Advertisement

ಕೃಷ್ಣೆ ಸ್ನಾನಘಟ್ಟ ಕಾಮಗಾರಿ ಅರೆ ಬರೆ!

11:18 AM Jun 25, 2018 | |

„ಸಿದ್ಧಯ್ಯ ಕುಕನೂರ
ರಾಯಚೂರು: 12 ವರ್ಷಕ್ಕೊಮ್ಮೆ ಬರುವ ಪುಷ್ಕರ ಪುಣ್ಯಸ್ನಾನಕ್ಕಾಗಿ ಕೃಷ್ಣಾ ನದಿಗೆ ನಿರ್ಮಿಸಲು ಮುಂದಾಗಿದ್ದ ಸ್ನಾನಘಟ್ಟ ಕಾಮಗಾರಿ ಅರೆಬರೆಯಾಗಿದ್ದು, ಎರಡು ವರ್ಷ ಕಳೆದರೂ ಅಂತಿಮ ಸ್ವರೂಪ ನೀಡಲಾಗಿಲ್ಲ.

Advertisement

2015ರಲ್ಲಿ ಕೃಷ್ಣಾ ನದಿಗೆ ಪುಷ್ಕರ ಪುಣ್ಯಸ್ನಾನ ಬಂದಿತ್ತು. ಆಗ, ಕರ್ನಾಟಕ ಮತ್ತು ಆಂಧ್ರ, ತೆಲಂಗಾಣ ಸರ್ಕಾರಗಳು ಕೃಷ್ಣಾ ನದಿಗೆ ಸುಸಜ್ಜಿತ ಸ್ನಾನಘಟ್ಟ ನಿರ್ಮಿಸಲು ಮುಂದಾಗಿದ್ದವು. ಸಮೀಪದ ಕೃಷ್ಣಾ ಬಳಿ ಸುಸಜ್ಜಿತ ಸ್ನಾನಘಟ್ಟ ನಿರ್ಮಾಣವಾದರೆ ಕರ್ನಾಟಕ ಭಾಗದಲ್ಲಿರುವ ಶಕ್ತಿನಗರ ಸಮೀಪದ ಸೇತುವೆ ಬಳಿಯೂ ಜಿಲ್ಲಾಡಳಿತ ಸ್ನಾನಘಟ್ಟ ನಿರ್ಮಿಸಲು ಮುಂದಾಗಿತ್ತು. ಅದಕ್ಕಾಗಿ ರಾಜ್ಯ ಸರ್ಕಾರ 1.43 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಆದರೆ, ಆಗ ಸಮಯಾವಕಾಶದ ಕೊರತೆಯಿದ್ದ ಕಾರಣ ತಾತ್ಕಾಲಿಕವಾಗಿ ತರಾತುರಿಯಲ್ಲಿ ಕೆಲಸ ನಿರ್ವಹಿಸಲಾಗಿತ್ತು. ಅದಾಗಿ ಎರಡು ವರ್ಷ ಕಳೆದರೂ ಶಾಶ್ವತ ಕಾಮಗಾರಿ ಮಾತ್ರ ಇನ್ನೂ ಆಗಿಲ್ಲ.

ಪುಷ್ಕರ ಪುಣ್ಯಸ್ನಾನಕ್ಕೆ ಇನ್ನು 12 ದಿನ ಬಾಕಿ ಇದ್ದಾಗ ಕ್ಯಾಶುಟೆಕ್‌ ಸಂಸ್ಥೆಗೆ ಕಾಮಗಾರಿ ವಹಿಸಲಾಗಿತ್ತು. ನಿತ್ಯ ಏನಿಲ್ಲವೆಂದರೂ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆಯಿತ್ತು. ಹೀಗಾಗಿ ತಕ್ಷಣಕ್ಕೆ ಮುಖ್ಯವಾಗಿ ಬೇಕಾದ ಸ್ನಾನಘಟ್ಟ, ತಾತ್ಕಾಲಿಕ ಸ್ನಾನಗೃಹ, ಮಹಿಳೆಯರಿಗೆ ಶೌಚಾಲಯ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಅದಕ್ಕೂ ಜಿಟಿಜಿಟಿ ಮಳೆ ಅಡ್ಡಿಯಾದ ಕಾರಣ ಮಾಡಿದ ಕೆಲಸವೂ ಅರೆಬರೆಯಾಗಿತ್ತು.

