Advertisement

ಕೆಆರ್‌ಎಸ್‌ ನೀರಿನ ಮಟ್ಟ ಕುಸಿತ

03:58 PM May 15, 2019 | Team Udayavani |

ಶ್ರೀರಂಗಪಟ್ಟಣ: ಬಿಸಿಲ ಝಳಕ್ಕೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದೆ. ಈಗಾಗಲೇ ಬೇಸಿಗೆ ಬೆಳೆಗೆ ಹರಿಸಲಾಗುತ್ತಿದ್ದ ನೀರನ್ನು ನಿಲ್ಲಿಸಲಾಗಿದ್ದು, ಅಗತ್ಯವಿರುವಷ್ಟು ಕುಡಿಯುವ ನೀರನ್ನು ಕಾಯ್ದುಕೊಳ್ಳಲಾಗಿದೆ. ಅಣೆಕಟ್ಟೆಯೊಳಗೆ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗುವ ಆತಂಕ ಸೃಷ್ಟಿಯಾಗಿದೆ.

Advertisement

ಕೆಆರ್‌ಎಸ್‌ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಹಾಲಿ ಅಣೆಕಟ್ಟೆಯಲ್ಲಿ 82.10 ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ ನಿತ್ಯ 143 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, 352 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 11.77 ಟಿಎಂಸಿ ಅಡಿ ನೀರು ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟೆಯಲ್ಲಿ 69 ಅಡಿ ನೀರು ಸಂಗ್ರಹವಾಗಿತ್ತು. 360 ಕ್ಯುಸೆಕ್‌ ಒಳಹರಿವಿದ್ದರೆ, 842 ಕ್ಯುಸೆಕ್‌ ನೀರನ್ನು ಹೊರಬಿಡ ಲಾಗುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ 13 ಅಡಿಗಳಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.

ಮುಂಗಾರು ಮಳೆ ನಿರೀಕ್ಷೆಯಲ್ಲಿ ರೈತರು: ಜೂನ್‌ ಅಂತ್ಯದ ವೇಳೆಗೆ ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಗಳಿವೆ. ಈ ಬಾರಿ ಉತ್ತಮ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಶುಭ ಸೂಚನೆ ನೀಡಿದೆ. ನಿರೀಕ್ಷೆಯಂತೆ ಮುಂಗಾರು ಮಳೆ ನಿಗದಿತ ಸಮಯಕ್ಕೆ ಸರಿಯಾಗಿ ಆಗಮಿಸಿದರೆ ನೀರಿನ ಬವಣೆ ನೀಗಲಿದೆ. ಈಗಾಗಲೇ ಮುಂಗಾರು ಪೂರ್ವ ಮಳೆ ನಿರೀಕ್ಷಿತ ಪ್ರಮಾ ಣದಲ್ಲಿ ಬಿದ್ದಿಲ್ಲ. ಕೃಷಿ ಚಟುವಟಿಕೆಗಳೆಲ್ಲವೂ ಸ್ತಬ್ಧವಾಗಿವೆ. ಭೂಮಿ ಯನ್ನು ಹದಗೊಳಿಸುವುದಕ್ಕೆ ರೈತರು ಮುಂಗಾರು ಮಳೆಯನ್ನೇ ಆಶ್ರಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಿತ್ಯ 1100 ಕ್ಯುಸೆಕ್‌ ನೀರು: ಕೆಆರ್‌ಎಸ್‌ ಜಲಾಶಯದಿಂದ ನಿತ್ಯ ಮೈಸೂರಿಗೆ 150 ಕ್ಯುಸೆಕ್‌, ಮಂಡ್ಯ ಜಿಲ್ಲೆಗೆ 200 ಕ್ಯುಸೆಕ್‌, ರಾಮನಗರ ಜಿಲ್ಲೆಗೆ 100 ಕ್ಯುಸೆಕ್‌, ಬೆಂಗಳೂರು ನಗರಕ್ಕೆ ನಿತ್ಯ 650 ಕ್ಯುಸೆಕ್‌ ನೀರಿನ ಅಗತ್ಯವಿದೆ. ಈ ಜಿಲ್ಲೆಗಳಿಗೆ ದಿನಕ್ಕೆ 1100 ಕ್ಯುಸೆಕ್‌ ನೀರಿನ ಅಗತ್ಯವಿದೆ. ಬೆಂಗಳೂರು ಹಾಗೂ ರಾಮನಗರ ಜಿಲ್ಲೆಯ ಜನರಿಗೆ ಅಗತ್ಯವಿರುವ ನೀರನ್ನು ಕಬಿನಿ ಜಲಾಶಯದಿಂದ ಹರಿಸಲಾ ಗುತ್ತಿದೆ. ಸದ್ಯಕ್ಕೆ ಆ ಜಿಲ್ಲೆಗಳ ಕುಡಿಯುವ ನೀರಿಗೆ ಅಭಾವ ಎದುರಾಗಿಲ್ಲ. ಕಬಿನಿ ಜಲಾಶ ಯದಲ್ಲಿ ನೀರಿನ ಕೊರತೆ ಎದುರಾದ ಸಂದರ್ಭದಲ್ಲಿ ಮಾತ್ರ ಕೃಷ್ಣರಾಜ ಸಾಗರ ಜಲಾಶಯದಿಂದ ನೀರನ್ನು ಹರಿಸಲಾಗುವುದು. ಕಬಿನಿಯಲ್ಲಿ ಸಾಕಷ್ಟು ನೀರಿರುವುದರಿಂದ ಹೆಚ್ಚುವರಿ ನೀರು ಹರಿಸುವ ಸನ್ನಿವೇಶ ಉದ್ಭವವಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆವಿಯ ಪ್ರಮಾಣ ಹೆಚ್ಚಳ: ಕಾವೇರಿ ಕಣಿವೆ ಪ್ರದೇಶದ ಜಲಾಶಯ ಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಬಿಸಿಲ ತಾಪಕ್ಕೆ ಆವಿಯಾಗುವ ನೀರಿನ ಪ್ರಮಾಣವೂ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಮಂಡ್ಯದಲ್ಲಿ ರಣಬಿಸಿಲಿಗೆ ಜನರು ತತ್ತರಿಸುತ್ತಿದ್ದಾರೆ. ಈ ಬಾರಿ ಗರಿಷ್ಠ ತಾಪಮಾನ 41 ಡಿಗ್ರಿವರೆಗೂ ತಲುಪಿದೆ. ತಾಪಮಾನ ಈ ಪ್ರಮಾಣದಲ್ಲಿ ಅಧಿಕವಾಗಿರುವುದರಿಂದ ಜಲಾಶಯದಲ್ಲಿ ನೀರಿನ ಆವಿಯ ಪ್ರಮಾಣವೂ ಅಧಿಕವಾಗಿದೆ.

