Advertisement

Eshwarappa: ಕರಸೇವಕರನ್ನು ಮುಟ್ಟಿದರೆ ಕಾಂಗ್ರೆಸ್ ಭಸ್ಮವಾಗಿ ಹೋಗುತ್ತೆ: ಈಶ್ವರಪ್ಪ

01:49 PM Jan 03, 2024 | Team Udayavani |

ದಾವಣಗೆರೆ: ಕರಸೇವಕರನ್ನು ಯಾರಾದರೂ ಮುಟ್ಟಲಿ ನೋಡೋಣ..ಜೈಲಿಗೆ ಹಾಕಲಿ ನೋಡೋಣ… ಮುಟ್ಟಿದರೆ ಕಾಂಗ್ರೆಸ್ಸೇ ಭಸ್ಮವಾಗುತ್ತದೆ. ಕರಸೇವಕರನ್ನು ಬಂಧಿಸುವುದಾದರೆ ರಾಜ್ಯಾದ್ಯಂತ ಇರುವ ಎಲ್ಲ ಕರಸೇವಕರನ್ನು ಬಂಧಿಸಲಿ, ನಾನೂ ಒಬ್ಬ ಕರಸೇವಕ ನನ್ನನ್ನೂ ಬಂಧಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.

Advertisement

ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೂವತ್ತು ವರ್ಷ ಹಳೆಯ ೬೦೦ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ರಾಜ್ಯ ಗೃಹ ಸಚಿವರೇ ಹೇಳಿದ್ದಾರೆ. ೬೦೦ಪ್ರಕರಣಗಳಲ್ಲಿ ಹುಬ್ಬಳ್ಳಿಯ ಒಂದೇ ಪ್ರಕರಣವನ್ನು ಏಕೆ ಕೈಗೆತ್ತಿಕೊಂಡಿದ್ದೀರಿ? ಉಳಿದೆಲ್ಲ ಪ್ರಕರಣಗಳನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದಿತ್ತಲ್ಲ? ಶ್ರೀರಾಮ ಮಂದಿರ ಉದ್ಘಾಟನೆಯನ್ನು ದೇಶದೆಲ್ಲೆಡೆ ದೀಪಾವಳಿ ರೀತಿಯಲ್ಲಿ ಆಚರಣೆ ಮಾಡುತ್ತಿರುವ ಹೊತ್ತಲ್ಲಿ, ರಾಮಭಕ್ತನನ್ನು ಬಂಧಿಸುವ ಅವಶ್ಯಕತೆ ಏನಿತ್ತು? ಎಂದರು.

ರಾಜ್ಯದಲ್ಲಿ ಕೋಮುಗಲಭೆಗೆ ಬಿಜೆಪಿಯವರು ಆಸಕ್ತಿ ತೋರುತ್ತಿಲ್ಲ. ಮುಖ್ಯಮಂತ್ರಿಯವರೇ ಆಸ್ಪದ ನೀಡುತ್ತಿದ್ದಾರೆ. ಅವರೇ ರಾಜ್ಯದಲ್ಲಿ ಕೋಮುಗಲಭೆಗೆ ಪ್ರಯತ್ನ ಮಾಡುತ್ತಿದ್ದಾರೆ. ಕರಸೇವಕರ ಬಂಧನ, ಹಿಜಾಬ್ ಹೀಗೆ ಒಂದಾದ ಮೇಲೊಂದು ಮಾತನಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಡವಾದದ್ದೆಲ್ಲ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಹೊರತುಪಡಿಸಿ ಉಳಿದ ಯಾವ ರಾಜ್ಯದ ಮುಖ್ಯಮಂತ್ರಿಗಳನ್ನೂ ಆಹ್ವಾನಿಸಿಲ್ಲ. ಕೇಂದ್ರ ಸಚಿವರನ್ನೂ ಆಹ್ವಾನಿಸಿಲ್ಲ ಎಂದರು.

ತಮ್ಮ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸಿದೆ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಪ್ಪು ಯಾರು ಮಾಡುತ್ತಾರೋ ಅವರಿಗೆ ಶಿಕ್ಷೆಯಾಗುತ್ತದೆ. ತಪ್ಪು ಮಾಡಿದವರ ವಂಶ ಹಾಳಾಗುತ್ತದೆ. ನಾವು ಡಿ.ಕೆ. ಶಿವಕುಮಾರ್ ಮಾಡಿದಕ್ಕೆಲ್ಲ ಸರಿ ಎನ್ನುತ್ತ ಹೋಗಬೇಕೇ? ಎಂದು ಪ್ರತ್ಯುತ್ತರ ನೀಡಿದರು.

Advertisement

ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಆಧಾರದಲ್ಲಿ ಎದುರಿಸಲು ಮುಂದಾದರೆ ನಾವು ಅದಕ್ಕೂ ಸಿದ್ಧ. ಇಲ್ಲವೇ ಹಿಂದುತ್ವದ ಆಧಾರದಲ್ಲಿ ಚುನಾವಣೆಗೆ ಹೋಗುವುದಾದರೆ ನಾವು ಅದಕ್ಕೂ ಬದ್ಧ ಎಂದು ಹೇಳಿದರು.

ಯಡಿಯೂರಪ್ಪ ಬಂಧನ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯಡಿಯೂರಪ್ಪ ಬಂಧನ ವಿಚಾರವೇ ಬೇರೆ. ಕರಸೇವಕರ ಬಂಧನ ವಿಚಾರವೇ ಬೇರೆ. ಯಡಿಯೂರಪ್ಪ ಅವರ ಮೇಲೆ ಲೋಕಾಯುಕ್ತ ಆರೋಪವಿತ್ತು. ಅವರು ಆರೋಪಮುಕ್ತರಾಗಿ ಬರಲಿ ಎಂಬ ಕಾರಣಕ್ಕಾಗಿ ಅವರು ಜೈಲಿಗೆ ಹೋದಾಗ ಯಾರೂ ಹೋರಾಟ ಮಾಡಲಿಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Vijayapura: ಬಜೆಟ್ ಗಿಂತ ಹೆಚ್ಚಿನ ಹಣ ಲೂಟಿ ಹೊಡೆದದ್ದೇ ಇವರ ರಾಮರಾಜ್ಯ: ಎಂ.ಬಿ.ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next