Advertisement

2ನೇ ಮಹಾಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಕೊಡಗಿನ ಕಲಿ ಜ|ಕೆ.ಎಸ್‌. ತಿಮ್ಮಯ್ಯ

04:03 PM Nov 04, 2020 | Karthik A |

ಭಾರತದ ಕ್ಷಾತ್ರ ಪರಂಪರೆಯಲ್ಲಿ ಭಾರತೀಯ ಸೇನೆಯ ಧೈರ್ಯ, ಸಾಹಸ ಅವಿಸ್ಮರಣೀಯ.

Advertisement

ಎಂತಹದ್ದೇ ಸಮಯ ಇರಲಿ ಅವರು ದೇಶದ ಭದ್ರತೆ, ರಕ್ಷಣೆಗೆ ಮುಂದಾಗುತ್ತಾರೆ. ಕುಟುಂಬದ ನಡುವೆ ಸಂತೋಷದ ಘಳಿಗೆಯಲ್ಲಿರುವಾಗಲೇ ಸೇನೆಯಿಂದ ಕರೆ ಬಂದರೆ, ಯೋಚಿಸದೇ ಕರ್ತವ್ಯಕ್ಕೆ ಹಾಜರಾಗಿಬಿಡುತ್ತಾರೆ.

ಇದು ಭಾರತೀಯ ಸೈನಿಕರ ನಿಷ್ಠೆ, ದೇಶಪ್ರೇಮ ಮತ್ತು ತ್ಯಾಗದ ಬದುಕಿನ ಸಂಕೇತವಾಗಿದೆ.

ಇಂತಹದೇ ಬದುಕಿನಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ದೇಶದ ಹೆಮ್ಮೆಯ ಮಗನೆಂದು ಹೆಸರು ಪಡೆದವರು ಕೊಡಗಿನ ಕಲಿ ಜನರಲ್‌ ಕೆ.ಎಸ್‌. ತಿಮ್ಮಯ್ಯ. “ತಿಮ್ಮಿ’ ಎಂದೇ ಆಪ್ತರಿಂದ ಚಿರಪರಿಚಿತರಾದವರು ಕೊಡಗಿನ ಸುಬ್ಬಯ್ಯ ಮತ್ತು ಸೀತಮ್ಮ ಅವರ ಮಗನಾಗಿ ಮಾರ್ಚ್‌ 31, 1906ರಲ್ಲಿ ಜನಿಸಿದರು. ಮನೆಯ ವಾತಾವರಣವು ಇವರನ್ನು ದೇಶಸೇವೆಗೆ ಸೇರುವಂತೆ ಮಾಡಿತು. ತಂದೆ-ತಾಯಿಯ ಸಮಾಜಮುಖೀ ಕೆಲಸಗಳು ಇವರ ಮೇಲೆ ಪರಿಣಾಮ ಬೀರಿ ತಿಮ್ಮಯ್ಯ ಅವರನ್ನು ಸೇನೆಗೆ ಸೇರಲು ಸ್ಫೂರ್ತಿಯಾಯಿತು.

ಕೆ.ಎಸ್‌. ತಿಮ್ಮಯ್ಯ ಅವರು ದೇಶವಲ್ಲದೇ ವಿದೇಶದಲ್ಲಿ ನಡೆದ ಯುದ್ಧ ಕಾರ್ಯಾಚರಣೆಯಲ್ಲಿ ಭಾಗವಹಿಸಿ ತಮ್ಮ ಶೌರ್ಯ, ಸಾಹಸ ಮೆರೆದಿದ್ದಾರೆ. ಇವರಲ್ಲಿನ ದೇಶಸೇವೆಯ ಭಾವ ಉತ್ತುಂಗತೆಯಲ್ಲಿತ್ತು. ಭಾರತೀಯ ಸೇನೆಯಲ್ಲಿ ಹಂತ ಹಂತವಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ತಿಮ್ಮಯ್ಯ ದೇಶದ ಹಲವು ಯುದ್ಧ, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ದೇಶದ ವಿರುದ್ಧ ಪಿತೂರಿ ಹೂಡುವ ಶತ್ರುಗಳಿಗೆ ಸಿಂಹ ಸ್ವಪ್ನವಾಗಿದ್ದರು. ಇವರ ಸೈನಿಕ ಬದುಕು ನಮ್ಮೆಲ್ಲರಿಗೂ ಆದರ್ಶ ಹಾಗೂ ಮಾದರಿ. ಕೆ.ಎಸ್‌. ತಿಮ್ಮಯ್ಯ ಅವರ ಜೀವನದ ಹಲವು ಮಹತ್ವದ ಘಟನೆಗಳ ಬಗ್ಗೆ ತಿಳಿದು ಸ್ಫೂರ್ತಿ ಪಡೆಯೋಣ.

Advertisement

ಆಪರೇಶನ್‌ ಕಾಶ್ಮೀರ
ಸ್ವಾತಂತ್ರ್ಯದ ಅನಂತರ ತಿಮ್ಮಯ್ಯ ಅವರು ದೇಶ ವಿಭಜನೆ‌ಗೊಂಡಾಗ ಪಾಕಿಸ್ಥಾನದಿಂದ ಆಯುಧ ಮತ್ತು ಸೈನ್ಯದ ವಿಲೇವಾರಿಯನ್ನು ಕುರಿತು ರಚಿಸಿದ ಸಮಿತಿಯ ಸದಸ್ಯರಾಗಿದ್ದರು. 1947ರಲ್ಲಿ ಮೇಜರ್‌ ಜನರಲ್‌ ಆಗಿ ಭಡ್ತಿ ಹೊಂದಿ, ಪಾಕಿಸ್ಥಾನದಿಂದ ನುಸುಳುತ್ತಿದ್ದ ಉಗ್ರರಿಗೆ ತಕ್ಕ ಶಾಸ್ತಿ ನೀಡುತ್ತಿದ್ದರು. ಈ ಸಮಯದಲ್ಲಿ ನಡೆದ ಮತೀಯ ಗಲಭೆಗಳ ನಿರ್ವಹಣೆಯಲ್ಲಿ ಇವರ ಪಾತ್ರ ಅಗ್ರಗಣ್ಯ. ಅಲ್ಲದೇ ಪಾಕಿಸ್ಥಾನವು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾನಾ ತಂತ್ರ ಹೂಡಿದ್ದಕ್ಕೆ ಇವರು ಪ್ರತಿತಂತ್ರ ಹೂಡಿ ಆಪರೇಶನ್‌ ಕಾಶ್ಮೀರದ ಮೂಲಕ ಕಾಶ್ಮೀರ ರಕ್ಷಣೆಗೆ ಮುಂದಾದರು.

ಎರಡನೇ ಮಹಾಯುದ್ಧದಲ್ಲಿ ಮಹತ್ವದ ಪಾತ್ರ
ಕೆ.ಎಸ್‌. ತಿಮ್ಮಯ್ಯ ಅವರು 2ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದರು. ಈ ಯುದ್ಧದಲ್ಲಿ ಇವರ ಸೇವೆ ಮತ್ತು ಧೈರ್ಯ ಸಾಹಸ ಮೆಚ್ಚಿ ಡಿಸ್ಟಿಂಗ್ವಿಶ್‌x ಸರ್ವೀಸ್‌ ಆರ್ಡರ್‌ (ಡಿಎಸ್‌ಒ) ಎಂಬ ಗೌರವವನ್ನು ಪಡೆದಿದ್ದಾರೆ. 2ನೇ ವಿಶ್ವಯುದ್ಧದ ಅನಂತರ ಇವರನ್ನು ಬ್ರಿಟಿಷ್‌ ಸೇನೆಯೂ 268ನೇ ಭಾರತೀಯ ಕಾಲಾಳು ಪಡೆಯ ಬ್ರಿಗೇಡ್‌ನ‌ನ್ನಾಗಿ ಆಯ್ಕೆ ಮಾಡಿತ್ತು. ಇಲ್ಲಿ ಕೂಡ ಇವರು ಪ್ರಮುಖ ಪಾತ್ರ ವಹಿಸಿ, ಸೈ ಎನಿಸಿಕೊಂಡಿದ್ದರು.

ಜನರಲ್‌ ಆಗಿ ಭಡ್ತಿ
ಕೆ.ಎಸ್‌. ತಿಮ್ಮಯ್ಯ ಅವರ ದೇಶಭಕ್ತಿ, ತಂತ್ರಗಾರಿಕೆ ಹಾಗೂ ಚಾಣಕ್ಯವನ್ನು ಗಮನಿಸಿ ಇವರನ್ನು 1957ರಲ್ಲಿ ಭಾರತೀಯ ಭೂ ಸೇನೆಯ ಜನರಲ್‌ ಆಗಿ ನೇಮಿಸಲಾಯಿತು. 1959ರಲ್ಲಿ ಇವರು ಚೀನ ಯುದ್ಧದ ಮುನ್ಸೂಚನೆ ನೀಡಿದರು. ಆದರೆ ಇದನ್ನು ಸರಕಾರವು ತಿರಸ್ಕರಿಸಿತ್ತು. ಈ ಧೋರಣೆ ಖಂಡಿಸಿ ರಾಜೀನಾಮೆ ನೀಡಿದ್ದ ಅವರನ್ನು ನೆಹರೂ ಅವರು ಮನವೊಲಿಸಿ ರಾಜೀನಾಮೆಯನ್ನು ಹಿಂಪಡೆಯುವಂತೆ ಮಾಡಿದ್ದರು. ಬಳಿಕ 1961ರಲ್ಲಿ ಸೇನೆಯಿಂದ ನಿವೃತ್ತರಾದರು.

