ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಕೇಳಿ ಬಂದ ಬೆನ್ನಲ್ಲೇ ಸಚಿವ ಈಶ್ವರಪ್ಪ ಇಂದು ಮಧ್ಯಾಹ್ನ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.
ಗುತ್ತಿಗೆದಾರ ಸಂತೋಷ್ ಸಚಿವ ಈಶ್ವರಪ್ಪ ಅವರ ಮೇಲೆ 40% ಕಮಿಷನ್ ಆರೋಪ ಹಾಕಿ ಉಡುಪಿಯ ಖಾಸಗಿ ಹೊಟೇಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು,ಇದಾದ ಬಳಿಕ ಸಚಿವರ ರಾಜೀನಾಮೆಗೆ, ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ.
ಸಂತೋಷ್ ಆತ್ಮಹತ್ಯೆ ಬೆನ್ನಲ್ಲೇ ಸಚಿವ ಈಶ್ವರಪ್ಪ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ನೀಡುತ್ತಾರ ಅಥವಾ ಸಂತೋಷ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ ಹೇಳುತ್ತಾರ ಎನ್ನುವುದು ನೋಡಬೇಕಿದೆ.
ಇದನ್ನೂ ಓದಿ:ಈಶ್ವರಪ್ಪ ರಾಜೀನಾಮೆ ಬಗ್ಗೆ ಏನು ಗೊತ್ತಿಲ್ಲ: ಸಿಎಂ ಬೊಮ್ಮಾಯಿ
ಇನ್ನೊಂದೆಡೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬೆಂಬಲಿಸಿ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಚಿವರ ವಿರುದ್ಧದ ಕಾಂಗ್ರೆಸ್ ಷಡ್ಯಂತ್ರ ವಿರೋಧಿಸಿ, ರಾಷ್ಟ್ರಭಕ್ತರ ಬಳಗದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.