Advertisement
ಮಂಡ್ಯ: ಜಿಲ್ಲೆಯ ಆರ್ಥಿಕ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ 91.88 ಅಡಿಗೆ ಕುಸಿತ ಕಂಡಿದೆ.
Related Articles
Advertisement
ಹಾಲಿ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿರುವ ಬೇಸಿಗೆ ಬೆಳೆಗಳಿಗೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಅಣೆಕಟ್ಟೆಯಿಂದ 1389 ಕ್ಯುಸೆಕ್ ನೀರನ್ನು ಈಗಾಗಲೇ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 21ರಿಂದ ಮೇ ತಿಂಗಳ 8ರವರೆಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಧಾರ ಮಾಡಿ ಈಗಾಗಲೇ ನಾಲೆಗಳಿಗೆ ನೀರನ್ನು ಹರಿಯಬಿಟ್ಟಿದ್ದಾರೆ.
ಬೇಸಿಗೆ ಬೆಳೆಗಳು: ಬೇಸಿಗೆ ಹಂಗಾಮಿನಲ್ಲಿ ಫೆಬ್ರವರಿ 18ರ ವೇಳೆಗೆ ಜಿಲ್ಲೆಯ 1310 ಹೆಕ್ಟೇರ್‌ನಲ್ಲಿ ಭತ್ತ, 333 ಹೆಕ್ಟೇರ್‌ನಲ್ಲಿ ರಾಗಿ, 128 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 67 ಹೆಕ್ಟೇರ್‌ನಲ್ಲಿ ಉದ್ದು, 67 ಹೆಕ್ಟೇರ್‌ನಲ್ಲಿ ನೆಲಗಡಲೆ, 150 ಹೆಕ್ಟೇರ್‌ನಲ್ಲಿ ಕಬ್ಬು (ತನಿ), 661 ಹೆಕ್ಟರ್‌ನಲ್ಲಿ ಕಬ್ಬು (ಕೂಳೆ) ಸೇರಿ 2717 ಹೆಕ್ಟೇರ್‌ನಲ್ಲಿ ಬೇಸಿಗೆ ಬೆಳೆ ಇದ್ದು ಈ ಬೆಳೆಗಳ ರಕ್ಷಣೆಗೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.
ಕಳೆದ ವರ್ಷ ಮುಂಗಾರು ಪೂರ್ವ ಮಳೆ ಹಾಗೂ ಮುಂಗಾರು ಮಳೆ ಉತ್ತಮವಾಗಿ ಬಿದ್ದಿದ್ದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಮುಂಗಾರು ಆರಂಭದ ಜೂ.17ರ ವೇಳೆಗೆ ಜಲಾಶಯ 100 ಅಡಿ ನೀರು ದಾಖಲಾಗಿತ್ತು. ಆನಂತರೂ ಕೇರಳದ ವಯನಾಡು ಹಾಗೂ ಕೊಡಗಿನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಜುಲೈ ಮಧ್ಯಭಾಗದ ವೇಳೆಗೆ ಜಲಾಶಯ ಭರ್ತಿಯಾಗಿತ್ತು. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ತಮಿಳುನಾಡಿಗೆ ಸುಮಾರು 250 ಟಿಎಂಸಿಗೂ ಅಧಿಕ ನೀರು ಹರಿದು ಕಾವೇರಿ ವಿವಾದ ಭುಗಿಲೇಳುವುದಂತೆ ಮಾಡಿತ್ತು.
ಅಗತ್ಯವಿರುವಷ್ಟು ನೀರು ಸಂಗ್ರಹ: ಬೇಸಿಗೆ ಮುಗಿಯುವುದಕ್ಕೆ ಇನ್ನೂ ಒಂದೂವರೆ ತಿಂಗಳಿದೆ. ಅಲ್ಲಿಯವರೆಗೆ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಅಗತ್ಯವಿರುವಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಬೆಳೆಗಳಿಗೂ ನೀರು ಹರಿಸಲು ಸಾಧ್ಯವಾಗುವಷ್ಟು ನೀರಿರುವುದರಿಂದ ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆಗಳಿಲ್ಲ.
ಮಳೆಯಾಶ್ರಿತ ಪ್ರದೇಶದಲ್ಲಿ ಕೆರೆಗಳಲ್ಲಿ ನೀರು ಖಾಲಿಯಾಗಿರುವುದರಿಂದ ಅಲ್ಲಿ ಕುಡಿಯುವ ನೀರಿಗೆ ಈಗಾಗಲೇ ಹಾಹಾಕಾರವೆದ್ದಿದೆ. ನಾಗಮಂಗಲ ತಾಲೂಕೊಂದರಲ್ಲೇ 59 ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ.