Advertisement
ಇದಿಷ್ಟೂ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಮಾತುಗಳು. ಪುತ್ರ ಕಾಂತೇಶ್‌ಗೆ ಹಾವೇರಿ ಟಿಕೆಟ್ ನಿರೀಕ್ಷಿಸಿದ್ದ ಈಶ್ವರಪ್ಪ, ಟಿಕೆಟ್ ಕೈತಪ್ಪುವ ಸುಳಿವು ಸಿಗುತ್ತಿದ್ದಂತೆ ಮಗನಿಗಲ್ಲದಿದ್ದರೂ ನನಗೇ ಟಿಕೆಟ್ ಕೊಡಿ, ನಾನೇ ನಿಲ್ಲುತ್ತೇನೆ ಎಂದಿದ್ದರು. ಆದರೂ ಪಕ್ಷ ಟಿಕೆಟ್ ಕೊಟ್ಟಿರಲಿಲ್ಲ. ಇದರಿಂದ ಬಂಡೆದಿದ್ದ ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ವಿರುದ್ಧ ತೊಡೆತಟ್ಟಿ ಚುನಾವಣ ಕಣಕ್ಕಿಳಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿ ಪ್ರಚಾರವನ್ನೂ ಮಾಡಿದ್ದರು. ಈ ಕಾರಣಗಳಿಂದ ಪಕ್ಷದಿಂದ ಉಚ್ಛಾಟನೆಯೂ ಆಗಿದ್ದಾರೆ.
Related Articles
Advertisement
ನೀವು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇಕೆ? ನಿಮ್ಮ ಉದ್ದೇಶವೇನಿತ್ತು?
ಬಿಜೆಪಿ ಎಂಬುದು ಪ್ರಪಂಚದಲ್ಲೇ ವಿಶೇಷವಾದ ಸಂಘಟನೆ. ಇದು ವ್ಯಕ್ತಿಗತವಾದದ್ದಲ್ಲ. ಯಾರೋ ಒಬ್ಬೊಬ್ಬರದ್ದಲ್ಲ. ಇಂಥಾ ಸಂಘಟನೆಗೆ ಕರ್ನಾಟಕದಲ್ಲಿ ಮಾತ್ರ ಬೇರೆ ರೂಪ ಇರಲು ಸಾಧ್ಯವಿಲ್ಲ. ಒಂದು ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಎಂದು ಪ್ರಧಾನಿ ಮೋದಿ ಅವರು ಹಲವು ಬಾರಿ ಹೇಳಿದ್ದಾರೆ. ಇಲ್ಲಿ ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷವಿದೆ. ಅಪ್ಪನಿಗೊಂದು ಹುದ್ದೆ, ಮಕ್ಕಳಿಬ್ಬರಿಗೂ ಒಂದೊಂದು ಹುದ್ದೆ. ದೇಶದಲ್ಲಿ ಎಲ್ಲಿಯಾದರೂ ಈ ವ್ಯವಸ್ಥೆ ಇದೆಯೇ? ಕರ್ನಾಟಕ ಬಿಜೆಪಿ ಈ ದೇಶದಲ್ಲಿ ಇಲ್ಲವೇ? ಈ ವಿಚಾರ ಚರ್ಚೆ ಆಗಬೇಕು, ಪಕ್ಷ ಶುದ್ಧೀಕರಣ ಆಗಬೇಕು ಎನ್ನುವ ದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಈ ಬಗ್ಗೆ ವರಿಷ್ಠರಿಗೂ ಹೇಳಿದ್ದೆ. ಮಾತನಾಡೋಣ ಎಂದಿದ್ದರು. ಇದು ಒಂದು ದಿನದ ಪ್ರಯತ್ನವಾಗಿರಲಿಲ್ಲ. ಅನಿವಾರ್ಯವಾಗಿ ಸ್ಪರ್ಧಿಸಬೇಕಾಯಿತು.
ನಿಮ್ಮ ಉದ್ದೇಶ ಈಡೇರಿದೆಯೇ? ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲವಲ್ಲ?
