ಮಂಡ್ಯ: ನೀರಿಲ್ಲದೆ ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಶುಕ್ರವಾರ (ಜೂ.28) ಬೆಳಗ್ಗೆ 11 ಗಂಟೆಯವರೆಗೆ ಕರ್ನಾಟಕ ರಾಜ್ಯ ರೈತ ಸಂಘ ಸರ್ಕಾರಕ್ಕೆ ಗಡುವು ನೀಡಿದೆ. ನಿಗದಿತ ಗಡುವಿನೊಳಗೆ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಪ್ರಕಟಿಸದಿದ್ದರೆ ಸಾವಿರಾರು ರೈತರೊಂದಿಗೆ ಕೆಆರ್‌ಎಸ್ ಮುತ್ತಿಗೆ ಹಾಕಲು ನಿರ್ಧರಿಸಿದೆ.
ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಕಳೆದೊಂದು ವಾರದಿಂದ ಕಾವೇರಿ ನೀರಾವರಿ ನಿಗಮದ ಎದುರು ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತಸಂಘದ ಕಾರ್ಯಕರ್ತರು ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನೀರು ಹರಿಸುವ ಬಗ್ಗೆ ಸ್ಪಷ್ಟ ತೀರ್ಮಾನ ಪ್ರಕಟಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಗೆ ಉಗ್ರ ಸ್ವರೂಪ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ. ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿರುವುದರಿಂದ ಅವರ ಹೊಟ್ಟೆಗೆ ಬೆಂಕಿ ಬಿದ್ದಿದೆ. ನೀರು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೇಲೆ ಹಾಕಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಬೇಡ. ಪ್ರಾಧಿಕಾರಕ್ಕೆ ಇಲ್ಲಿನ ವಸ್ತುಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ನೀರು ಬಿಡುಗಡೆಗೆ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
2 ಟಿಎಂಸಿ ನೀರು ಹರಿಸಿ ಸಾಕು: ಕೆಆರ್‌ಎಸ್ ಜಲಾಶಯದಲ್ಲಿ ಹತ್ತು ಟಿಎಂಸಿ ನೀರಿದೆ. ಬೆಳೆಗಳಿಗೆ ಅವಶ್ಯಕತೆ ಇರುವುದು ಕೇವಲ ಎರಡು ಟಿಎಂಸಿ ಮಾತ್ರ. ಅಗತ್ಯವಿರುವಷ್ಟು ನೀರು ಬಿಡುಗಡೆ ಮಾಡಿದರೆ ರೈತರನ್ನು ಬದುಕನ್ನು ರಕ್ಷಣೆ ಮಾಡಿದಂತಾಗುವುದು. ಅದಕ್ಕಾಗಿ ರಾಜ್ಯಸರ್ಕಾರ ಶೀಘ್ರ ತೀರ್ಮಾನ ಕೈಗೊಂಡು ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿ ನೀರನ್ನು ರೈತರೇ ಬಿಡುಗಡೆ ಮಾಡಿಕೊಳ್ಳುವುದಕ್ಕೆ ಮುಂದಾಗಬೇಕಾಗುತ್ತದೆ. ಅದರಿಂದ ಉಂಟಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಜವಾಬ್ದಾರಿಯಾಗಲಿದೆ ಎಂದು ಎಚ್ಚರಿಸಿದರು.
ಸಿಎಂ ದ್ವೇಷದ ರಾಜಕಾರಣ: ನಾಲೆಗಳಿಗೆ ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪುತ್ರನ ಚುನಾವಣಾ ಸೋಲನ್ನೇ ಮುಂದಿಟ್ಟುಕೊಂಡು ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಹಠ ಸಾಧಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನೀರಿಲ್ಲದೆ ಬೆಳೆಗಳು ಒಣಗುವ ಹಂತದಲ್ಲಿದ್ದರೂ ನೀರು ಹರಿಸದೆ ರೈತರ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ. ಈ ಕೂಡಲೇ ನಾಲೆಗಳಿಗೆ ನೀರೊದಗಿಸುವ ನಿರ್ಧಾರ ಪ್ರಕಟಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ರೈತ ಮುಖಂಡ ಶಂಭೂನಹಳ್ಳಿ ಸುರೇಶ್ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಎ.ಎಲ್.ಕೆಂಪೂಗೌಡ, ದಸಂಸ ಮುಖಂಡ ಗುರುಪ್ರಸಾದ್ ಕೆರಗೊಡು, ಜಿ.ಎಸ್.ಲಿಂಗಪ್ಪಾಜಿ, ಬಿ.ಬೊಮ್ಮೇಗೌಡ, ಶೆಟ್ಟಹಳ್ಳಿ ರವಿಕುಮಾರ್, ಪಿ.ಕೆ.ನಾಗಣ್ಣ, ಸಿದ್ದೇಗೌಡ, ಲತಾ ಶಂಕರ್, ಶಿವಾರ ಚಂದ್ರು, ಪಿ.ನಾಗರಾಜು, ಜಿ.ಎ.ಶಂಕರ್, ಪಾಂಡು, ಎಸ್.ಸಿ.ಮರಿಚನ್ನೇಗೌಡ, ಸಿದ್ದೇಗೌಡ ಇತರರಿದ್ದರು.