ಶಿವಮೊಗ್ಗ: ಚುನಾವಣೆಯಲ್ಲಿ ಗೆದ್ದ ಶಾಸಕ ಬೇರೆ ಕ್ಷೇತ್ರ ಹುಡುಕುವುದು ರಾಜ್ಯದ ಮತ್ತು ಆ ಕ್ಷೇತ್ರದ ಮತದಾರರಿಗೆ ಮಾಡುವ ಅವಮಾನ. ತನ್ನ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನತೆಯ ಮುಂದಿಟ್ಟು ಮತ ಕೇಳುವಂತಿರಬೇಕು. ಅಲೆಮಾರಿಯಂತೆ ಕ್ಷೇತ್ರ ಹುಡುಕಬಾರದು. ಇವತ್ತಿಗೂ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ಹೇಳುತ್ತಿಲ್ಲ. ಇಂದಲ್ಲ ನಾಳೆ ಯಾವ ಪಕ್ಷದಿಂದ ಸ್ಪರ್ಧೆ ಎಂದು ಹೇಳುವ ದಿನ ಕೂಡ ಬರಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರದಿಂದ ಸ್ಪರ್ಧೆ ಎಂಬುವುದೇ ಗೊತ್ತಿಲ್ಲದ ವ್ಯಕ್ತಿ ರಾಜ್ಯವನ್ನು ಆಡಳಿತ ಮಾಡುತ್ತಾರಾ? ಸಿದ್ದರಾಮಯ್ಯರಿಗೆ ಸರಿಯಾದ ಕ್ಷೇತ್ರ ಸಿಗುವುದಿಲ್ಲ, ಯಾವುದೇ ಕ್ಷೇತ್ರದಿಂದ ನಿಂತರು ಸೋಲುತ್ತಾರೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಸಿದ್ದರಾಮಯ್ಯನನ್ನು ಸೋಲಿಸುತ್ತೇವೆ ಎಂದರು.
ಕಳಸ ಬಂಡೂರಿ ಯೋಜನೆ ಜಾರಿಗೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಕಳಸ ಬಂಡೂರಿ ಯೋಜನೆ ಜಾರಿ ವಿಚಾರದಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನ ನಡೆಸಿಲ್ಲ. ಮಲ್ಲಿಕಾರ್ಜುನ ಖರ್ಗೆ, ಧರ್ಮ ಸಿಂಗ್, ಎಚ್ ಕೆ ಪಾಟೀಲ್ ಅವರು ಸೋನಿಯಾ ಭೇಟಿ ಮಾಡಿ ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನಮ್ಮೊಂದಿಗಿದೆ ಎಂದಿದ್ದರು. ಇದಾದ ಒಂದು ತಿಂಗಳಲ್ಲಿ ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಒಂದು ಹನಿ ನೀರು ಕೂಡ ಕರ್ನಾಟಕಕ್ಕೆ ಕೊಡಲ್ಲ ಎಂದು ಭಾಷಣ ಮಾಡಿದ್ದರು. ಕಾಂಗ್ರೆಸ್ ನದು ದ್ವಂದ್ವ ರಾಜಕಾರಣ. ಮಹಾದಾಯಿ ಯೋಜನೆ ರಾಜಕಾರಣಕ್ಕಾಗಿ ಬಳಸಿಕೊಂಡರು ಎಂದು ಟೀಕಿಸಿದರು.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಹದಾಯಿ ಯೋಜನೆ ಮಾಡಿದ್ದೆವು. ಅಂದು ಡಿಸಿಎಂ ಆಗಿದ್ದ ಯಡಿಯೂರಪ್ಪ 100 ಕೋಟಿ ಅನುದಾನ ನೀಡಿದ್ದರು. ಅಂದಿನಿಂದಲೂ ಮಹಾದಾಯಿ ಯೋಜನೆ ವಿಚಾರ ಚಲಾವಣೆಯಲ್ಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮಹಾರಾಷ್ಟ್ರ ಕರ್ನಾಟಕ ಗೋವಾ ಸಿಎಂ ಒಟ್ಟಿಗೆ ಸಭೆ ಕರೆದು ಬಗೆಹರಿಸಲು ಪ್ರಯತ್ನಿಸಿಲ್ಲ. ರಾಜ್ಯಕ್ಕೆ ನ್ಯಾಯ ಕೊಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದ್ದವಾಗಿದೆ. ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ನಾವು ಅದನ್ನು ಮಾಡಲ್ಲ. ಯೋಜನೆ ಜಾರಿಗೊಳಿಸುತ್ತೇವೆ ಎಂದು ಈಶ್ವರಪ್ಪ ಹೇಳಿದರು.