Advertisement

ಕೆಆರ್‌ಎಸ್‌ ಸಂಗೀತ ಕಾರಂಜಿ ಮೇಲ್ದರ್ಜೆಗೆ 

11:17 AM Feb 12, 2023 | Team Udayavani |

ಶ್ರೀರಂಗಪಟ್ಟಣ: ವಿಶ್ವ ಪ್ರಸಿದ್ಧ ಕೆಆರ್‌ಎಸ್‌ ಬೃಂದಾವನದಲ್ಲಿರುವ ಸಂಗೀತ ಕಾರಂಜಿಯನ್ನು ಮೇಲ್ದರ್ಜೆಗೇರಿಸಿ, ಈಗಿರುವ ಕಾರಂಜಿಗಿಂತ ಎರಡು ಪಟ್ಟು ಹೆಚ್ಚಿಸಿ ಕಾಮಗಾರಿ ನಡೆಸಲು ಕಾವೇರಿ ನೀರಾವರಿ ನಿಗಮದ ಮುಂದಾಗಿದೆ.

Advertisement

ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದ್ದ ‘ಸಂಗೀತ ನೃತ್ಯ ಕಾರಂಜಿ ಲೇಸರ್‌ ಪ್ರದರ್ಶನ’ ವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ವಿಶ್ವದ ಗಮನ: ಕೆಆರ್‌ಎಸ್‌ ಜಲಾಶಯ ಅಣೆಕಟ್ಟೆ ನಿರ್ಮಾಣವಾಗಿ ಇದೀಗ 8 ದಶಕಗಳು ಕಳೆದಿದೆ. ರೈತರ ಜೀವನಾಡಿ ಕೆಆರ್‌ಎಸ್‌ ಜಲಾಶಯ ನಿರ್ಮಾಣ ವೇಳೆ ಇಲ್ಲಿನ ಪ್ರವಾಸಿ ತಾಣವಾಗಿ ಗುರುತಿ ಸಲು ಹೆಚ್ಚಿನ ಮಹತ್ವ ನೀಡಿದ ಅಂದಿನ ಕೃಷ್ಣರಾಜ ಒಡೆಯರ್‌ ಹಾಗೂ ಜಲಾಶಯ ವಿನ್ಯಾಸಗೊಳಿಸಿದ ಸರ್‌ಎಂ.ವಿಶ್ವೇಶ್ವರಯ್ಯ ಅವರು ಜಲಾಶಯ ಆರಂಭವಾಗುವ ಸಮಯದಲ್ಲೇ ಅಣೆಕಟ್ಟೆ ಕೆಳಭಾಗವನ್ನು ಜನರ ವೀಕ್ಷಣೆಗೋಸ್ಕರ ಪ್ರಕೃತಿಯನ್ನು ಇನ್ನಷ್ಟು ಸುಂದರಮಯವಾಗಿ ಕಾಣಲು ಬೃಂದಾವನ ನಿರ್ಮಾಣ ಮಾಡಲಾಗಿತ್ತು. ಈ ಬೃಂದಾವನದಲ್ಲಿ ಸಂಗೀತ ಕಾರಂಜಿ ನಿರ್ಮಿಸಿದ್ದು, ಇದೀಗ ವಿಶ್ವ ಪ್ರಸಿದ್ಧಿ ಪಡೆದಿದೆ.

ಪ್ರತಿ ದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿ, ವೀಕ್ಷಣೆ ಮಾಡುವುದು ವಿಶ್ವದ ಗಮನ ಸೆಳೆಯಲು ಕಾರಣವಾಗಿತ್ತು. ಕೆಆರ್‌ಎಸ್‌ ಬೃಂದಾವನ ನಿರ್ಮಾಣದ ಜೊತೆ ಅಣೆಕಟ್ಟೆ ಉತ್ತರ ಭಾಗದಲ್ಲಿ ಸಂಗೀತ ಕಾರಂಜಿಯನ್ನು ನಿರ್ಮಿಸಿದ್ದು, ಕೆಆರ್‌ಎಸ್‌ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಈ ಕಾರಂಜಿ ವೀಕ್ಷಣೆ ಮಾಡದೆ ಹೊರ ಹೋಗುತ್ತಿರಲಿಲ್ಲ. ಬರುವ ಪ್ರವಾಸಿಗರಿಗೆ ಈ ಸಂಗೀತ ನೃತ್ಯ ಕಾರಂಜಿಯನ್ನು ಒಂದು ಬಾರಿ ವೀಕ್ಷಣೆ ಮಾಡಿ, ಅದರಲ್ಲಿನ ಬಣ್ಣ ಬಣ್ಣದ ದೀಪಲಂಕಾರದೊಂದಿಗೆ ಚಿಮ್ಮುತ್ತಿದ್ದ ನೀರಿನ ಸಂಗೀತದೊಂದಿಗೆ ವೀಕ್ಷಣೆ ಮಾಡಿ, ಮನ ಉಲ್ಲಾಸಗೊಳಿಸುವಂತಿದ್ದ ಈ ಕಾರಂಜಿ ಪ್ರತಿಯೊಬ್ಬ ಪ್ರವಾಸಿಗರನ್ನು ತನ್ನ ಕಡೆ ಕೈ ಬೀಸಿ ಕರೆಯುತ್ತಿತ್ತು. ವಿದ್ಯುತ್‌ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದಂತ ಕಾರಂಜಿ ಎಲ್ಲರ ಕಣ್ಮನ ಸೆಳೆಯುತ್ತಿತ್ತು.

