ಶಿವಮೊಗ್ಗ: ತಾಕತ್ತಿದ್ದರೆ ಸಾವರ್ಕರ್ ಪೋಟೋ ಮುಟ್ಟಲಿ ನೋಡೊಣ.. ಅಂದೇ ರಾಜ್ಯದಲ್ಲಿ ಈ ಸರ್ಕಾರ ಇರುವುದಿಲ್ಲ. ಫೋಟೊ ಹಾಕಿದಾಗ ಬಾಯಿಯಲ್ಲಿ ಮಣ್ಣು ಹಾಕಿಕೊಂಡಿದ್ದರೇ? ಸ್ವತಂತ್ರ ಹೋರಾಟಗಾರರಿಗೂ ಪ್ರಿಯಾಂಕ್ ಖರ್ಗೆಗೂ ಏನು ಸಂಬಂಧ? ಹುಚ್ಚುಚ್ಚಾಗಿ ಮಾತನಾಡುವನ ಬಗ್ಗೆ ನಾನು ಮಾತನಾಡುವುದಿಲ್ಲ. ಬೇಕಾದರೆ ಅವರ ಅಪ್ಪನ ಬಗ್ಗೆ ಮಾತಾಡುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ರಕ್ತ ಹಂಚಿಕೊಂಡ ನಾವು ಗೆಲ್ಲುತ್ತೇವೆಯೋ ಅಥವಾ ಮೊಹಮ್ಮದ್ ಅಲಿ ರಕ್ತ ಹಂಚಿಕೊಂಡ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಗೆಲ್ಲುತ್ತಾರೆಯೇ ನೋಡೊಣ ಎಂದು ಸವಾಲೆಸೆದರು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ. ಶ್ಯಾಮ ಪ್ರಸಾದ್ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ ಮತ್ತಿತರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಈ ಹಿಂದೆಯೇ ಬಿಜೆಪಿ ಮತ್ತು ಸಂಘ ಪರಿವಾರ ಇದನ್ನು ವಿರೋಧಿಸುತ್ತಾ ಬಂದಿತ್ತು. ಆದರೆ ನೆಹರು ಅವರು ಮುಸ್ಲೀಮರ ವೋಟಿಗಾಗಿ ವಿಶೇಷ ಸ್ಥಾನಮಾನ ನೀಡಿದ್ದರು. ಅದೇ ರಕ್ತ ಸಿದ್ದರಾಮಯ್ಯ ಅವರಲ್ಲಿ ಹರಿಯುತ್ತಿದೆ ಎಂದರು.
ವಿಶೇಷ ಸ್ಥಾನಮಾನ ರದ್ದಾಗಿರುವುದು ಸಂತಸದ ವಿಷಯ. ಆದರೆ ಕೆಲ ಕಾಂಗ್ರೆಸ್ಸಿಗರು ಇದನ್ನು ವಿರೋಧಿಸುತ್ತಿದ್ದಾರೆ. ಚಿದಂಬರಂ, ಕಪಿಲ್ ಸಿಬಲ್ ಮತ್ತಿತರರು ಹೀಗೆ ಮಾತನಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಜಮ್ಮು-ಕಾಶ್ಮೀರದ ಜನತೆ ಸ್ವಾಗತಿಸಿ ಸಂಭ್ರಮಾಚರಣೆ ನಡೆಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಗೂಂಡಾ ಮತ್ತು ಕೊಲೆಗುಡುಕರ ರಾಜ್ಯವಾಗಲು ಕಾಂಗ್ರೆಸ್ ಕಾರಣ. ಆದರೆ ಇದಕ್ಕೆ ಬಿಜೆಪಿ ಹೆದರುವುದಿಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಆಡಳಿತ ನಡೆಸುವ ಕಾಲ ಮುಗಿಯಲಿದೆ. ಪೇ ಸಿಎಂ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ಸಿಗರಿಗೆ ಪೇ ಡಿಸಿಎಂ ಎಂದು ಹೇಳಿದರೆ ತಡೆದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಗೂಂಡಾಗಳನ್ನು ಬಗ್ಗು ಬಡಿಯಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಪಕ್ಷಕ್ಕಿಂತ ಯತ್ನಾಳ್ ದೊಡ್ಡವರಲ್ಲ: ಸ್ಥಾನಮಾನ ಸಿಗದ ಹೊರತು ಪಕ್ಷದ ಸಭೆಗೆ ಹೋಗುವುದಿಲ್ಲ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಸರಿಯಲ್ಲ. ಪಕ್ಕಕ್ಕಿಂತ ಅವರು ದೊಡ್ಡವರಲ್ಲ. ಪಕ್ಷದ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶವಿದೆ. ಬಿಜೆಪಿಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕೂತು ಚರ್ಚಿಸುವ ಅವಕಾಶವಿದೆ. ಆದರೆ ಯತ್ನಾಳ್ ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ. ಆದರೆ ಇದು ಸರಿಯಲ್ಲ. ಅವರು ಯಾಕೆ ಹೀಗೆ ಮಾಡುತ್ತಿದ್ದಾರೆಂದು ಗೊತ್ತಿಲ್ಲ. ಪಕ್ಷದ ನಾಯಕರು ಇದನ್ನು ಸರಿಪಡಿಸಲಿದ್ದಾರೆ. ಅಲ್ಲಿ, ಇಲ್ಲಿ ಸಮಸ್ಯೆಗಳಿರುತ್ತವೆ, ಅದನ್ನು ಸರಿಪಡಿಸುತ್ತೇವೆ. ಯತ್ನಾಳ್ ಗೆ ಬೇಜಾರಾಗಿ ಹೇಳಿಕೆ ಕೊಡುತ್ತಿದ್ದಾರೆ. ಆದರೆ ಅವರ ಬಹಿರಂಗ ಹೇಳಿಕೆ ನಾನು ಕೂಡ ಒಪ್ಪುವುದಿಲ್ಲ ಎಂದರು.