Advertisement

ಕೃತಿ ಈಗ ಬಿಝಿಯಂತೆ!

07:00 AM Apr 08, 2018 | Team Udayavani |

ಮಾಸ್ತಿಗುಡಿ ಚಿತ್ರದ ನಂತರ ಕೃತಿ ಖರಬಂದ ಅಭಿನಯದ ಯಾವೊಂದು ಕನ್ನಡ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಒಂದು ವರ್ಷದ ನಂತರ ಆಕೆಯ ದಳಪತಿ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇಷ್ಟು ದಿನ ಕೃತಿ ಯಾಕೆ ಕನ್ನಡದಲ್ಲಿ ನಟಿಸಲಿಲ್ಲ ಎಂಬ ಪ್ರಶ್ನೆ ಬರುವುದು ಸಹಜ. ಆಕೆಗೆ ಅವಕಾಶಗಳಿರಲಿಲ್ಲವಾ ಎಂಬ ಸಂಶಯವೂ ಬರಬಹುದು. ಅವಕಾಶಗಳೇನೋ ಇದ್ದವಂತೆ. ಆದರೆ, ಬೇರೆ ಭಾಷೆಗಳಲ್ಲಿ ಬಿಝಿಯಾಗಿದ್ದ ಕಾರಣ ಆಕೆ ಕನ್ನಡದಲ್ಲಿ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ.

Advertisement

ಕೃತಿ ಅದೆಷ್ಟು ಬಿಝಿ ಎಂದರೆ, ಕಳೆದ ಒಂದು ತಿಂಗಳಲ್ಲಿ 17 ಫ್ಲೈಟು ಬದಲಾಯಿಸಿದ್ದಾರಂತೆ. ಬೆಂಗಳೂರು, ಮುಂಬೆ, ದೆಹಲಿ, ಹೈದರಾಬಾದ್‌, ಅಬುದಾಭಿ, ಲಕ್ನೋ, ಇಂದೋರ್‌ ಹೀಗೆ ಸತತವಾಗಿ ಊರುಗಳನ್ನು ಸುತ್ತುತ್ತಲೇ ಇದ್ದಾರಂತೆ, ಶೂಟಿಂಗ್‌ನಲ್ಲಿ ಭಾಗವಹಿಸುತ್ತಲೇ ಇದ್ದಾರಂತೆ.

ಬಹುಶಃ ರಾಝ್ – ರೀಬೂಟ್‌ ಎಂಬ ಹಿಂದಿ ಚಿತ್ರದಲ್ಲಿ ಅವರು ಕಾಣಿಸಿಕೊಂಡಾಗ, ಬಾಲಿವುಡ್‌ನ‌ಲ್ಲಿ ಅವರು ಅಷ್ಟು ದೂರ ಸಾಗಿ ಬರಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಅದಾಗಿ ಎರಡು ವರ್ಷಗಳಲ್ಲಿ ಅವರು ಐದು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಮ್ಲಾ ಪಗ್ಲಾ ದಿವಾನಾ – ಫಿರ್‌ ಸೇ ಚಿತ್ರದಲ್ಲಿ ಧಮೇಂದ್ರ, ಸನ್ನಿ ಡಿಯೋಲ್‌, ಬಾಬ್ಬಿ ಡಿಯೋಲ್‌ ಜೊತೆಗೆ ಕಾಣಿಸಿಕೊಂಡಿದ್ದಾರೆ. “ನಮ್ಮದು ಫಿಲ್ಮೀ ಕುಟುಂಬವಲ್ಲ. ಮುಂದೊಂದು ದಿನ ನಾನು ನಟಿಯಾಗಬಹುದು, ಧರ್ಮೇಂದ್ರ ಮತ್ತು ಸನ್ನಿ ಡಿಯೋಲ್‌ ಅವರನ್ನು ಭೇಟಿ ಮಾಡಬಹುದು ಎಂದು ಕನಸು ಸಹ ಕಂಡಿರಲಿಲ್ಲ. ಈಗ ಅವರ ಜೊತೆಯಲ್ಲಿ ನಟಿಸುವುದಕ್ಕೆ ಸಾಧ್ಯವಾಗಿದೆ’ ಎನ್ನುತ್ತಾರೆ ಕೃತಿ ಖರಬಂದ.

