರೂ.ವೆಚ್ಚದ ಕಾಮಗಾರಿ ಇದಾಗಿದ್ದು, ಶೇ. 20ರಿಂದ 30 ಕಾಮಗಾರಿ ಈಗಾಗಲೇ ಪೂರ್ಣ ಗೊಂಡಿದೆ. 2019ರ ನವೆಂಬರ್‌ ಅಂತ್ಯಕ್ಕೆ ಉದ್ಘಾಟನೆಗೆ ಸಜ್ಜಾಗಲಿದೆ.

ಸುಸಜ್ಜಿತ ವ್ಯವಸ್ಥೆ
ಈ ಕಟ್ಟಡದಲ್ಲಿ ನಾಲ್ಕು ಫ್ಲೋರ್‌ಗಳಿವೆ. ಕೆಳ ಅಂತಸ್ತಿನಲ್ಲಿ ವಾಹನಗಳ ಪಾರ್ಕಿಂಗ್‌ ಇದೆ. ಇಲ್ಲಿ ಸುಮಾರು 64 ಕಾರುಗಳು ಸಹಿತ ಬೈಕ್‌ಗಳನ್ನು ಪಾರ್ಕಿಂಗ್‌ ಮಾಡಬಹುದಾಗಿದೆ. ಮೇಲಿನ ಅಂತಸ್ತಿನಲ್ಲಿ ಏಕಕಾಲದಲ್ಲಿ 18 ಬಸ್ಸುಗಳು ಬಂದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ. 100ರಷ್ಟು ಬಸ್ಸು ನಿಲ್ಲಿಸುವಷ್ಟು ಸ್ಥಳಾವಕಾಶ ಇಲ್ಲಿದೆ. ಉಳಿದ ಮಹಡಿಗಳಲ್ಲಿ ಕಚೇರಿ ಸಹಿತ ವ್ಯಾಪಾರದ ಉದ್ದೇಶಕ್ಕೆ ಬಳಕೆಯಾಗಲಿದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ. 

ಕಾಮಗಾರಿಗೆ ವೇಗ
1ಲಕ್ಷ 30 ಸಾವಿರ ಚದರಡಿಯಲ್ಲಿ ಈ ಕಟ್ಟಡ ನಿರ್ಮಾಣವಾಗುತ್ತಿದೆ. ಮಂಗಳೂರು ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಹೋಲಿಸಿದರೆ ಇದು ದೊಡ್ಡ ಕಟ್ಟಡವಾಗಿದ್ದು ಸುಸಜ್ಜಿತವಾಗಿ ಮೂಡಿಬರಲಿದೆ. ಸುಮಾರು 100ರಿಂದ 110 ಮಂದಿ ಕಾರ್ಮಿಕರು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನವೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಅವಿರತ ಕೆಲಸ ಕಾರ್ಯಗಳು ನಡೆಯುತ್ತಿವೆ.

ಬಹುಕಾಲದ ಬೇಡಿಕೆ
ಸದ್ಯ 271 ಬಸ್ಸುಗಳು ಉಡುಪಿ ನಿಲ್ದಾಣದಿಂದ ವಿವಿಧೆಡೆಗಳಿಗೆ ಸಂಚರಿಸುತ್ತಿದೆ. ಉಡುಪಿಯಿಂದ ರಾಜ್ಯದ ವಿವಿಧೆಡೆಗೆ ಪ್ರಯಾಣಿಸುವ ಸಾವಿರಾರು ಜನರಿದ್ದರೂ ಕೂಡ ಇಲ್ಲಿ ಸುಸಜ್ಜಿತ ಬಸ್‌ ತಂಗುದಾಣ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದರು. ಪ್ರಸ್ತುತ ಇರುವ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ ನಗರಸಭೆಯ ಅಧೀನದಲ್ಲಿದೆ.  

Advertisement

ಎಸ್ಕಲೇಟರ್‌, ಲಿಫ್ಟ್ ಸೌಲಭ್ಯ
ಅಂಗಡಿಗಳು, ಶೌಚಾಲಯ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು, ನೋಂದಣಿ ಕೇಂದ್ರಗಳು ಇರಲಿವೆ. ಕಟ್ಟಡದ ಒಳಗೆ ಎಸ್ಕಲೇಟರ್‌ ಹಾಗೂ ಲಿಫ್ಟ್ ವ್ಯವಸ್ಥೆ, ಮೆಟ್ಟಿಲು ಕೂಡ ಇರಲಿದೆ. ಈಗಾಗಲೇ ಮೈಸೂರು, ಬೆಂಗಳೂರಿನಲ್ಲಿರುವ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣಗಳಲ್ಲಿ ಎಸ್ಕಲೇಟರ್‌ ವ್ಯವಸ್ಥೆ ಇದೆ. ಕರಾವಳಿಗೆ ಹೋಲಿಸಿದರೆ ಎಸ್ಕಲೇಟರ್‌ ವ್ಯವಸ್ಥೆ ಹೊಂದಿರುವ ಪ್ರಪ್ರಥಮ ಬಸ್ಸು ತಂಗುದಾಣ ಇದಾಗಲಿದೆ. 

ಶೇ. 25 ಕಾಮಗಾರಿ ಪೂರ್ಣ
ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಕಾಮಗಾರಿಗಳು ವೇಗದಿಂದ ನಡೆಯುತ್ತಿದೆ.  ಶೇ. 25  ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ನವೆಂಬರ್‌ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದೆ. 
-ಪ್ರಭಾಕರ ಯೆಯ್ನಾಡಿ, ಪ್ರಾಜೆಕ್ಟ್  ಮ್ಯಾನೇಜರ್‌

ಸದ್ಯಕ್ಕಿಲ್ಲ ಥಿಯೇಟರ್‌
ಥಿಯೇಟರ್‌ ನಿರ್ಮಾಣದ ಪ್ರಸ್ತಾವನೆ ಈ ಹಿಂದೆ ಇದ್ದು ಆದರೆ ಈಗ ನಿರ್ಮಾಣಗೊಳ್ಳುತ್ತಿಲ್ಲ. ಅದಕ್ಕಾಗಿ ಈ ಕಟ್ಟಡದಲ್ಲೇ ಜಾಗ ಮೀಸಲಿರಿಸಲಾಗುವುದು. ಕಟ್ಟಡ ಪೂರ್ಣಗೊಂಡ ಬಳಿಕ ಖಾಸಗಿಯವರು ಆಸಕ್ತಿ ವಹಿಸಿ ಮುಂದೆ ಬಂದರೆ ಥಿಯೇಟರ್‌ ನಿರ್ಮಾಣಕ್ಕೆ ಅನುಮತಿ ಕೊಡಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ. 

– ಪುನೀತ್‌  ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next