ಮೇಲ್ದರ್ಜೆಗೆರಿಸಲು ಕಾಮಗಾರಿ: ನೃತ್ಯ ಕಾರಂಜಿ ಇದೀಗ ಅದರ ಮಹತ್ವವನ್ನು ಕಳೆದುಕೊಂಡಿದ್ದು, ಪ್ರತಿ ಬಾರಿ ದುರಸ್ತಿ ಕಾರ್ಯಗಳು ನಡೆಯುತ್ತಿತ್ತು. ಆದರೆ, ನೀರಾವರಿ ನಿಗಮ ಇದೀಗ ನೃತ್ಯ ಕಾರಂಜಿಯನ್ನು ಇನ್ನಷ್ಟು ಹೆಚ್ಚಿನ ತಾಂತ್ರಿಕತೆ ಅಳವಡಿಸಿ, ಕಣ್ಮನ ಸೆಳೆಯುವ ನೃತ್ಯ ಕಾರಂಜಿಯ ವಿವಿಧವಾಗಿ ವಿನ್ಯಾಸ ದಿಂದ ಕಾಣುವಂತೆ ಮಾಡಿ, ಈಗಿರುವ ಕಾರಂಜಿಗಿಂತ ಎರಡು ಪಟ್ಟು ವಿಸ್ತಾರಗೊಳಿಸಲು ಕಾಮಗಾರಿ ನಡೆಸಲಾಗುತ್ತಿದೆ.

Advertisement

ಪ್ರವಾಸಿಗರಿಗೂ ಯಾವುದೇ ತೊಂದರೆ ಯಾಗದಂತೆ 2 ಕೋಟಿ ರೂ. ವೆಚ್ಚದಲ್ಲಿ ಹೊಸ ವಿನ್ಯಾಸದೊಂದಿಗೆ ಈಗಿರುವ ಹಳೆಯ ಕಾರಂಜಿಯ ಪರಿಕರಗಳನ್ನು ತೆಗೆದು, ಹೊಸದಾಗಿ ನ್ಯೂನ್ಯತೆ ಇರುವ ಪರಿಕರಗಳನ್ನು ಅಳವಡಿಸಿ ಕಾಮಗಾರಿ ನಡೆಸಲು ಟೆಂಡರ್‌ ಪ್ರಕ್ರಿಯೆ ನಡೆದಿದೆ. ಹೆಸರಾಂತ ಬಾಂಬೆ ಕಂಪನಿ ಈ ಕಾಮಗಾರಿ ನಡೆಸಲು 2 ತಿಂಗಳ ಕಾಮಗಾರಿಯನ್ನು ನಡೆಸಲು ನೀರಾವರಿ ನಿಗಮ ಮುಂದಾಗಿದೆ.

ಪ್ರವಾಸಿಗರಿಗೆ ಉದ್ಯಾನವನ ವೀಕ್ಷಣೆಗೆ ಮಾತ್ರ ಅವಕಾಶವಿದ್ದು, ನೃತ್ಯ ಕಾರಂಜಿ ಕಾಮಗಾರಿ ನಡೆಯು ತ್ತಿರುವುದರಿಂದ ಆ ಪ್ರದೇಶಕ್ಕೆ ನಿಷೇಧ ಹಾಕಲಾಗಿದೆ.

ತಾತ್ಕಾಲಿಕವಾಗಿ ಕಾರಂಜಿಗೆ ನಿಷೇಧ: ಫೆ.15ರಿಂದ ನೃತ್ಯ ಕಾರಂಜಿಯ ಕಾಮಗಾರಿ ನಡೆಯುವುದರಿಂದ ಈಗಾಗಲೇ ಕಾವೇರಿ ನೀರಾವರಿ ನಿಗಮದ ವತಿ ಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ಪ್ರತಿ ದಿನ ಬೃಂದಾವನ ವೀಕ್ಷಣೆಗೆ ಅವಕಾಶವಿದ್ದರೂ ಬೃಂದಾವ ನದ ಉತ್ತರ ಭಾಗದಲ್ಲಿದ್ದ ನೃತ್ಯ ಕಾರಂಜಿಗೆ ಪ್ರವೇಶವನ್ನು ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಫೆ.15ರಿಂದ ವಿಶ್ವ ಪ್ರಸಿದ್ಧ ನೃತ್ಯ ಕಾರಂಜಿ ಪ್ರದರ್ಶನ ಬಂದ್‌ ಮಾಡುತ್ತಿದ್ದು, ಕೃಷ್ಣರಾಜಸಾಗರದ ಕಾರ್ಯ ಪಾಲಕ ಎಂಜಿನಿಯರ್‌ ಈ ಮಾಹಿತಿ ನೀಡಿದ್ದಾರೆ.

