ವಿದ್ಯಾನಗರ: ಕನ್ನಡದೋಜ ಪೆರಡಾಲ ಕೃಷ್ಣಯ್ಯನವರು ನಡೆದಾಡುವ ವಿಶ್ವವಿದ್ಯಾಲಯವಾಗಿದ್ದರು. ಕಾಸರಗೋಡಿನ ಪಂಡಿತ ಪರಂಪರೆಯ ಕಲಶಪ್ರಾಯ ವ್ಯಕ್ತಿತ್ವಗಳಲ್ಲಿ ಅವರು ಓರ್ವರು. ತನ್ನ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಊರಿನವರನ್ನೆಲ್ಲ ತನ್ನ ಪಾಂಡಿತ್ಯ ಶಕ್ತಿಯಿಂದ ಆಕರ್ಷಿಸುವ ಗುಣ ಕೃಷ್ಣಯ್ಯ ಅವರಿಗಿತ್ತು ಎಂದು ಹಿರಿಯ ಯಕ್ಷಗಾನ ಅರ್ಥಧಾರಿ ಪೆರಡಾಲ ಕೃಷ್ಣಯ್ಯ ಅವರ ಶಿಷ್ಯ ಬೆಳ್ಳಿಗೆ ನಾರಾಯಣ ಮಣಿಯಾಣಿ ಅಭಿಪ್ರಾಯಪಟ್ಟರು.
ಕನ್ನಡದೋಜ ಪೆರಡಾಲ ಕೃಷ್ಣಯ್ಯ ಅವರ 125ನೇ ಜನ್ಮ ವರ್ಷಾಚರಣೆಯಂಗವಾಗಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗವು ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಕೃಷ್ಣಯ್ಯರ ಸಂಸ್ಮರಣೆ ಮಾಡಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಅರವಿಂದ್ ಕೃಷ್ಣನ್ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಪ್ರಾಧ್ಯಾಪಕ ಡಾ| ವರದರಾಜ ಚಂದ್ರಗಿರಿ ಅವರು ಪೆರಡಾಲ ಕೃಷ್ಣಯ್ಯ ಅವರ ವ್ಯಕ್ತಿತ್ವ ಹಾಗೂ ಪಾಂಡಿತ್ಯವನ್ನು ತೆರೆದಿಟ್ಟರು.
ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್. ಅಧ್ಯಕ್ಷತೆ ವಹಿಸಿದರು.ಇದೇ ಸಂದರ್ಭದಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ಧೀರಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೊಸಂಗಡಿ ಸ್ವಾಗತಿಸಿದರು. ಶ್ರೀಧರ ಏತಡ್ಕ ವಂದಿಸಿದರು. ಡಾ| ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರ್ವಹಿಸಿದರು.ಶ್ರದ್ಧಾ ಭಟ್ ನಾಯರ್ಪಳ್ಳ ಪ್ರಾರ್ಥನೆ ಹಾಡಿದರು.
ಶಾಸ್ತ್ರ, ಸಾಹಿತ್ಯ ಬೇರೆಯಲ್ಲ
ಪರಂಪರೆಯ ಬಗೆಗಿನ ಶ್ರದ್ಧೆ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಓದು, ಅಧ್ಯಯನದ ಕುರಿತಾಗಿನ ಕ್ರಮಬದ್ಧತೆ ಇತ್ತೀಚೆಗೆ ಕಡಿಮೆಯಾಗಿದೆ. ಸ್ವಾತಂತ್ರ್ಯ ಎಂಬುದು ಅಭಿವೃದ್ಧಿಗೆ ಪೂರಕವಾಗಿರ ಬೇಕಾದುದು ಅನಿವಾರ್ಯ. ಆದರೆ ಇತ್ತೀಚೆಗಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದಾಗ ಸ್ವಾತಂತ್ರ್ಯದ ಅರ್ಥವನ್ನು ಸರಿಯಾಗಿ ಗ್ರಹಿಸದ ಮನೋಸ್ಥಿತಿಗಳನ್ನು ಕಾಣುತ್ತೇವೆ. ಶಾಸ್ತ್ರ ಮತ್ತು ಸಾಹಿತ್ಯ ಬೇರೆ ಬೇರೆಯಲ್ಲ ಎಂಬುದನ್ನು ತಿಳಿದು ನಡೆಯಬಲ್ಲ ಮನಸುಗಳು ಇಂದು ಅನಿವಾರ್ಯ.
– ಡಾ| ಪಾದೆಕಲ್ಲು ವಿಷ್ಣು ಭಟ್
ಹಿರಿಯ ವಿದ್ವಾಂಸ