ರಾಯಚೂರು: ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವೇಳೆ ನಾನೂ ಸೇರಿ ಹಿರಿಯರನ್ನು ಸಂಪುಟದಿಂದ ಬಿಟ್ಟರೆ ತಪ್ಪೇನಿಲ್ಲ. ನಾವೇನು ಗೂಟ ಹೊಡೆದುಕೊಂಡು ಕೂತಿಲ್ಲ. ಯುವಕರಿಗೆ ಅವಕಾಶ ನೀಡಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂತ್ರಾಲಯದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ. ಬಿಜೆಪಿ ಸ್ವರ್ಗವಾದರೆ, ಕಾಂಗ್ರೆಸ್ ನರಕ. ಹಿಂದುಳಿದವರಿಗೆ ದ್ರೋಹ ಮಾಡಿದವರು ಯಾರಾದರೂ ಇದ್ದರೆ ಅದು ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ. ರಾಜ್ಯದಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷಕ್ಕಿಂತ ಕಡೆಯಾಗಲಿದ್ದು, ಅದು ಹೀನಾಯ ಸ್ಥಿತಿಗೆ ಹೋಗಲು ಸಿದ್ದರಾಮಯ್ಯನವರೇ ಸಾಕ್ಷಿಯಾಗಲಿದ್ದಾರೆ ಎಂದರು.
ಸಿದ್ದರಾಮಯ್ಯರದ್ದು ಬರೀ ಸೊಕ್ಕಿನ ಮಾತು. ಎಲ್ಲ ಚುನಾವಣೆಗಳಲ್ಲಿ ಸೋತರೂ ಅವರ ಸೊಕ್ಕು ಕಡಿಮೆ ಆಗಿಲ್ಲ. ತಮ್ಮ ಸರ್ವಾ ಧಿಕಾರಿ ಧೋರಣೆಯಿಂದಲೇ ಚಾಮುಂಡೇಶ್ವರಿಯಲ್ಲಿ ಸೋತಿದ್ದು. ಕುರುಬ ಸಮಾಜದಲ್ಲೂ ಯಾವುದೇ ನಾಯಕರನ್ನು ಅವರು ಬೆಳೆಸಲಿಲ್ಲ. ತಾವು ಸಿಎಂ ಆದಾಗ ಸಂಪುಟದಲ್ಲಿ ಒಬ್ಬ ಕುರುಬರಿಗೂ ಸ್ಥಾನ ನೀಡಲಿಲ್ಲ. ಬೇರೆ ಜಾತಿ ನಾಯಕರನ್ನೂ ಬೆಳೆಯಲು ಬಿಡಲಿಲ್ಲ. ಮುಸ್ಲಿಂ ಸಮಾಜದ ನಾಯಕ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಕಾಂಗ್ರೆಸ್‌ನವರು ಒಬ್ಬ ಮುಸ್ಲಿಂ ನಾಯಕರನ್ನು ಮುಖ್ಯಮಂತ್ರಿ ಮಾಡಿದ್ದಾರೆಯೇ ಹೇಳಲಿ. ಇದು ನಾನೂ ಹೇಳಿದ್ದಲ್ಲ ಇಬ್ರಾಹಿಂ ಅವರೇ ಹೇಳಿದ್ದು. ಅದಕ್ಕೆ ಇಬ್ರಾಹಿಂ ಕಾಂಗ್ರೆಸ್‌ನವರು ಚಡ್ಡಿ ಕೊಟ್ರಾ, ಪ್ಯಾಂಟ್ ಕೊಡ್ಲಿಲ್ಲ ಅಂತ ಹೇಳಿದ್ದರು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೂಲಕ ಅಹಿಂದ ಕೆಲಸ ಮಾಡದಂತೆ ಸಿದ್ದರಾಮಯ್ಯಗೆ ಅಂಕುಶ ಹಾಕಲಾಗಿದೆ. ಅವರ ಕಾಲನ್ನು ಡಿಕೆಶಿ ಕಟ್ ಮಾಡಿದ್ದಾರೆ. ಹಿಂದುಳಿದ ವರ್ಗದ ಸಮಾವೇಶ ಮಾಡಲು ಸಿದ್ದರಾಮಯ್ಯಗೆ ಸ್ವಾತಂತ್ರÂ ಇಲ್ಲ. ಸಮಾವೇಶ ಮಾಡದಂತೆ ಕಡಿವಾಣ ಹಾಕಲಾಗಿದೆ. ಈ ಕಡೆ ಪ್ರತ್ಯೇಕ ಸಭೆ ಮಾಡಬೇಡಿ ಅಂತ ಸಿದ್ದರಾಮಯ್ಯ ಡಿಕೆಶಿಗೆ ಹೇಳುತ್ತಾರೆ. ಇದು ಕಾಂಗ್ರೆಸ್‌ನ ದುಃಸ್ಥಿತಿ. ಪ್ರಧಾನಿ ಮೋದಿ ಹಿಂದುಳಿದ ವರ್ಗಗಳಿಗೆ ಸಂಪುಟದಲ್ಲಿ 27 ಸ್ಥಾನಗಳನ್ನು ನೀಡಿದ್ದರೆ; ದಲಿತರಿಗೆ 20 ಮಂತ್ರಿ ಸ್ಥಾನ ನೀಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಎಲ್ಲ ಹಿಂದುಳಿದ ಸಮಾಜಗಳಿಗೆ ಭೂಮಿ ನೀಡುವುದಾಗಿ ಹೇಳಿದ್ದಾರೆ ಎಂದರು.