ಇನ್ನು ರಾಝ್ – ರೀಬೂಟ್‌ ಚಿತ್ರದಲ್ಲಿ ಕೃತಿ ಬಹಳ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದರ ಕುರಿತು ಕೇಳಿದರೆ, “ಒಬ್ಬ ನಟಿಯಾಗಿ ಒಂದೇ ತರಹದ ಪಾತ್ರಗಳನ್ನು ಮಾಡಿಮಾಡಿ ನನಗೆ ಬೋರ್‌ ಆಗಿತ್ತು. ಕನ್ನಡದಲ್ಲಿ ಮಾಡಿದ ಪಾತ್ರಗಳೆಲ್ಲಾ ರೆಗ್ಯುಲರ್‌, ಪಕ್ಕದ್ಮನೆ ಹುಡುಗಿಯ ಪಾತ್ರಗಳಾಗಿದ್ದವು. ನನಗೂ ಒಂದು ಬದಲಾವಣೆ ಬೇಕಿತ್ತು. ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವ ಒಂದು ಅವಕಾಶ ನನಗೆ ಹಿಂದಿಯಲ್ಲಿ ಸಿಕ್ಕಿತು. ಜೊತೆಗೆ ಆ ಚಿತ್ರದಕ್ಕೆ ಅದು ಆವಶ್ಯಕತೆ ಸಹ ಇತ್ತು. ಸುಮ್ಮನೆ ಆ ತರಹ ಗ್ಲಾಮರಸ್‌ ಆಗಿ ಕಾಣಿಸಿಕೋ ಎಂದರೆ, ಅದರ ಆವಶ್ಯಕತೆ ಇಲ್ಲ ಎಂದರೆ ಎಷ್ಟು ದುಡ್ಡು ಕೊಟ್ಟರೂ ಮಾಡುವುದಿಲ್ಲ. ಆ ಚಿತ್ರದ ನಂತರ ನನಗೆ ಯಾರೂ ಆ ತರಹ ಗ್ಲಾಮರಸ್‌ ಪಾತ್ರ ಆಫ‌ರ್‌ ಮಾಡಿಲ್ಲ’ ಎನ್ನುತ್ತಾರೆ ಕೃತಿ.

ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಬಂದ ನಂತರ ಕೃತಿ ಎಷ್ಟು ಕಾಸ್ಟ್‌ಲಿಯಾಗಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಅವರನ್ನು ಕೇಳಿದರೆ, “ನನಗೆ ಎಷ್ಟು ಅರ್ಹತೆ ಇದೆಯೋ, ಅದನ್ನು ಕೇಳಿ ಪಡೆಯುತ್ತೇನೆ. ನಾನೊಬ್ಬ ವೃತ್ತಿಪರ ನಟಿ. ನನ್ನಿಂದ ಇದುವರೆಗೂ ಯಾರಿಗೂ, ಯಾವುದೇ ಸಮಸ್ಯೆ ಆಗುವುದಿಲ್ಲ. ಸಮಸ್ಯೆ ಆಗಿದ್ದರೆ ಇಷ್ಟು ವರ್ಷ ನಟನೆ ಮಾಡುವುದಕ್ಕೆ ಆಗುತ್ತಿರಲಿಲ್ಲ. ಬಾಲಿವುಡ್‌ನ‌ಲ್ಲಿ ಆರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ ನನಗೆ ಎಷ್ಟು ಸಿಗಬೇಕೋ, ಅಷ್ಟನ್ನು ಕೇಳುತ್ತೀನಿ. ಒಳ್ಳೆಯ ಕಥೆ ಮತ್ತು ಪಾತ್ರವಿದ್ದು, ಬಜೆಟ್‌ ಸಮಸ್ಯೆ ಇದ್ದರೆ, ಸಂಭಾವನೆ ಕಡಿಮೆ ಮಾಡಿಕೊಳ್ಳುವುದಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ. ಅದು ಬಿಟ್ಟು, ಈ ಚಿತ್ರ ಒಪ್ಪಿಕೊಂಡರೆ ನಿಮಗೆ ಬ್ರೇಕ್‌ ಸಿಗುತ್ತೆ ಎನ್ನುವ ತರಹ ಯಾರಾದರೂ ಮಾಡಿದರೆ, ಖಂಡಿತ ಆ ಚಿತ್ರವನ್ನು ನಾನು ಒಪ್ಪುವುದಿಲ್ಲ’ ಎಂದು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ ಕೃತಿ.

Advertisement

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ದಳಪತಿ ನಂತರ ದರ್ಶನ್‌ ಅಭಿನಯದ ಯಜಮಾನ ಚಿತ್ರದಲ್ಲಿ ನಟಿಸಬೇಕಿತ್ತು ಕೃತಿ. ಡೇಟ್‌ ಸಮಸ್ಯೆಯಿಂದ ಆ ಚಿತ್ರ ಕೈತಪ್ಪಿ ಹೋಯಿತಂತೆ. ಮುಂದೊಂದು ದಿನ ದರ್ಶನ್‌, ಸುದೀಪ್‌, ರಕ್ಷಿತ್‌ ಮುಂತಾದವರ ಜೊತೆಗೆ ನಟಿಸಬೇಕು ಎಂಬ ಆಸೆ ಇಟ್ಟುಕೊಂಡಿರುವ ಕೃತಿ, ದಳಪತಿ ನಂತರ ಯಾವ ಕನ್ನಡ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next