ಹೊಸದಿಲ್ಲಿ: ರಿಷಭ್ ಪಂತ್ ಗಾಯಾಳಾಗಿ ತಂಡದಿಂದ ಹೊರಗುಳಿದ ಕಾರಣ ಆಂಧ್ರಪ್ರದೇಶದ ಕೆ.ಎಸ್. ಭರತ್ ಅವರನ್ನು ಮೀಸಲು ವಿಕೆಟ್ ಕೀಪರ್ ಆಗಿ ಸೇರಿಸಿಕೊಳ್ಳಲಾಗಿದೆ.ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ವಿಷಯವನ್ನು ತಿಳಿಸಿದರು.
26ರ ಹರೆಯದ ಭರತ್ ಈವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳ ನ್ನಾಡಿಲ್ಲ. ಆದರೆ 74 ಪ್ರಥಮ ದರ್ಜೆ ಪಂದ್ಯಗಳಿಂದ 4,143 ರನ್ ಪೇರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ನೂರಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. 254 ಕ್ಯಾಚ್, 27 ಸ್ಟಂಪಿಂಗ್ ಮಾಡಿದ್ದಾರೆ.
“ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಭಾರತ ಎ ತಂಡದೊಂದಿಗೆ ನ್ಯೂಜಿಲ್ಯಾಂಡಿಗೆ ತೆರಳಿದ ಕಾರಣ ಆಯ್ಕೆ ಸಮಿತಿ ಭರತ್ ಅವರನ್ನು ಆರಿಸಿತು’ ಎಂದು ಶಾ ಹೇಳಿದರು.
ಮುಂಬಯಿ ಪಂದ್ಯದ ವೇಳೆ ತಲೆಗೆ ಏಟು ಅನುಭವಿಸಿದ ರಿಷಭ್ ಪಂತ್ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಅವರ ದೇಹಸ್ಥಿತಿಯನ್ನು ಗಮನಿಸಲಾಗುತ್ತಿದ್ದು, ಪೂರ್ತಿ ಫಿಟ್ ಆದರೆ ರವಿವಾರ ಬೆಂಗಳೂರಿನ ಅಂತಿಮ ಪಂದ್ಯದಲ್ಲಿ ಆಡುವ
ಸಾಧ್ಯತೆ ಇದೆ.