ಗೆಲ್ಲಬೇಕು ಎನ್ನುವ ಉದ್ದೇಶ ನನಗೆ ಇರಲಿಲ್ಲ. ಹಾಗಿದ್ದಿದ್ದರೆ ಕಾಂಗ್ರೆಸ್‌ನವರೂ ಕರೆದಿದ್ದರು, ಅಖೀಲೇಶ್ ಯಾದವ್ ಕೂಡ ದೂರವಾಣಿ ಕರೆ ಮಾಡಿ ಕರೆದಿದ್ದ. ನನ್ನ ಮೈಯಲ್ಲಿ ಇರುವುದು ಹಿಂದೂ ರಕ್ತ. ನಾನೆಂದೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಅವರೆಲ್ಲರಿಗೂ ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ. ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷ ಬಿಟ್ಟು ಯಾರೂ ಗೆಲ್ಲಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿತ್ತು. ನನ್ನ ಸ್ಪರ್ಧೆಯು ರಾಷ್ಟ್ರ, ರಾಜ್ಯ ಹಾಗೂ ಪರಿವಾರದ ಮಟ್ಟದಲ್ಲಿ ಒಂದು ಚರ್ಚೆಯನ್ನಂತೂ ಹುಟ್ಟು ಹಾಕಿದೆ. ನರೇಂದ್ರ ಮೋದಿ ಇದ್ದೂ, ಪಕ್ಷದ ಚಿಹ್ನೆ ಇದ್ದೂ ನಮ್ಮ ಪರಿಸ್ಥಿತಿ ಎಲ್ಲಿಗೆ ಬಂತು? ಲೋಕಸಭಾ ಚುನಾ ವಣೆಯಲ್ಲಿ 9 ಸ್ಥಾನ ಕಳೆದುಕೊಂಡೆವು, ವಿಧಾನಪರಿಷತ್ ಚುನಾ ವಣೆ ಯಲ್ಲಿ 3 ಸ್ಥಾನ ಕಳೆದುಕೊಂಡೆವು. ಅದಕ್ಕಾಗಿ ಹೇಳುತ್ತಿದ್ದೇನೆ ಇಂತಹ ಸಂದರ್ಭದಲ್ಲಿ ಪಕ್ಷ ಇನ್ನೂ ಹೀನಾಯ ಸ್ಥಿತಿಗೆ ಹೋಗಬಾರದು.
ಪಕ್ಷ ಶುದ್ಧೀಕರಣ ಎಂದರೇನು? ಈ ಹೋರಾಟದಲ್ಲಿ ನೀವು ಒಬ್ಬಂಟಿ ಆಗಿದ್ದೀರಿ ಎನಿಸುವುದಿಲ್ಲವೇ?
ಏನೇ ತೀರ್ಮಾನ ಇದ್ದರೂ ಅಪ್ಪ-ಮಕ್ಕಳೆ ತೆಗೆದುಕೊಳ್ಳುತ್ತಾರೆ. ಇದು ಸರಿಯಲ್ಲ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಡಾ| ಧನಂಜಯ್ ಸರ್ಜಿಯನ್ನು ಅಭ್ಯರ್ಥಿ ಎಂದು ಘೋಷಿಸಿ ಬಿಟ್ಟರು. ಈ ಬಗ್ಗೆ ಎಲ್ಲಿ ಚರ್ಚೆ ಆಯಿತು? ಇದರಿಂದ ಎಷ್ಟು ಹಿರಿಯ ಕಾರ್ಯಕರ್ತರಿಗೆ ನೋವಾಗಿದೆ ಗೊತ್ತೆ? ನಿನ್ನೆ-ಮೊನ್ನೆ ಬಂದವರಿಗೆ, ಇವರ ಸುತ್ತ ಓಡಾಡುವ ಜಾತಿಯವರಿಗೆ ಕೊಟ್ಟರೆ ಯಾವ ನ್ಯಾಯ ಎಂದು ಎಷ್ಟೋ ಜನ ಪ್ರಶ್ನಿಸಿದ್ದಾರೆ. ಪ್ರಮುಖರೆಲ್ಲ ಪಕ್ಕಕ್ಕೆ ಸರಿದಿದ್ದಾರೆ. ಅದೆಲ್ಲ ಸರಿ ಆಗಬೇಕೆಂದು ಚುನಾವಣೆಗೆ ನಿಂತಿದ್ದೆ. ಅದು ಚರ್ಚೆ ಆಗಿದೆ. ಕೆಲವರು ಬಹಿರಂಗವಾಗಿ ಹೇಳಿಕೊಳ್ಳಲು ತಯಾರಿಲ್ಲ, ಹೆದರುತ್ತಾರೆ. ನನಗ್ಯಾವ ಮುಲಾಜೂ ಇಲ್ಲ. ಈ ವಿಚಾರದಲ್ಲಿ ನಾನು ಒಬ್ಬಂಟಿಯೂ ಅಲ್ಲ. ನನ್ನ ಸ್ಪರ್ಧೆಯನ್ನು ಬೆಂಬಲಿಸಿದ ಅನೇಕರ ಮನಸ್ಸಿನಲ್ಲಿ ನೋವಿತ್ತು.
ನಿಮ್ಮದೇ ಮನಸ್ಥಿತಿ ಹೊಂದಿರುವ ಸದಾನಂದಗೌಡರು ನಿಮ್ಮ ಸ್ಪರ್ಧೆಯನ್ನು ಸರಿಯಲ್ಲ ಎಂದಿದ್ದಾರಲ್ಲ?