ಸ್ನಾನಕ್ಕೆ ತಾತ್ಕಾಲಿಕ ಟೆಂಟ್‌ ಗಳನ್ನು ನಿರ್ಮಿಸಲಾಗಿತ್ತು. ಶೌಚಕ್ಕೆ ಮಹಿಳೆಯರಿಗಷ್ಟೇ ತಾತ್ಕಾಲಿಕ ವ್ಯವಸ್ಥೆ
ಮಾಡಿದ್ದರೆ, ಪುರುಷರು ಬಯಲನ್ನೇ ಆಶ್ರಯಿಸಿದ್ದರು. ಅದಾಗಿ ಎರಡು ವರ್ಷ ಕಳೆದರೂ ಇನ್ನೂ ಶಾಶ್ವತ ಕಾಮಗಾರಿ
ನಿರ್ವಹಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಸಾಕಷ್ಟು ಕೆಲಸ ಬಾಕಿ: ಸ್ನಾನಘಟ್ಟದಲ್ಲಿ ಕೇವಲ ಕಟ್ಟೆ ಮಾತ್ರವಲ್ಲದೇ, ಸ್ನಾನದ ಕೋಣೆಗಳು, ಶೌಚಾಲಯಗಳು, ತಂಗುದಾಣ, ವಿದ್ಯುತ್‌ ದೀಪಗಳು, ನೀರಿನ ವ್ಯವಸ್ಥೆ ಸೇರಿ ಪ್ರಮುಖ ಕಾಮಗಾರಿಗಳನ್ನು ನಿರ್ವಹಿಸಬೇಕು. ಇಲ್ಲಿ ಅದ್ಯಾವುದು ಇಲ್ಲ. ಆಗ ನಿರ್ಮಿಸಿದ್ದ ತಾತ್ಕಾಲಿಕ ತಂಗುದಾಣವನ್ನು ಕೂಡ ತೆರವುಗೊಳಿಸಿದ್ದಾರೆ. ಅನೈತಿಕ ಚಟುವಟಿಕೆ ನಡೆಯುತ್ತವೆ ಎಂಬ ಕಾರಣವೊಡ್ಡಿ ಟಿನ್‌ ಗಳನ್ನು ತೆಗೆದಿರಿಸಲಾಗಿದೆ. ಇದರಿಂದ ಅಮಾವಾಸ್ಯೆ, ಸಂಕ್ರಾಂತಿ ಸೇರಿ ವಿವಿಧ ವಿಶೇಷ ದಿನಗಳಂದು ನದಿಗೆ ಬರುವ ಜನರಿಗೆ ಉಪಯೋಗವಿಲ್ಲದಂತಾಗಿದೆ. ಶ್ರಾವಣ ಮಾಸ ಸಮೀಪಿಸುತ್ತಿದ್ದು, ಮತ್ತೆ ನದಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಇನ್ನಾದರೂ ಜಿಲ್ಲಾಡಳಿತ ಶಾಶ್ವತ ಕಾಮಗಾರಿಗೆ ಇಚ್ಛಾಶಕ್ತಿ ತೋರಲಿ ಎಂಬುದು ಸ್ಥಳೀಯರ ಒತ್ತಾಯ. 

Advertisement

ಕೃಷ್ಣಾ ನದಿ ಪಾತ್ರದಲ್ಲಿ ಸ್ನಾನಘಟ್ಟ ನಿರ್ಮಿಸಲು ಸರ್ಕಾರ 1.43 ಕೋಟಿ ರೂ. ಮಂಜೂರು ಮಾಡಿತ್ತು. ಅದರಲ್ಲಿ
ಆರಂಭಿಕ ಹಂತವಾಗಿ ಒಂದು ಕೋಟಿ ಮಾತ್ರ ನೀಡಿದ್ದು, ಬಾಕಿ 43 ಲಕ್ಷ ರೂ. ಈಗ ಬಂದಿದೆ. ಇನ್ನೂ ಸಾಕಷ್ಟು ಕೆಲಸ
ಬಾಕಿಯಿದ್ದು, ಶೀಘ್ರದಲ್ಲೇ ಆರಂಭಿಸಲಾಗುವುದು. 

ಶರಣಬಸಪ್ಪ ಪಟ್ಟೇದ,ಕ್ಯಾಶುಟೆಕ್‌ ಅಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next