ಕೃಷ್ಣರಾಜಸಾಗರ ಉತ್ತರ ಬೃದಾವನದಲ್ಲಿರುವ ನೃತ್ಯ ಕಾರಂಜಿಯ ನವೀಕರಣ ಕಾಮಗಾರಿಯ ನಡೆಯಲಿದೆ. ಹೀಗಾಗಿ 2023 ಫೆ.15ರಿಂದ ಮುಂದಿನ ಆದೇಶದವರೆಗೆ ನೃತ್ಯ ಕಾರಂಜಿ ಪ್ರದರ್ಶನ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೃತ್ಯ ಕಾರಂಜಿ ಕಾಮಗಾರಿ ಹಿನ್ನಲೆಯಲ್ಲಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಆ ಭಾಗವನ್ನು ಬಂದ್‌ ಮಾಡಿದ್ದರಿಂದ ಬೇಸರ ಉಂಟಾಗುವುದಂತು ಸತ್ಯ. ಇದರಿಂದ ತ್ವರಿತವಾಗಿ ಕಾಮಗಾರಿ ನಡೆಸಿ, ಪ್ರವಾಸಿಗರಿಗೆ ಮತ್ತೆ ನೃತ್ಯಕಾರಂಜಿಯ ವೀಕ್ಷಣೆ ಅನುಮಾಡಲು ಪ್ರವಾಸಿಗರ ಒತ್ತಾಯವಾಗಿದೆ.

ನೃತ್ಯ ಕಾರಂಜಿಗೆ ಹೊಸ ವಿನ್ಯಾಸ : ಕೆಆರ್‌ಎಸ್‌ ಜಲಾಶಯ ನಿರ್ಮಾಣ ಮಾಡುವಾಗಲೇ ಕಾರಂಜಿಯ ಕಾಮಗಾರಿ ನಡೆದಿತ್ತು. ನಂತರ ಕೆಟ್ಟು ನಿಂತ ವೇಳೆಯಲ್ಲಿ ದುರಸ್ತಿ ಕಾರ್ಯ ಮಾಡಲಾಗುತ್ತಿತ್ತು. ನಂತರ ಕಳೆದ 20 ವರ್ಷಗಳ ಹಿಂದೆ ಬೃಂದಾವನ ನೃತ್ಯ ಕಾರಂಜಿಯ ದುರಸ್ತಿ ಕಾರ್ಯ ನಡೆದಿತ್ತು. ಆದರೆ, ಅಲ್ಲಿಂದಲೂ ಕೆಲವು ತಾಂತ್ರಿಕ ದೋಷಗಳು ಕಂಡು ಬರುತ್ತಿತ್ತು. ಇದರಿಂದ ವೀಕ್ಷಣೆಗೆ ಬರುವ ಪ್ರವಾಸಿಗರಿಗೂ ಕಸಿವಿಸಿಯಾಗುತ್ತಿತ್ತು. ಈ ಬಗ್ಗೆ ಸರ್ಕಾರಕ್ಕೆ ವರದಿ ಮೂಲಕ ಮನವಿ ಮಾಡಲಾಗಿತ್ತು. ಇದೀಗ ಎರಡು ಕೋಟಿ ಹಣ ಬಿಡುಗಡೆ ಯಾಗಿ ಟೆಂಡರ್‌ ಪ್ರಕ್ರಿಯೆ ನಡೆದು, ಹಳೆಯ ಪರಿಕರಗಳನ್ನು ತೆಗೆದು ಹೊಸ ವಿನ್ಯಾಸದೊಂದಿಗೆ ಹೊಸದಾಗಿ ನೃತ್ಯ ಕಾರಂಜಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಪ್ರವಾಸಿಗರಿಗೆ ನೃತ್ಯ ಕಾರಂಜಿಯ ಹೊಸ ವಿನ್ಯಾಸದ ವೀಕ್ಷಣೆಗೆ ತರುವ ಕೆಲಸ ಮಾಡುತ್ತೇವೆ ಎಂದು ಕೆಆರ್‌ಎಸ್‌ ಬೃಂದಾವನ ಕಾರ್ಯಪಾಲಕ ಅಭಿಯಂತರ ಮಹಮದ್‌ ಅಬು ತಿಳಿಸಿದ್ದಾರೆ.

ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next