ತೀರ್ಥಹಳ್ಳಿ: ಜನನಿಷ್ಠೆ, ಪ್ರಾಮಾಣಿಕತೆಗೆ ತೀರ್ಥಹಳ್ಳಿ ಹೆಸರುವಾಸಿ. ಅಂತೆಯೇ ಇಲ್ಲಿನ ಅಡಕೆ ಬೆಳೆಗಾರರಿಗೂ ಅಷ್ಟೇ ನಿಷ್ಠೆ, ಪ್ರಾಮಾಣಿಕತೆಯ ಹೆಸರಿದೆ. ಮೌಲ್ಯಯುತ ಅಡಕೆ ತಯಾರಿಸಿ ಗುಟ್ಕಾದಂತಹ ಪೆಡಂಭೂತದ ಎದುರು ಹೋರಾಟ ನಡೆಸಿ ರಾಜ್ಯ, ರಾಷ್ಟ್ರ, ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿಕೊಂಡು ತನ್ನದೇ ಆದ ಮೌಲ್ಯವರ್ಧಕ ಗುಣಗಳೊಂದಿಗೆ ಇಂದಿಗೂ ತನ್ನ ಛಾಪು ಮೂಡಿಸಿಕೊಂಡು ಬಂದಿದೆ ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶನಿವಾರ ಪಟ್ಟಣದ ಹೊರ ವಲಯದ ನೂತನ ಎಪಿಎಂಸಿ ಪ್ರಾಂಗಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಗುಟ್ಕಾ ಬಂದ ಸಂದರ್ಭದಲ್ಲಿ ಕ್ಯಾಂಪ್ಕೋ ಮೂಲಕ ಗುಜರಾತಿಗೆ ಹಾಗೂ ದೇಶ- ವಿದೇಶಗಳ ಮಾರುಕಟ್ಟೆಗೆ ಅಡಕೆಗೆ ತನ್ನದೇ ಆದ ಬೇಡಿಕೆ ಸೃಷ್ಟಿಸುವಲ್ಲಿ ತೀರ್ಥಹಳ್ಳಿ ಪ್ರಮುಖ ಪಾತ್ರ ವಹಿಸಿದೆ. ತೀರ್ಥಹಳ್ಳಿ ಎಂದಾಕ್ಷಣ ಇಲ್ಲಿನ ರೈತರ ಬಗ್ಗೆ, ಅವರ ಪ್ರಾಮಾಣಿಕ ಬೇಡಿಕೆ ಬಗ್ಗೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವಂತಾಗಿದೆ ಎಂದರು. ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಅಡಕೆ ತೀರ್ಥಹಳ್ಳಿಯದ್ದೇ ಆಗಿ, ರಾಜ್ಯ, ರಾಷ್ಟ್ರ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಾಗ ಮಾತ್ರ ಇಲ್ಲಿನ ಅಡಕೆ ಹಾಗೂ ಅಡಕೆ ಬೆಳೆದ ರೈತರಿಗೆ ಗೌರವ ಸಿಕ್ಕಂತಾಗುತ್ತದೆ ಹಾಗೂ ರೈತರ ಮೌಲ್ಯಯುತ ಬದುಕಿಗೆ ಅವಕಾಶವಾಗುತ್ತದೆ ಎಂದರು.
ಪ್ರಸ್ತುತ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದು ಈ ಬಗ್ಗೆ ಸಮಸ್ಯೆ ಸೃಷ್ಟಿಸುವವರ ಸಂಖ್ಯೆ ಹೆಚ್ಚಾಗಿದೆ. ಸಂಬಂಧಪಟ್ಟಂತೆ ಮೂರು ಕಾಯ್ದೆಯಲ್ಲಿ ರೈತರಿಗೆ ನಷ್ಟ ತರುವ ಕಾಯ್ದೆ ಯಾವುದು ಎಂದು ಸ್ಪಷ್ಟಪಡಿಸಬೇಕಿದೆ. ರೈತರು ಬೆಳೆದ ಬೆಳೆಯನ್ನು ಎಪಿಎಂಸಿ ಪ್ರಾಂಗಣದೊಳಗೆ ಮಾರಾಟ ಮಾಡಿದರೆ ಸರ್ಕಾರಕ್ಕೆ ಶೇ. 3 ಲಾಭ ಲಭಿಸುತ್ತದೆ. ಆದ್ದರಿಂದ ಎಪಿಎಂಸಿ ಒಳಗೆ ಮಾರಾಟ ಮಾಡಿ ಎಂದು ತಿದ್ದುಪಡಿ ಮಾಡಿದ್ದಾರೆ.
ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಇಂದಿನ ಹೊಸ ಕಾಯ್ದೆ ಪ್ರಕಾರ ಗುತ್ತಿಗೆ ಪಡೆದವ ತಪ್ಪು ಮಾಡಿದರೆ ಎಸಿಡಿಸಿ ಕೋರ್ಟ್‌ಗೆ ಹೋಗಬಹುದು ಎಂದು ಕಾಯ್ದೆ ಇದೆ. ನಾವೆಲ್ಲಾ ಪಕ್ಷ ಮೀರಿ ಯೋಚನೆ ಮಾಡಿ ಇಂತಹದ್ದೊಂದು ಶಾಸನಬದ್ಧ ಕಾಯ್ದೆ ಮಾಡಲಾಗಿದೆ. ಆದರೆ, ಈ ಸಂದರ್ಭದಲ್ಲಿ ರೈತರನ್ನು ಹುಚ್ಚೆಬ್ಬಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎತ್ತಿಕಟ್ಟುವ ಕೆಲಸ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇತ್ತೀಚಿನ ಬದಲಾದ ಕಾಯ್ದೆಯಲ್ಲಿ ರೈತರ ಖಾತೆಗೆ ಹಣ ಹೋಗಬೇಕೆಂದು ತಿದ್ದುಪಡಿ ತರಲಾಗಿದೆ. ಇದರಿಂದ ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ, ಮಧ್ಯವರ್ತಿಗಳಿಗೆ ಹೊಟ್ಟೆ ಉರಿದಿದೆ. ರೈತರ ಹೆಸರಲ್ಲಿ ಲಾಭ ಪಡೆಯುವ ಕುತಂತ್ರ ಇದಾಗಿದೆ ಎಂದರು. ಸಭೆಯಲ್ಲಿ ಕುಸುಮಾ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಬಿ. ಗಣಪತಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಹಾಬಲೇಶ್, ಕೇಳೂರು ಮಿತ್ರ, ರಂಗಾಯಣ ಅಧ್ಯಕ್ಷ ಸಂದೇಶ್ ಜವಳಿ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ಜಿಪಂ ಸದಸ್ಯರಾದ ಭಾರತಿ ಬಾಳೇಹಳ್ಳಿ ಪ್ರಭಾಕರ್, ಅಪೂರ್ವ ಶರಧಿ ಪೂರ್ಣೆàಶ್, ಕಲ್ಪನಾ ಪದ್ಮನಾಭ್, ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಎಚ್.ಎನ್. ವಿಜಯದೇವ್, ಎಚ್. ಆರ್. ವೆಂಕಟೇಶ್, ಮೈಥಿಲಿ ಸತೀಶ್, ಸವಿತಾ ಶ್ರೀಧರ್, ಗೀತಾ ಸದಾನಂದ ಶೆಟ್ಟಿ, ಕೆ.ಎಂ. ಮೋಹನ್, ಕವಿರಾಜ್, ಪ್ರಕಾಶ್ ಕೋಣಂದೂರು, ಉಮೇಶ್, ಉಷಾ ಭಾಸ್ಕರ್, ಎಸ್.ವಿ. ಲೋಕೇಶ್, ಡಾಕಮ್ಮ, ಎಪಿಎಂಸಿ ಕಾರ್ಯದರ್ಶಿ ಗೋಪಾಲ್ ಮತ್ತಿತರರಿದ್ದರು.