“ಕೃಷ್ಣಾವತಾರ’ ಎಂಬ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ, ಇದುಪ್ರಕೃತಿ, ಪರಿಸರ ಉಳಿಸಲು ಹೊಸ ಅವತಾರ ಎತ್ತಿದವನ ಕಥೆ. ವಿ.ನಾಗೇಂದ್ರ ಪ್ರಸಾದ್ ಕೃಷ್ಣಾವತಾರ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಸಿರಿ.ವೈ.ಎಸ್.ಆರ್. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಪವನ್ ರಾವ್ ಸಂಭಾಷಣೆ ಬರೆದಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಕೃಷ್ಣ ಹೆಸರಿನ ಅತಿಥಿಗಳ ಕೈಯಿಂದಲೇ ಬಿಡುಗಡೆ ಮಾಡಿಸಲಾಯಿತು.
ಮಾಯಾಬಜಾರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಗುರುಪ್ರಸಾದ್ ಕೆ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶುಭ ರûಾ, ತ್ರಿವೇಣಿ ರಾಜ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಾಗೇಂದ್ರ ಪ್ರಸಾದ್, “ನಿರ್ದೇಶಕರು ಸಿನಿಮಾ ಪ್ರೀತಿ ಇರುವಂಥ ನಿರ್ಮಾಪಕರನ್ನು ಒಪ್ಪಿಸಿ ಈ ಚಿತ್ರ ಮಾಡಿದ್ದಾರೆ. ನನಗೊಂದು ಒಳ್ಳೇ ಪಾತ್ರವನ್ನೂ ಕೊಟ್ಟಿದ್ದಾರೆ. ಈ ಕಥೆಯ ಆರಂಭ, ಅಂತ್ಯ ಎರಡೂ ನನ್ನಿಂದಲೇ ಆಗುತ್ತದೆ. ಒಟ್ಟು 15 ದಿನಗಳವರೆಗೆ ನಾನು ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ ಈ ಸಿನಿಮಾ ಮೂಲಕ ನಿರ್ದೇಶಕರು ಏನೋ ಒಂದು ಹೊಸದನ್ನು ಹೇಳಲು ಹೊರಟಿದ್ದಾರೆ. ಪರಿಸರ, ಪ್ರಕೃತಿಯ ಬಗ್ಗೆ ಒಂದೊಳ್ಳೇ ಕಥೆ ಇಟ್ಟುಕೊಂಡು ಚಿತ್ರ ನಿರ್ದೇಶನ ಮಾಡಿದ್ದಾರೆ’ ಎಂದು ಹೇಳಿದರು.
ನಾಯಕಿ ಶುಭ ರಕ್ಷ ಮಾತನಾಡಿ, “ಚಿತ್ರದಲ್ಲಿ ನಾನು ಚಂದನ ಎಂಬ ಶಬ್ಧ ಸಂಶೋಧನೆಯ ಬಗ್ಗೆ ಅಭಿರುಚಿ ಇರುವ ಯುವತಿಯಾಗಿ ನಟಿಸಿದ್ದೇನೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದೆ. ಚಿತ್ರದಲ್ಲಿ ರಾತ್ರಿಯಿಡೀ ಸ್ಮಶಾನದಲ್ಲಿ ಆಲದಮರದ ಮೇಲೆ ಕೂತಿದ್ದೇನೆ. ಜೀವಂತ ಹಾವನ್ನು ನನ್ನ ಪಕ್ಕದಲ್ಲಿಟ್ಟು ಚಿತ್ರೀಕರಿಸಿದ್ದರೆ’ ಎಂದು ತನ್ನ ಅನುಭವವನ್ನು ಹೇಳಿಕೊಂಡರು. ಮತ್ತೂಬ್ಬ ನಟಿ ತ್ರಿವೇಣಿರಾಜ್ ಕೂಡಾ ತಮ್ಮ ಅನುಭವ ಹಂಚಿಕೊಂಡರು.
“ಈ ಸಿನಿಮಾ ಆಗಲು ನಿರ್ಮಾಪಕರ ಪತ್ನಿ ಅವರೇ ಕಾರಣ.ನಗೊಂದು ಭವಿಷ್ಯ ರೂಪಿಸಲು ನಿರ್ಮಾಪಕರು ತುಂಬಾ ಹಣ ಹಾಕಿದ್ದಾರೆ. ನಾವೆಲ್ಲ ಪ್ರಾಣಿ, ಪಕ್ಷಿ ಸಂಕುಲದ ಮಧ್ಯೆ ಬದುಕುತ್ತಿದ್ದೇವೆ. ಅವುಗಳಿಗೆ ನಾವು ಏನೆಲ್ಲ ತೊಂದರೆ ಕೊಡುತ್ತಿದ್ದೇವೆ, ನಾವು ಮಾಡುವ ಒಂದು ಸಣ್ಣ ತಪ್ಪಿನಿಂದ ಮುಂದೆ ಯಾವೆಲ್ಲ ತೊಂದರೆ ಅನುಭವಿಸ ಬೇಕಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ನಡೆಸುವ ಹುಚ್ಚಾಟ, ಅದರಿಂದ ಏನೇನೆಲ್ಲ ತೊಂದರೆ ಗಳುಂಟಾಗುತ್ತವೆ ಎಂದು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುವುದು ನಿರ್ದೇಶಕರ ಮಾತು. ನಿರ್ಮಾಪಕ ಗುರುಪ್ರಸಾದ್ ಕೂಡಾ ಮಾತನಾಡಿದರು.