ಶ್ರೀರಂಗಪಟ್ಟಣ: ಕಳೆದ ಎರಡು ವಾರಗಳಿಂದ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ನೀರು ಹರಿದ ಹಿನ್ನೆಲೆ ಜಲಾಶಯದಲ್ಲಿ ಈಗ ಬಹುತೇಕ ಭರ್ತಿಯಾಗಿದೆ. ಮತ್ತೆ ಕಾವೇರಿ ನದಿಯಿಂದ ಯಾವ ಸಂದರ್ಭದಲ್ಲೂ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡವ ಸಾಧ್ಯತೆ ಹೆಚ್ಚಿದೆ.
ಕಳೆದ ವರ್ಷದಂತೆ ಈ ಬಾರಿ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಲಾಶಯದ ಗರಿಷ್ಠ ಪ್ರಮಾಣ ಎಷ್ಟು ಬೇಕೋ ಅದನ್ನು ಸಂಗ್ರಹಣೆ ಮಾಡಿ, ಉಳಿದ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತದೆ.
ತಗ್ಗಿದ ಮಳೆ: ಈವರೆಗೆ ನದಿಯಲ್ಲಿ ಪ್ರವಾಹದಂತೆ ಹರಿದು ಜಮೀನು, ಪ್ರವಾಸಿ ತಾಣ, ದೇವಾಲಯಗಳು ಸ್ವಲ್ಪ ಮಟ್ಟಿಗೆ ಜಲಾವೃತವಾಗಿತ್ತು. ಈಗ ಕೆಆರ್‌ಎಸ್ ಮೇಲ್ಭಾಗದ ಪ್ರದೇಶದಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಪ್ರಸ್ತುತ ಜಲಾಶಯಕ್ಕೆ 9,080 ಕ್ಯೂಸೆಕ್ ನಷ್ಟು ಒಳಹರಿವು ಬರುತ್ತಿದೆ. 3864 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಜಲಾಶಯದ ಈಗಿನ ಮಟ್ಟ 124.50 ಅಡಿ ನೀರಿದ್ದು, ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಆಗಿದೆ. ಒಟ್ಟಾರೆ ಜಲಾಶಯದಲ್ಲಿ 48.838 ಟಿಎಂ.ಸಿ ನೀರು ಸಂಗ್ರಹವಾಗಿದೆ.
ಕೆಆರ್‌ಎಸ್‌ಗೆ ಸಿಎಂ ಬಾಗಿನ : ಗೌರಿ ಹಬ್ಬದ ದಿನದಂದು ಸಿಎಂ ಬಿ.ಎಸ್ .ಯಡಿಯೂರಪ್ಪ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಅರ್ಪಿಸಲಿದ್ದಾರೆ. ಅಂದು ಸಂಪ್ರದಾಯದಂತೆ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಗೌರಿ ಹಬ್ಬದಂದು ಕಾವೇರಿ ಮಾತೆಗೆ ಸಿಎಂ ಬಾಗಿನ ಅರ್ಪಿಸಲಿದ್ದಾರೆ. ಮೊದಲು ಕಾವೇರಿಗೆ ಬಾಗಿನ ಅರ್ಪಿಸಿ ಬಳಿಕ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಈ ಬಾರಿ ಕೊರೊನಾದಿಂದ ಯಾವುದೇ ಆಡಂಬರದ ಕಾರ್ಯಕ್ರಮ ಇರುವುದಿಲ್ಲ ಎಂದರು.
ಈ ಬಾರಿ ಕೊಡಗು ಸೇರಿದಂತೆ ಇತರ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದ್ದು, ಕಾವೇರಿ ಮಾತೆ ಶಕ್ತಿ ತುಂಬಿದ್ದು, ಬಾಗಿನ ನೀಡುವುದು ನಮ್ಮ ಧರ್ಮ. ಮುಂಗಾರು ಬೆಳೆಯಲು ರೈತರಿಗೆ, ಬೆಂಗಳೂರು ಸೇರಿದಂತೆ ಜನರ ಕುಡಿಯುವ ನೀರಿಗೆ ತೊಂದರೆಯಾಗದಿರಲಿ ಎಂದು ಪೂಜೆ ಸಲ್ಲಿಸಲಾಗುವುದು. ಕಳೆದ ಬಾರಿಯು ಬಿ.ಎಸ್ ಯಡಿಯೂರಪ್ಪ ವರು ಬಾಗಿನ ಅರ್ಪಿಸಿದರು. ಬೇಸಿಗೆಯಲ್ಲೂ ನೀರಿಗೆ ನಮಗೆ ತೊಂದರೆಯಾಗಿರಲಿಲ್ಲ ಎಂದರು.