ಸೇವೆಗೆ ಸಂದ ಪದ್ಮವಿಭೂಷಣ
ಕಮ್ಯುನಿಸ್ಟ್‌ ಮತ್ತು ಪಶ್ಚಿಮ ದೇಶಗಳೊಡನೆ ನಿಷ್ಪಕ್ಷಪಾತದಿಂದ ವ್ಯವಹರಿಸಿ ತಿಮ್ಮಯ್ಯನವರು ಎಲ್ಲರ ಮೆಚ್ಚುಗೆ ಪಡೆದರು. ಇದನ್ನು ಗಮನಿಸಿದ ಭಾರತ ಸರಕಾರವು ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ವಿದೇಶದಲ್ಲಿ ಹೆಮ್ಮೆಯ ಮಗನಿಗೆ ಗೌರವ
ಸೈಪ್ರಸ್‌ ದೇಶದಲ್ಲಿ ಶಾಂತಿ ನೆಲೆಸಲು ಪ್ರಮುಖ ಪಾತ್ರ ವಹಿಸಿದ ತಿಮ್ಮಯ್ಯ ಅವರ ಸ್ಮರಣಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ,ಅಲ್ಲಿನ ರಸ್ತೆಗೆ ಇವರ ಹೆಸರನ್ನಿಡಲಾಗಿದೆ. ಜತೆಗೆ ಆಗ್ರಾ ಹಾಗೂ ಬೆಂಗಳೂರಿನ ಶಿವಾಜಿನಗರದ ದಂಡು ಪ್ರದೇಶದಲ್ಲಿನ ಒಂದು ರಸ್ತೆ ಮತ್ತು ರಿಚ¾ಂಡ್‌ ವೃತ್ತದಿಂದ ಹಳೆಯ ವಿಮಾನ ನಿಲ್ದಾಣದವರೆಗಿರುವ ರಸ್ತೆಯನ್ನು ಜನರಲ್‌ ತಿಮ್ಮಯ್ಯ ಮಾರ್ಗವೆಂದು ಮರು ನಾಮಕರಣಗೊಳಿಸಿದ್ದಾರೆ.

ಬ್ರಿಟನ್ನಿನ ಮಿಲಿಟ್ರಿ ಅಕಾಡೆಮಿಗೆ ಆಯ್ಕೆಯಾಗಿದ್ದರು
ತಿಮ್ಮಯ್ಯ ಅವರು ಬೆಂಗಳೂರಿನ ಬಿಷಪ್‌ ಕಾನ್ವೆಂಟ್‌ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಅನಂತರ ಡೆಹ್ರಾಡೂನ್‌ನ ಪ್ರಿನ್ಸ್‌ ಆಫ್ ವೇಲ್ಸ್‌ ರೋಯಲ್‌ ಇಂಡಿಯನ್‌ ಮಿಲಿಟ್ರಿ ಕಾಲೇಜಿಗೆ ಸೇರಿ ಅಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಬ್ರಿಟನ್ನಿನ ರೋಯಲ್‌ ಮಿಲಿಟ್ರಿ ಅಕಾಡೆಮಿ ಸ್ಯಾಂಡರ್ಸ್ಡ್ಗೆ ಆಯ್ಕೆಯಾದರು. ಇದಕ್ಕೆ ಆಯ್ಕೆಯಾದ ಆರು ಮಂದಿ ಭಾರತೀಯರ ಪೈಕಿ ಇವರು ಒಬ್ಬರು ಎಂಬುದು ಕನ್ನಡಿಗರಾದ ನಾವು ಗೌರವ ಪಡುವ ಸಂಗತಿ.

ತಿಮ್ಮಯ್ಯನವರು ಸ್ಯಾಂಡರ್ಸ್ಡ್ ಮಿಲಿಟ್ರಿ ಅಕಾಡೆಮಿಯಲ್ಲಿ ಪದವಿ ಪಡೆದ ಬಳಿಕ 1926ರಲ್ಲಿ ಬ್ರಿಟಿಷ್‌ ಇಂಡಿಯಾ ಸೇನೆಗೆ ನಿಯೋಜನೆಗೊಂಡರು. ಇರಾಕ್‌ನ ಬಾಗ್ಧಾದ್‌ನಲ್ಲಿ ಸ್ಕಾಟಿಷ್‌ 2ನೇ ಹೈಲ್ಯಾಂಡ್‌ನ‌ಲ್ಲಿ ಕಾಲಾಳು ಪಡೆಯಲ್ಲಿ ರೆಜಿಮೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿರುವಾಗ ಕಿಂಗ್‌ ಫೈಸಲ್‌ ಅರಮನೆಯಲ್ಲಿದ್ದ ನಿರಾಶ್ರಿತ ಮಹಿಳೆಯರನ್ನು ರಕ್ಷಣೆ ಮಾಡಿದ ಹೆಗ್ಗಳಿಕೆ ಇವರಿಗಿದೆ. ಮುಂದೆ ಪಾಕಿಸ್ಥಾನದ ಹಲವೆಡೆ ಕೂಡ ಇವರು ಕರ್ತವ್ಯ ನಿರ್ವಹಿಸಿದ್ದಾರೆ. ಕ್ವೆಟ್ಟಾದಲ್ಲಿ ಭೂಕಂಪ ಸಂಭವಿಸಿದಾಗ ಸೇನೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪರಿ ವಿಸ್ಮರಣೀಯವಾದುದು.

Advertisement

Udayavani is now on Telegram. Click here to join our channel and stay updated with the latest news.

Next