ಅನೇಕರು ದೂರವಾಣಿ ಕರೆ ಮಾಡಿ ನನ್ನ ನಿರ್ಧಾರ ಸರಿ ಎಂದಿದ್ದಾರೆ. ಅವರೆಲ್ಲರೂ ನನ್ನ ಜತೆಗೆ ಬರಬೇಕು ಎಂದು ನನ್ನ ಅಪೇಕ್ಷೆ ಇಲ್ಲ. ನನಗೆ ಪಕ್ಷ ಕೊಟ್ಟು ಸಂಸ್ಕಾರದ ಪ್ರಕಾರವೇ ಇದನ್ನು ಶುದ್ಧೀಕರಣ ಮಾಡಬೇಕೆಂದು ಹೊರಟಿದ್ದೇನೆ. ನಾನು ಯಾರ ಹೆಸರನ್ನೂ ಹೇಳಲು ಇಷ್ಟಪಡುವುದಿಲ್ಲ. ಸದಾನಂದಗೌಡರದ್ದು ವೈಯಕ್ತಿಕ ಅಭಿಪ್ರಾಯ ಏನೇ ಇರಲಿ, ನನ್ನನ್ನು ಭೇಟಿ ಮಾಡಿದಾಗ ನನ್ನ ಬಳಿ ವೈಯಕ್ತಿಕವಾಗಿ ಬೇರೆಯೇ ಮಾತನಾಡಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಲ್ಲ. ನಾನು ಯಾರನ್ನೂ ಜತೆ ಮಾಡಿಕೊಳ್ಳುವುದಿಲ್ಲ. ಒಂದೇ ದಿನಕ್ಕೆ ಪಕ್ಷ ಶುದ್ಧೀ ಕರಣ ಆಗುವುದಿಲ್ಲ. ಇಂತಿಷ್ಟೇ ದಿನದಲ್ಲಿ ಆಗಬೇಕು ಎನ್ನಲು ನಾನ್ಯಾರು. ಆದರೆ ಒಂದಲ್ಲ ಒಂದು ದಿನ ಪ್ರಯತ್ನ ಫಲ ಕೊಟ್ಟೇ ಕೊಡುತ್ತದೆ.
ಪಂಚಾಯತ್ ಚುನಾವಣೆಗಳ ಮೇಲೂ ಇವೆಲ್ಲ ಪರಿಣಾಮ ಬೀರುವುದಿಲ್ಲವೇ?
ಲೋಕಸಭೆ ಚುನಾವಣೆ ಅಥವಾ ಮುಂಬರುವ ಪಂಚಾಯತ್ ಚುನಾವಣೆ ಮತ್ತದರ ಫಲಿತಾಂಶಗಳ ಬಗ್ಗೆ ತೀರ್ಮಾನ ಮಾಡುವುದು ನಾನಲ್ಲ. ಪರಿವಾರದ ಹಿರಿಯರಿದ್ದಾರೆ. ನಾನು ತೆಗೆದುಕೊಂಡ ನಿರ್ಧಾರ ಸರಿ ಇದೆ ಎನ್ನುವವರು ಬೇಗ ಅದಕ್ಕೊಂದು ಮುಕ್ತಿ ತರುತ್ತಾರೆ. ಇಲ್ಲದಿದ್ದರೆ ಇನ್ನಷ್ಟು ಅನುಭವ ಆದ ಮೇಲೆ ಮುಕ್ತಿ ತರುತ್ತಾರೆ ಅಷ್ಟೆ.
ಬಿಜೆಪಿ ನಿಮ್ಮನ್ನು ಉಚ್ಛಾಟಿಸಿದೆ. ಆದರೂ ನಾನು ಬಿಜೆಪಿಯಲ್ಲೇ ಇದ್ದೇನೆ ಎನ್ನುತ್ತೀರಲ್ಲಾ? ಏನಿದರ ಮರ್ಮ?
ನನ್ನ ಜೀವನವಿಡೀ ಬಿಜೆಪಿಯೇ. ನಾನು ರಾಜಕಾರಣಕ್ಕೆ ಬಂದದ್ದೂ ಬಿಜೆಪಿಯಿಂದಲೇ ಅವರು ನನ್ನನ್ನು ಅಮಾನತು ಮಾಡಿದರೂ ಸಾಯುವವರೆಗೆ ಬಿಜೆಪಿ ಬಿಟ್ಟು ನಾನೆಂದೂ ಇಲ್ಲ. ಆದರೆ ನಾನು ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದು ಎಲ್ಲಿಯಾದರೂ ಹೇಳಿದ್ದೇನೆಯೇ? ಇಲ್ಲ. ಭಾರತೀಯ ಜನತಾ ಪಕ್ಷದ ವಿಚಾರ, ಸಿದ್ಧಾಂತ ಎಂದಿಗೂ ಮರೆಯುವುದಿಲ್ಲ ಎಂದರ್ಥ. ಅಮಾನತು ಅವರು ಮಾಡಿರಬಹುದು. ಆ ಸಿದ್ಧಾಂತ ನನ್ನ ರಕ್ತದಿಂದ ಹೊರ ಹೋಗಲಾಗಲ್ಲ. ಅದು ನನ್ನ ತಾಯಿ ಸಮಾನ.
ಉದಯವಾಣಿ ಸಂದರ್ಶನ: ಸಾಮಗ ಶೇಷಾದ್ರಿ