Advertisement

ವಾರಕ್ಕೆರಡು ಬಾರಿ ನೀರು: ಮಂಡ್ಯ ನಗರಕ್ಕೆ ಸದ್ಯ ವಾರಕ್ಕೆ ಎರಡು ದಿನ ಮಾತ್ರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಒಂದು ಗಂಟೆಯಷ್ಟೇ ನೀರನ್ನು ಹರಿಸಲಾಗುತ್ತಿದೆ. ಹಲವು ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿಲ್ಲ. ನೀರಿನ ಅಸಮರ್ಪಕ ಪೂರೈಕೆ ನಡುವೆಯೂ ಏಪ್ರಿಲ್ ತಿಂಗಳಿನಿಂದ ನೀರಿನ ಬಾಕಿ ಶುಲ್ಕವನ್ನು 280 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಕುಡಿಯುವ ನೀರು, ಕೃಷಿ ಚಟುವಟಿಕೆ ಎಲ್ಲವೂ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ. ನಿರೀಕ್ಷೆಯಂತೆ ಮುಂಗಾರು ಆಗಮನವಾದರೆ ನೀರಿನ ಕೊರತೆ ನಿವಾರಣೆಯಾಗಲು ಸಾಧ್ಯ. ಸದ್ಯ ಜಲಾಶಯದಲ್ಲಿರುವ ನೀರು ಬೇಸಿಗೆ ಅವಧಿ ಮುಗಿಯುವವರೆಗೆ ಸಾಲುತ್ತದೆ. ಜೂನ್‌ ನಂತರವೂ ಮಳೆ ಬಾರದಿದ್ದರೆ ಆಗ ಜಲಕ್ಷಾಮ ಎದುರಾಗುವ ಕಠಿಣ ಪರಿಸ್ಥಿತಿ ಎದುರಾಗಲಿದೆ.

● ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next