ಮಸ್ಕಿ: ಸುಳ್ಳಿನ ಅವಾರ್ಡ್ ಇದ್ದರೆ ಅದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡಬೇಕೆಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುರುಬ ಸಮಾಜ ಎಸ್ಟಿ ಸಮುದಾಯಕ್ಕೆ ಸೇರಿಸಲು ನಡೆದ ಹೋರಾಟಕ್ಕೆ ತಮ್ಮನ್ನು ಕರೆದಿಲ್ಲ ಎಂದು ಸುಳ್ಳು ಹೇಳಿದರು. ಆಗ ನಡೆದ ಹೋರಾಟದಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂದು ಮತ್ತೂಂದು ಸುಳ್ಳು ಹೇಳಿದರು. ಸಮ್ಮಿಶ್ರ ಸರಕಾರವನ್ನು ಕೆಡವಿದ್ದೂ 17 ಜನ ಶಾಸಕರೆಂದರು. ಆದರೆ ಇದರ ಹಿಂದೆಯೂ ಸಿದ್ದರಾಮಯ್ಯರೇ ಇದ್ದರು. ಹೀಗಾಗಿ ಸಿದ್ದರಾಮಯ್ಯರಿಗೆ ಸುಳ್ಳಿನ ಸರದಾರ ಎನ್ನಬಹುದು ಎಂದರು.
ನಮ್ಮ ಮೇಲೆ ಅನಗತ್ಯ ಆರೋಪ :
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ಪ್ರತಾಪ್ ಗೌಡ ಪಾಟೀಲ್ ಈ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗುವುದು ಖಚಿತ. ಕಾಂಗ್ರೆಸ್‌ನಲ್ಲಿ ಸದ್ಯ ಕೆಟ್ಟ ಪರಿಸ್ಥಿತಿ ಇದೆ. ಒಂದೆಡೆ ಮದವೇರಿದ ಟಗರು, ಮತ್ತೂಂದೆಡೆ ಹಾಸು ಬಂಡೆಯ ಸ್ವಾರ್ಥಕ್ಕೆ ಪಕ್ಷದ ವರ್ಚಸ್ಸು ಮರೆಯಾಗುತ್ತಿದೆ. ಇಬ್ಬರು ಸಿಎಂ ರೇಸ್‌ನಲ್ಲಿರುವುದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದೆ ಎಂದರು.
ಬಿಜೆಪಿ ಸೇರಿದ್ದು ಅಭಿಮಾನದಿಂದ :
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ನಾನು ಬಿಜೆಪಿ ಪಕ್ಷ ಸೇರಿದ್ದು ಅಭಿಮಾನದಿಂದ. ಹೃದಯದಿಂದ ಪಕ್ಷಕ್ಕೆ ಬಂದಿದ್ದೇನೆಯೇ ಹೊರತು ಯಾವುದೇ ಲೆಕ್ಕಚಾರದಿಂದಲ್ಲ. ಆರ್. ಬಸನಗೌಡ ತುರುವಿಹಾಳ ನನಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ನನ್ನ ಬಳಿ ದುಡ್ಡು ತೆಗೆದುಕೊಂಡು ನನ್ನ ಜತೆಗೆ ಇರುವೆ ಎಂದು ಹೇಳಿ ಈಗ ಕಾಂಗ್ರೆಸ್ ಸೇರುವ ಮೂಲಕ ದ್ರೋಹ ಬಗೆದಿದ್ದಾರೆ ಎಂದರು.